ಮಾತ್ರೆಯನ್ನು ಎಲ್ಲೆಂದರಲ್ಲಿ ಇಡುವ ಪೋಷಕರೆ ಎಚ್ಚರ : ಚಿತ್ರದುರ್ಗದಲ್ಲಿ ಮಾತ್ರೆ ಸೇವಿಸಿ 5 ವರ್ಷದ ಮಗು ಸಾವು...!
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 07 : ಮಕ್ಕಳಿಗೆ ಬುದ್ದಿ ಬರುವ ತನಕ ಎಷ್ಟು ಎಚ್ಚರದಿಂದ ನೋಡಿಕೊಂಡರು ಕಡಿಮೆಯೆ. ಅದಕ್ಕೆ ಮಕ್ಕಳ ಜವಾಬ್ದಾರಿ ವಿಚಾರದಲ್ಲಿ ಪೋಷಕರ ಪಾತ್ರ ದೊಡ್ಡದಿರುತ್ತದೆ. ಮಕ್ಕಳಿಗೆ ತಿನ್ನುವ ಪದಾರ್ಥ ಯಾವುದು, ಬೇಡದೆ ಇರುವ ಪದಾರ್ಥ ಯಾವುದು ಎಂಬುದು ಅಷ್ಟಾಗಿ ಗೊತ್ತಾಗಲ್ಲ. ಚಿಕ್ಕ ಮಕ್ಕಳು ಸಿಕ್ಕಿದ್ದೆಲ್ಲವನ್ನು ತಿನ್ನುವ ಪದಾರ್ಥವೆಂದೆ ಭಾವಿಸಿ, ತಿಂದು ಬಿಡುತ್ತಾರೆ. ಎಷ್ಟೋ ಮಕ್ಕಳು ನೆಲದ ಮೇಲೆ ಬಿಟ್ಟರೆ ಮಣ್ಣನ್ನು ತಿಂದು ಬಿಡುತ್ತವೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಐದು ವರ್ಷದ ಮಗುವೊಂದು ಮಾತ್ರೆ ತಿಂದು ಚಿತ್ರದುರ್ಗದಲ್ಲಿ ಸಾವನ್ನಪ್ಪಿದೆ.
ಚಾಕೊಲೇಟ್ ಎಂದು ಭಾವಿಸಿ ಮಗುವೊಂದು ಮಾತ್ರೆ ಸೇವಿಸಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತಾಲ್ಲೂಕಿನ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಮಗುವನ್ನು 5 ವರ್ಷದ ಋತ್ವಿಕ್ ಎಂದು ಗುರುತಿಸಲಾಗಿದೆ. ಮಗುವಿನ ತಂದೆ ತಿಪ್ಪೇಸ್ವಾಮಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಮನೆಯಲ್ಲಿ ಮಾತ್ರೆಗಳನ್ನು ಮನೆಯಲ್ಲಿಟ್ಟಿದ್ದಾರೆ.
ಮಾತ್ರೆಗಳನ್ನು ಚಾಕೋಲೆಟ್ ಎಂದು ಭಾವಿಸಿದ ಮಗು ಸೇವಿಸಿ ಮೃತಪಟ್ಟಿದೆ. ಮಗು ಚಾಕೊಲೇಟ್ ಸೇವಿಸಿದ ತಕ್ಷಣ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ದುರಾದೃಷ್ಟವಶಾತ್ ಮಗು ಅಸುನೀಗಿದೆ. ತುರುವನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.