For the best experience, open
https://m.suddione.com
on your mobile browser.
Advertisement

85 ವರ್ಷ ಮೇಲ್ಪಟ್ಟವರು, ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

04:59 PM Mar 17, 2024 IST | suddionenews
85 ವರ್ಷ ಮೇಲ್ಪಟ್ಟವರು  ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ   ಜಿಲ್ಲಾಧಿಕಾರಿ ಟಿ ವೆಂಕಟೇಶ್ ಸೂಚನೆ
Advertisement

ಚಿತ್ರದುರ್ಗ. ಮಾ.17:  85 ವರ್ಷ ಮೇಲ್ಪಟ್ಟವರು, ವಿಕಲಚೇತನರು ಹಾಗೂ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತರಾದವರಿಗೆ ಮತದಾನದಿಂದ ವಂಚಿತರಾಗದಂತೆ ಚುನಾವಣಾ ಆಯೋಗ ಇವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಿದ್ದು, ಅರ್ಹರೆಲ್ಲರಿಗೂ ಶೇ.100ರಷ್ಟು 12 ಡಿ ಫಾರಂ ವಿತರಣೆ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

Advertisement
Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಲೋಕಸಭಾ ಚುನಾವಣೆ-2024ರ ಸಂಬಂಧ ವಿಧಾನಸಭಾ ಕ್ಷೇತ್ರವಾರು ಪೋಸ್ಟಲ್ ಬ್ಯಾಲೆಟ್ ಹಾಗೂ ಎವಿಇಎಸ್‍ಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
12-ಡಿ ಫಾರಂ ವಿತರಣೆ ಮಾಡಿದ ನಂತರ ಅವರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲೇಬೇಕು ಎಂಬುವುದು ಕಡ್ಡಾಯವಲ್ಲ. ಇದು ಅವರಿಗೆ ನೀಡುವ ಒಂದು ಸೌಲಭ್ಯವಾಗಿದೆ. 12 ಡಿ ಫಾರಂಗೆ ಒಪ್ಪಿಗೆ ನೀಡಿ,  ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡುತ್ತೇನೆ. ಪೋಸ್ಟಲ್ ಬ್ಯಾಲೆಟ್ ನೀಡಿ ಎಂದು ವಾಪಾಸ್ಸು ಕೊಟ್ಟಾಗ ಮಾತ್ರ ಅದು ಪೋಸ್ಟಲ್ ಬ್ಯಾಲೆಟ್ ಮತದಾನಕ್ಕೆ ಒಪ್ಪಿಗೆ ಸೂಚಿಸಿದಂತಾಗುತ್ತದೆ ಎಂದು ಹೇಳಿದರು.

Advertisement

12 ಡಿ ವಿತರಣೆ ಹಾಗೂ  ಸಂಗ್ರಹಕ್ಕೆ ಸಂಬಂಧಪಟ್ಟ ತಂಡದವರು 85 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರ ಮನೆಗೆಳಿಗೆ ಖುದ್ದಾಗಿ ನೀಡಬೇಕು. ಇದಕ್ಕೆ ಸಂಬಂಧಪಟ್ಟಂತೆ ಸ್ವೀಕೃತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಾಕೀತು ಮಾಡಿದರು.

Advertisement
Advertisement

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ವಿಧಾನಸಭಾ ಕ್ಷೇತ್ರವಾರು ಮಾರ್ಕಿಂಗ್ ಆಗಿರುವ 85 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರ ಮಾಹಿತಿ ಲಭ್ಯವಿದೆ.  ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ತೊಂದರೆ ಇರುವಂತಹ ವಿಶೇಷಚೇತನರು ಹಾಗೂ 85 ವರ್ಷ ಮೇಲ್ಪಟ್ಟವರಿಗೆ ಅವರ ಮನೆ ಮನೆಗೆ ತೆರಳಿ ಮತದಾನ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದ ನಿಗಧಿತ ನಮೂನೆಯನ್ನು ಆಯಾ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ತಲುಪಿಸಬೇಕು.

ಇದರ ಜೊತೆಗೆ ಚುನಾವಣಾ ಸಂದರ್ಭದಲ್ಲಿ ಅಗತ್ಯ ಸೇವೆಯಲ್ಲಿ ಕರ್ತವ್ಯ ನಿರತವಾಗಿರುವ ವಿವಿಧ ಕ್ಷೇತ್ರಗಳ ಅಧಿಕಾರಿ, ಸಿಬ್ಬಂದಿಗಳು ಮತದಾನದಿಂದ ವಂಚಿತರಾಗದಂತೆ ಚುನಾವಣಾ ಆಯೋಗ ಪೋಸ್ಟಲ್ ಬ್ಯಾಲಟ್ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಈ ಹಿನ್ನಲೆಯಲ್ಲಿ ಅಗತ್ಯ ಸೇವೆಯಲ್ಲಿರುವ 13 ಇಲಾಖೆ/ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಮತದಾನದ ದಿನದಂದು, ಕರ್ತವ್ಯ ನಿರತರಾಗುವ ಕಾರಣ, ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಆಗದೇ ಇರುವವರ ಇಲಾಖೆ/ಕ್ಷೇತ್ರವಾರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ಅಗತ್ಯ ಸೇವೆಯಲ್ಲಿರುವವರಿಗೆ 12 ಡಿ ಫಾರಂ ವಿತರಣೆ ಮಾಡಬೇಕು. ಇದರ ಮಾಹಿತಿಯನ್ನು ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಎಲೆಕ್ಟ್ರೋ ಆಪ್‍ನಲ್ಲಿ ಅಪ್‍ಲೋಡ್ ಮಾಡಬೇಕು.  ಎಂದು ಹೇಳಿದ ಅವರು, ಮತದಾನದ ದಿನದಂದು ಮತ ಚಲಾಯಿಸಲು ಸಾಧ್ಯವಾಗದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮತದಾನ ದಿನದ ಬದಲಿಗೆ ಮತದಾನಕ್ಕೂ ಪೂರ್ವದಲ್ಲಿಯೇ ಫೆಸಿಲಿಟೇಶನ್ ಸೆಂಟರ್‍ನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement
Tags :
Advertisement