ಮುಖ್ಯಮಂತ್ರಿ ವಿರುದ್ದ ಪ್ರಾಸಿಕ್ಯೂಷನ್‍ಗೆ ಅನುಮತಿ : ರಾಜ್ಯಪಾಲರನ್ನು ವಜಾ ಮಾಡುವಂತೆ ಚಿತ್ರದುರ್ಗ ಜಿಲ್ಲಾ ವಕೀಲರ ಬಳಗ ಒತ್ತಾಯ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 17 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ತೀವ್ರ ಖಂಡನೀಯ. ಸಂವಿಧಾನ ಬಾಹಿರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸುಮಾರು 30-40 ವರ್ಷಗಳ ಹಳೆಯ ಸಿವಿಲ್ ಸ್ವರೂಪದ ಪ್ರಕ್ರಿಯೆಗೆ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ದುರುದ್ದೇಶ ಪೂರ್ವಕವಾಗಿ ಪ್ರಾಸುಕ್ಯೂಷನ್‍ಗೆ ಅನುಮತಿ ನೀಡಿರುವ ರಾಜ್ಯಪಾಲರನ್ನು ವಜಾ ಮಾಡಲು ಚಿತ್ರದುರ್ಗ ಜಿಲ್ಲಾ ವಕೀಲರ ಬಳಗವು ಒತ್ತಾಯಿಸಿದೆ.
ಚಿತ್ರದುರ್ಗದಲ್ಲಿ ಇದರ ಬಗ್ಗೆ ಪ್ರತಿಭಟನೆಯನ್ನು ನಡೆಸಿದ ಚಿತ್ರದುರ್ಗ ಜಿಲ್ಲಾ ವಕೀಲರ ಬಳಗದ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಬಳಿ ರಾಜ್ಯಪಾಲರ ವಿರುದ್ದ ಘೋಷಣೆಗಳನ್ನು ಕೂಗಿದರು. ರಾಜ್ಯಭವನ ರಾಜಕೀಯ ಭವನವಾಗಿ ಪರಿವರ್ತನೆಗೊಂಡು ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಆಗಿರುವುದು ಸಂವಿಧಾನದ ಕಗ್ಗೊಲೆ. ಒಬ್ಬ ಹಿಂದುಳಿದ ವರ್ಗದ ನಾಯಕ ಜನಪರ ಆಡಳಿತ ನಡೆಸುತ್ತಿರುವುದನ್ನು ಅರಗಿಸಿಕೊಳ್ಳಲಾಗದೆ ಕೇಂದ್ರ ಬಿಜೆಪಿ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಭವನವನ್ನು ಉಪಯೋಗಿಸಿಕೊಂಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.
ಕರ್ನಾಟಕ ಸರ್ಕಾರವು ಮೂಡಾಹಗರಣವನ್ನು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುತ್ತಿರುವಾಗಲೇ ರಾಜ್ಯಪಾಲರು ತರಾತುರಿಯಲ್ಲಿ ಕಾನೂನು ಬಾಹಿರವಾಗಿ ಪ್ರಾಸುಕ್ಯೂಷನ್‍ಗೆ ಅನುಮತಿ ನೀಡಿರುವುದರಿಂದ ಕೂಡಲೇ ಅವರನ್ನು ವಜಾ ಮಾಡಬೇಕು.ಕರ್ನಾಟಕದ ರಾಜ್ಯಪಾಲರು ಕರ್ನಾಟಕದ ಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸಲು ಕಿರುಕುಳ ನೀಡುತ್ತಿದ್ದಾರೆ. ಪಾಲರು ಮತ್ತು ಕೇಂದ್ರ ಸರ್ಕಾರ ರಾಜ್ಯ ಭವನವನ್ನು ಬಿಜೆಪಿಯ ಸ್ಥಳೀಯ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಸಂವಿಧಾನಿಕ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮತ್ತು ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಸಂವಿಧಾನ ಬಾಹಿರ ಕೃತ್ಯದಲ್ಲಿ ತೊಡಗಿರುತ್ತದೆ. ರಾಜ್ಯಪಾಲರ ಮುಂದೆ ಪ್ರಾಸುಕ್ಯೂಷನ್‍ಗಾಗಿ ನೂರಾರು ದೂರುಗಳು ಬಾಕಿ ಇದ್ದರು, ಮುಖ್ಯಮಂತ್ರಿಗಳ ವಿರುದ್ಧ ತರಾತುರಿಯಲ್ಲಿ ಅನುಮತಿ ನೀಡಿರುವುದು ಸಂವಿಧಾನ ಬಾಹಿರ ಎಂದು ದೂರಿದರು.
ಕೇಂದ್ರ ಸರ್ಕಾರವು ರಾಜ್ಯದಲ್ಲಿನ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳುಗೆಡವಿ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ಮಾಡುತ್ತಿದೆ. ಕರ್ನಾಟಕ ರಾಜ್ಯಪಾಲರ ಸಂವಿಧಾನ ಬಾಹಿರ ನಡೆಯ ಹಿಂದಿರುವ ಒಳಸಂಚು ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಅವರಿಗೆ ಕಾನೂನು ಬಾಹಿರವಾದ ಸಲಹೆ ನೀಡಿದವರ ವಿರುದ್ಧ ಮತ್ತು ಪ್ರಾಸುಕ್ಯೂಷನ್‍ಗೆ ಅನುಮತಿ ನೀಡಲು ಸಹಕರಿಸಿರುವವರ ವಿರುದ್ಧ ಸುಪ್ರಿಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲು ಒತ್ತಾಯಿಸಲಾಯಿತು.
ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವ ಅಂಶವು ಮೇಲ್ನೋಟಕ್ಕೆ ಕಾಣುತ್ತಿರುವುದರಿಂದ ಈ ಹಿಂದೆಯು ಸಹ ಕೇಂದ್ರ ಸರ್ಕಾರವು ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕೆಲ ಸರ್ಕಾರಗಳನ್ನು ಅಸ್ಥಿರಗೊಳಿಸಿರುವುದು ಇತಿಹಾಸದ ಪುಟಗಳಿಂದ ತಿಳಿಯಬಹುದು. ಸದರಿ ಪ್ರಕರಣ ಸುಮಾರು 30-40 ವರ್ಷಗಳ ಸಿವಿಲ್ ಸ್ವರೂಪದ ದೂರಾಗಿದ್ದು, ಈ ದೂರನ್ನು ಇಟ್ಟುಕೊಂಡು ಒಂದು ಚುನಾಯಿತ ಸರ್ಕಾರದ ಮೇಲೆ ದಬ್ಬಾಳಿಕೆ ನಡೆಸುವ ರಾಜ್ಯಪಾಲರನ್ನು ಈ ಕೂಡಲೇ ವಜಾ ಮಾಡುವಂತೆ ಚಿತ್ರದುರ್ಗ ಜಿಲ್ಲಾ ವಕೀಲರ ಬಳಗವು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದೆ.
ಚಿತ್ರದುರ್ಗ ಜಿಲ್ಲಾ ವಕೀಲರ ಬಳಗದ ಸಂಚಾಲಕರಾದ ಶಿವುಯಾದವ್, ತಿಮ್ಮಣ್ಣ, ರವಿಂದ್ರ, ವಿಜಯ ಕುಮಾರ್, ಜೀವನ್, ತಿಪ್ಪೇಸ್ವಾಮಿ, ಜಗನ್ನಾಥ್, ಸೇರಿದಂತೆ ಇತರರು ಭಾಗವಹಿಸಿದ್ದರು.