ಮುಖ್ಯಮಂತ್ರಿ ವಿರುದ್ದ ಪ್ರಾಸಿಕ್ಯೂಷನ್‍ಗೆ ಅನುಮತಿ : ರಾಜ್ಯಪಾಲರ ವಿರುದ್ದ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 19 : ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅವಕಾಶ ನೀಡಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‍ನಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ನಂತರ ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಯಾವುದೇ ತಪ್ಪಿಲ್ಲದಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮುಡಾ ಹಗರಣದಲ್ಲಿ ಸಿಲುಕಿಸಿ ಬಿಜೆಪಿ ಯವರು ಮಸಿ ಬಳಿಯುವ ಕುತಂತ್ರ ಮಾಡುತ್ತಿರುವುದು ಖಂಡನೀಯ. 1998 ರಲ್ಲಿ ಮುಡಾದಲ್ಲಿ ನಿವೇಶನ ಪಡೆದಿದ್ದಾರೆನ್ನುವುದನ್ನು ಈಗ ಕೆದಕುತ್ತಿರುವ ಬಿಜೆಪಿ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸುವ ಕೃತ್ಯ ನಡೆಸುತ್ತಿದೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸೀಟು ಗೆದ್ದಿರುವುದು ಕೋಮುವಾದಿ ಬಿಜೆಪಿ.ಗೆ ಮುಖಭಂಗವಾಗಿರುವುದರಿಂದ ಇಂತಹ ಕ್ಯಾತೆ ಮಾಡುತ್ತಿದೆ. ಸತ್ಯ ಎಂದಿಗೂ ಸೋಲಲ್ಲ. ಇಡಿ ಸಚಿವ ಸಂಪುಟ ಸಿದ್ದರಾಮಯ್ಯನವರ ಬೆನ್ನಿಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದರು.
ಎಂತಹ ಹೋರಾಟ ತ್ಯಾಗಕ್ಕೂ ಸಿದ್ದರಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಿನಾಮೆ ನೀಡುವ ಅಗತ್ಯವಿಲ್ಲ ಎಂದು ಬಿಜಪಿ. ಮತ್ತು ಜೆಡಿಎಸ್.ಪಕ್ಷಗಳಿಗೆ ಡಿ.ಸುಧಾಕರ್ ಎಚ್ಚರಿಸಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಬಿಜೆಪಿ. ಏಜೆಂಟರಂತೆ ವರ್ತಿಸುತ್ತಿರುವ ರಾಜ್ಯಪಾಲರು ಶೋಷಿತರ ನ್ಯಾಯದ ಪರವಾಗಿರುವ ಸಿದ್ದರಾಮಯ್ಯನವರಿಗೆ ಪ್ರಾಸಿಕ್ಯೂಷನ್‍ಗೆ ಅವಕಾಶ ನೀಡಿರುವುದು ಸಂವಿಧಾನದಡಿ ಪ್ರಜಾಪ್ರಭುತ್ವಕ್ಕೆ ವಿರುದ್ದವಾಗಿದೆ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ರಾಜ್ಯಪಾಲರು ಅನುಮತಿ ನೀಡಿರುವುದನ್ನು ಹಿಂದಕ್ಕೆ ಪಡೆಯಬೇಕು. ರಾಜ್ಯದಲ್ಲಿ ನಮ್ಮ ಪಕ್ಷ ಆಡಳಿತದಲ್ಲಿದೆ. ಯಾರು ತಾಳ್ಮೆ ಕಳೆದುಕೊಳ್ಳುವುದು ಬೇಡ. ಹಿಂಸಾತ್ಮಕ ಮಾರ್ಗದಲ್ಲಿ ನಡೆಯಬಾರದು. ಕೇಂದ್ರ ಬಿಜೆಪಿ. ಸರ್ಕಾರ ಇಡಿ, ಸಿಬಿಐ. ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಬಿಜೆಪಿ. ಅಕ್ರಮವನ್ನು ಯಾರು ಪ್ರಶ್ನಿಸುತ್ತಾರೋ ಅವರ ಮೇಲೆ ಧಾಳಿ ನಡೆಸುವ ಪರಿಪಾಠ ಬೆಳೆಸಿಕೊಂಡಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಹೆದರುವುದಿಲ್ಲ ಎಂದು ಗುಡುಗಿದರು.
ರಾಜ್ಯದಲ್ಲಿರುವ ಜನಪರ ಆಡಳಿತಕ್ಕೆ ಬಿಜೆಪಿ. ಮಸಿ ಬಳಿಯುತ್ತಿದೆ. ನಲವತ್ತು ಪರ್ಸೆಂಟ್ ಭ್ರಷ್ಠಾಚಾರವೆಸಗಿ ಜನರಿಂದ ಛೀ ಥೂ ಎನ್ನಿಸಿಕೊಂಡಿರುವ ಬಿಜೆಪಿ.ಯವರು ವಾಮ ಮಾರ್ಗದಿಂದ ಅಧಿಕಾರ ಹಿಡಿಯುವುದರಲ್ಲಿ ನಿಸ್ಸೀಮರು. ಮುಡಾದಲ್ಲಿ ಯಾವುದೇ ಅಕ್ರಮ ಎಸಗಿಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎದೆಗುಂದುವುದು ಬೇಡ. ಸಿ.ಎಂ.ಪತ್ನಿಗೆ ಅವರ ಸಹೋದರರು ಉಡುಗೊರೆಯಾಗಿ ನೀಡಿರುವ ಜಮೀನಿನಲ್ಲಿ ಪ್ರಾಧಿಕಾರದ ನಿಯಮದಂತೆ ನಿವೇಶನ ಪಡೆದುಕೊಂಡಿದ್ದಾರೆ. ಕಪ್ಪುಚುಕ್ಕೆ ಇಲ್ಲದೆ ದಕ್ಷ ಆಡಳಿತ ನಡೆಸುತ್ತಿರುವುದನ್ನು ಅರಗಿಸಿಕೊಳ್ಳಲು ಆಗದ ಬಿಜೆಪಿ.ಯವರು ಇಲ್ಲ ಸಲ್ಲದ ಆಪಾದನೆ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದರು.
ಶಾಸಕರುಗಳಾದ ಬಿ.ಜಿ.ಗೋವಿಂದಪ್ಪ, ಎನ್.ವೈ.ಗೋಪಾಲಕೃಷ್ಣ, ಟಿ.ರಘುಮೂರ್ತಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಆರ್.ಕೆ.ಸರ್ದಾರ್
ಬಿ.ಟಿ.ಜಗದೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ,
ಲೋಕೇಶ್‍ನಾಯ್ಕ, ಎಸ್ಸಿ. ಸೆಲ್ ಅಧ್ಯಕ್ಷ ಜಯಣ್ಣ, ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ಬಾಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ ಉಪಾಧ್ಯಕ್ಷೆ ಪವಿತ್ರ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಮಂಜಪ್ಪ, ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ್
ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೋಕ್ಷರುದ್ರಸ್ವಾಮಿ, ಮುನಿರಾ ಎ.ಮಕಾಂದಾರ್, ಕಾರ್ಯದರ್ಶಿ ರುದ್ರಾಣಿ ಗಂಗಾಧರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ನಜ್ಮತಾಜ್, ಡಿ.ಟಿ.ವೆಂಕಟೇಶ್, ಎಸ್.ಎನ್.ರವಿಕುಮಾರ್. ಸೈಯದ್ ಖುದ್ದೂಸ್, ಅಲ್ಲಾಭಕ್ಷಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಸೇರಿದಂತೆ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.