ಪಿಂಜಾರ ಜನಾಂಗ ಸಂಘಟಿತರಾಗಬೇಕಿದೆ : ಹೆಚ್.ಜಲೀಲ್‍ಸಾಬ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.24 : ಅತ್ಯಂತ ಹಿಂದುಳಿದ ಶೋಚನೀಯ ಸ್ಥಿತಿಯಲ್ಲಿರುವ ಪಿಂಜಾರ ಜನಾಂಗ ವೈಯಕ್ತಿಕ ದ್ವೇಷ, ಅಸೂಯೆಯನ್ನು ಬದಿಗಿಟ್ಟು ಸಂಘಟಿತರಾಗಬೇಕಿದೆ ಎಂದು ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ನಿಕಟಪೂರ್ವ ಅಧ್ಯಕ್ಷ ಹೆಚ್.ಜಲೀಲ್‍ಸಾಬ್ ಕರೆ ನೀಡಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಬಲವಾದ ಬೇರೆ ಜಾತಿಗಳು ಸಂಘಟನೆಯ ಮೂಲಕ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿವೆ. ನಮ್ಮಲ್ಲಿರುವ ಸಣ್ಣಪುಟ್ಟ ಲೋಪಗಳಿಗಾಗಿ ಸೌಲತ್ತುಗಳಿಂದ ವಂಚಿತರಾಗುತ್ತಿದ್ದೇವೆ. ಹೊಸ ಪೀಳಿಗೆಯನ್ನು ಮುಂದಕ್ಕೆ ತರುವ ಕೆಲಸವಾಗಬೇಕು. ಇಲ್ಲಿಯವರೆಗೂ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿಯಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲು ಆಗುತ್ತಿಲ್ಲ. ಪಿಂಜಾರ ಎಂಬ ಕಾರಣಕ್ಕಾಗಿ ಸರ್ಕಾರವು ನಮ್ಮನ್ನು ನಿರ್ಲಕ್ಷೆಯಿಂದ ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಿಂಜಾರ ಸಂಘಟನೆಯಿದೆ ಎನ್ನುವುದು ಇನ್ನು ಕೆಲವರಿಗೆ ಗೊತ್ತೆ ಇಲ್ಲ. ಸಂಘಟನೆಯಿಂದ ಏನು ಪ್ರಯೋಜನ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಯಾವುದೇ ಸ್ಥಾನ ಮುಖ್ಯವಲ್ಲ. ಸಮಾಜದ ಹಿತಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡೋಣ ಎಂದು ಪಿಂಜಾರ ಜನಾಂಗಕ್ಕೆ ಹೇಳಿದರು.
ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಇಮಾಂಸಾಬ್, ಕಾರ್ಯದರ್ಶಿ ಮಹಮದ್ ಮುಜಾಹಿದ್, ಉಪಾಧ್ಯಕ್ಷೆ ಶಕೀನಾಭಿ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಸುಬಾನ್‍ಸಾಬ್, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಶೇಖ್‍ಬುಡೇನ್, ಟಿ.ಶಫಿವುಲ್ಲಾ ವೇದಿಕೆಯಲ್ಲಿದ್ದರು.
ಪಿಂಜಾರ ಸಮಾಜದ ಹಾಜಿ ಆರ್.ದಾದಾಪೀರ್ ಇನ್ನು ಅನೇಕರು ಪದಗ್ರಹಣ ಸಮಾರಂಭದಲ್ಲಿ ಹಾಜರಿದ್ದರು.