ದರ್ಶನ್ ಅವರನ್ನು ಭೇಟಿಯಾಗಿದ್ದೆ ಎಂದಿದ್ದ ಚಿತ್ರದುರ್ಗದ ಸಿದ್ದರೂಢಗೆ ಪೊಲೀಸ್ ನೋಟೀಸ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಪರ ವಕೀಲರು ಇನ್ನು ಕೂಡ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಿಲ್ಲ. ಪೊಲೀಸರು ಚಾರ್ಜ್ ಶೀಟ್ ಹಾಕುವುದನ್ನೇ ಕಾಯುತ್ತಿದ್ದಾರೆ. ಇದರ ನಡುವೆ ದರ್ಶನ್ ಅವರನ್ನು ಭೇಟಿಯಾಗಲು ಆತ್ಮೀಯರು, ಕುಟುಂಬಸ್ಥರು ತೆರಳುತ್ತಿರುತ್ತಾರೆ. ಇತ್ತಿಚೆಗಷ್ಟೇ ನಾನು ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿಯಾಗಿ ಬಂದೆ ಎಂದು ಚಿತ್ರದುರ್ಗ ಮುಇಲದ ಸಿದ್ದರೂಢ ಎಂಬ ವ್ಯಕ್ತಿ ಸಂದರ್ಶನದಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಈ ಸಂಬಂಧ ಪೊಲೀಸರು ನೋಟೀಸ್ ನೀಡಿದ್ದಾರೆ.
ಕೊಲೆ ಕೇಸ್ ಒಂದರಲ್ಲಿ ಸಿದ್ದರೂಢ ಚಿತ್ರದುರ್ಗ, ಬಳ್ಳಾರಿ ಹಾಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾಗಿ ಬಂದಿದ್ದರು. ಬಂದ ಬಳಿಕ ಕೆಲವೊಂದು ಯೂಟ್ಯೂಬ್ ಗಳಿಗೆ ಸಂದರ್ಶನ ನೀಡಿದ್ದಾರೆ. ಆ ಸಂದರ್ಶನಗಳಲ್ಲಿ ನಾನು ದರ್ಶನ್ ಅವರನ್ನು ಭೇಟಿಯಾಗಿದ್ದೆ. ಅವರಿಗೆ ರೇಣುಕಾಸ್ವಾಮಿ ಕುಟುಂಸ್ಥರ ಬಗ್ಗೆ ಪಶ್ಚಾತ್ತಾಪವಿದೆ. ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಕಣ್ಣೀರು ಹಾಕಿದರು. ಪುಸ್ತಕಗಳನ್ನು ಓದುತ್ತಿದ್ದಾರೆ ಎಂದೆಲ್ಲಾ ಹೇಳಿಕೊಂಡಿದ್ದರು.
ಈ ವಿಡಿಯೋ ಪೊಲೀಸ್ ಮೇಲಾಧಿಕಾರಿಗಳ ಗಮನಕ್ಕೂ ಬಂದಿದೆ. ದರ್ಶನ್ ಅವರಿಗೆ ವಿಶೇಷ ಸೆಲ್ ನೀಡಲಾಗಿದೆ. ವಿಐಪಿ ಸೆಲ್ ನೊಳಗಿದ್ದ ದರ್ಶನ್ ಅವರನ್ನು ಭೇಟಿಯಾಗಲು ಸಹಕೈದಿಗಳಿಗೆ ಅವಕಾಶ ನೀಡಲಾಗಿದೆಯೇ ಎಂದು ಜೈಲು ಸಿಬ್ಬಂದಿಯನ್ನು ಮೇಲಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸುರವ ಸಿಬ್ಬಂದಿಗಳು ಯಾರಿಗೂ ಒಳಗೆ ಬಿಟ್ಟಿಲ್ಲ ಎಂದಿದ್ದಾರೆ. ಹೀಗಾಗಿ ಸಂದರ್ಶನಗಳಲ್ಲೆಲ್ಲಾ ನಾನು ಭೇಟಿಯಾಗಿ ಬಂದೆ ಎಂದು ಹೇಳಿಕೊಳ್ಳುತ್ತಿರುವ ಸಿದ್ದರೂಢಗೆ ಇದೀಗ ಪೊಲೀಸ್ ನೋಟೀಸ್ ನೀಡಿದ್ದಾರೆ. ದರ್ಶನ್ ಅವರನ್ನು ಯಾರೇ ಭೇಟಿಯಾಗಲು ಬಂದರು, ಕುಟುಂಬಸ್ಥರಿಗೆ, ಆತ್ಮೀಯರಿಗೆ ಮಾತ್ರ ಅವಕಾಶ ಸಿಗುತ್ತಿದೆ.