ರೇಣುಕಾಸ್ವಾಮಿ ಮನೆಗೆ ಪರಮೇಶ್ವರ್ ಭೇಟಿ : ಈ ಪ್ರಕರಣ ಸಿಬಿಐಗೆ ವಹಿಸುವುದಿಲ್ಲ : ಗೃಹ ಸಚಿವ ಜಿ ಪರಮೇಶ್ವರ್
ಸುದ್ದಿಒನ್, ಚಿತ್ರದುರ್ಗ,ಜೂ.18 : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಮ್ಮ ಪೊಲೀಸರು ಯಾರ ಒತ್ತಡಕ್ಕೆ ಮಣಿಯದೆ, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ನಗರದ ತುರುವನೂರು ರಸ್ತೆಯ ಮೃತ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣ ಕುಟುಂಬದವರಿಗೆ ಅಷ್ಟೇ ಅಲ್ಲದೇ ನಮಗೂ ಸಹ ನೋವು ತಂದಿದೆ. ಸರ್ಕಾರ ಯಾವುದೇ ಮೂಲಜಿಲ್ಲದೆ, ಯಾರ ಒತ್ತಡಕ್ಕೆ ಮಣಿಯದೆ ತನಿಖೆ ಮಾಡುತ್ತಿದೆ. ಈಗಾಗಲೇ 17 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಗಂಡನನ್ನು ಕಳೆದುಕೊಂಡ ಅವರ ಪತ್ನಿ ಮದುವೆಯಾಗಿ ಒಂದು ವರ್ಷ ಆಗಿದೆ. ಅವರು ನಮಗೆ ಮನವಿ ಮಾಡಿದ್ದಾರೆ. ಅವರ ಮನವಿಗೆ ನ್ಯಾಯ ಒದಗಿಸಬೇಕು. ಜೀವನ ಸಾಗಿಸಲು ಸರ್ಕಾರಿ ನೌಕರಿ ಕೊಡಬೇಕು ಎಂಬುದು ಅವರ ಆಗ್ರಹವಾಗಿದೆ. ಈ ಕುರಿತಂತೆ ಸಿಎಂ ಬಳಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಈ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅದನ್ನು ಮಾಧ್ಯಮಗಳ ಮೂಲಕ ಕೇಳಿದ್ದೇನೆ. ಇದರಲ್ಲಿ ರಾಜಕೀಯ ಸಲ್ಲದು. ಎಲ್ಲದಕ್ಕೂ ರಾಜಕೀಯ ಬೆರೆಸುವುದು ಸರಿಯಲ್ಲ ಎಂದರು. ಕಾನೂನು ಇದೆ. ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.