ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ : ಕಾರಿಗೆ ಹಗ್ಗ ಕಟ್ಟಿ ಎಳೆದು ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್.20 : ರಾಜ್ಯ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿರುವುದನ್ನು ಖಂಡಿಸಿ ಬಿಜೆಪಿಯಿಂದ ಗಾಂಧಿ ವೃತ್ತದಲ್ಲಿ ಗುರುವಾರ ಮಾನವ ಸರಪಳಿ ನಿರ್ಮಿಸಿ ಕಾರಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿ ಧಿಕ್ಕಾರಗಳನ್ನು ಕೂಗಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು ವರ್ಷದಲ್ಲೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿರುವುದರಿಂದ ಬಸ್, ಟ್ಯಾಕ್ಸಿ, ಹಾಗೂ ತರಕಾರಿ ದರ ಜಾಸ್ತಿಯಾಗಿದೆ. ಕೂಡಲೆ ಬೆಲೆ ಇಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಿರುವುದನ್ನು ನಾವು ಸ್ವಾಗತಿಸುತ್ತೇವೆ. ಇದರ ಬೆನ್ನ ಹಿಂದೆಯೇ ಬಸ್ ಟಿಕೆಟ್ ದರ ಏರಿಸಿ ಬಡವರಿಗೆ ಹೊರೆ ಹೇರಿರುವ ಕಾಂಗ್ರೆಸ್ ಸರ್ಕಾರ ರೈತರಿಗೆ ಬೀಜ, ರಸಗೊಬ್ಬರ ಬೆಲೆ ಏರಿಸಿದೆ. 960 ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿಯಿಲ್ಲ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಐದು ಉಚಿತ ಗ್ಯಾರೆಂಟಿಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆಪಾದಿಸಿದರು.
ಹುಬ್ಬಳ್ಳಿಯಲ್ಲಿ ಹಾಡು ಹಗಲೆ ವಿದ್ಯಾರ್ಥಿನಿ ನೇಹ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದೇ ಇದಕ್ಕೆ ಕಾರಣ. ಪರಿಶಿಷ್ಠ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರವಾಗಿದೆ. ಒಟ್ಟಾರೆ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ಜೂ.28 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದರು.
ಬಿಜೆಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಕೆ.ಸಂಪತ್‍ಕುಮಾರ್, ರೈತ ಮೋರ್ಚ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ನಂದಿ ನಾಗರಾಜ್, ಸೀತಾರಾಮರೆಡ್ಡಿ, ವೀರೇಶ್ ಜಾಲಿಕಟ್ಟೆ, ಕಿರಣ್, ಪರಶುರಾಂ, ಶಂಭು, ನಗರಸಭಾ ಸದಸ್ಯರುಗಳಾದ ಹರೀಶ್, ಸುರೇಶ್, ಶ್ರೀನಿವಾಸ್, ಅನುರಾಧ, ರವಿ, ಕೃಷ್ಣ, ಅರುಣ, ಕಾಂಚನ, ಶಾಂತಮ್ಮ, ಶೀಲ, ರಜಿನಿ, ವೀಣ, ಗಾಯತ್ರಿ, ಕವಿತ, ರಾಜೇಶ್ವರಿ, ಚಂದ್ರಕಲ, ಪಲ್ಲವಿ, ಪ್ರಸನ್ನ, ಅಪ್ಪು ಕೋಟೆ ನಾಡು ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಕುಮಾರ್, ಗೌರವಾಧ್ಯಕ್ಷ ಮೋಹನ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.