ಪಿ.ಎಂ. ವಿಶ್ವಕರ್ಮ ಯೋಜನೆಯ ಸೌಲಭ್ಯ ಪಡೆಯಲು ಕೂಡಲೆ ತರಬೇತಿ ಪ್ರಾರಂಭಿಸಿ : ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಸೂಚನೆ
ಚಿತ್ರದುರ್ಗ ಜ. 08 : ವಿವಿಧ ವೃತ್ತಿ ಆಧಾರಿತ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ನೀಡಲು ಜಾರಿಗೊಂಡಿರುವ ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 98 ಸಾವಿರ ಜನ ನೊಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅನುಮೋದನೆಗೊಂಡ ಅರ್ಹರಿಗೆ ಕೂಡಲೆ ತರಬೇತಿ ನೀಡುವ ಕಾರ್ಯ ಪ್ರಾರಂಭವಾಗಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಸಂಸದ ಎ. ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾನಾ ವೃತ್ತಿಗಳಲ್ಲಿ ತೊಡಗಿರುವ ಶ್ರಮಿಕ ವರ್ಗದವರು, ಬಡಗಿ, ದೋಣಿ ತಯಾರಿಕೆ, ಶಸ್ತ್ರ ತಯಾರಿಕೆ, ಕಮ್ಮಾರಿಕೆ, ಕಲ್ಲುಕುಟಿಗ, ಬಟ್ಟೆ, ಚಾಪೆ-ಕಸಪರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಿಕೆ, ಕ್ಷೌರಿಕ ವೃತ್ತಿ, ಸುತ್ತಿಗೆ ಮತ್ತು ಉಪಕರಣಗಳ ತಯಾರಿಕೆ, ಹೂಮಾಲೆ ತಯಾರಿಕೆ, ಅಗಸರು (ದೋಬಿ) ಆಭರಣ ತಯಾರಿಕೆ, ಟೈಲರಿಂಗ್, ಕುಂಬಾರಿಕೆ, ಮೀನು ಬಲೆ ಹೆಣೆಯುವವರು, ಮೂರ್ತಿ ಮತ್ತು ಕಲ್ಲಿನ ಕೆತ್ತನೆ ಮಾಡುವ ಶಿಲ್ಪಿಗಳು, ಚಮ್ಮಾರರು, ಪಾದರಕ್ಷೆ ತಯಾರಕರು, ಬೀಗ ತಯಾರಿಕೆ ಸೇರಿದಂತೆ ವಿವಿಧ ಬಗೆಯ ವೃತ್ತಿ ಮಾಡುವವರು, ತಮ್ಮ ವೃತ್ತಿ ಸುಧಾರಣೆಗೆ ಅಗತ್ಯವಿರುವ ಉಪಕರಣಗಳನ್ನು ಖರೀದಿಸಲು ಆರ್ಥಿಕ ಸಹಾಯ ನೀಡುವ ಸಲುವಾಗಿ ಸರ್ಕಾರ ವಿಶ್ವಕರ್ಮ ಯೋಜನೆ ಜಾರಿಗೊಳಿಸಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಸುಮಾರು 93 ಸಾವಿರ ಜನರು ಯೋಜನೆಯಡಿ ನೊಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಟೈಲರಿಂಗ್ ವೃತ್ತಿಗೆ ಸಂಬಂಧಿಸಿದಂತೆಯೇ ಹೆಚ್ಚಿನವರು ನೊಂದಣಿ ಮಾಡಿಕೊಂಡಿದ್ದಾರೆ. ನೊಂದಣಿ ಮಾಡಿಕೊಂಡವರ ಪೈಕಿ 03 ಹಂತಗಳಲ್ಲಿ ಈಗಾಗಲೆ ಸುಮಾರು 16 ಸಾವಿರ ಫಲಾನುಭವಿಗಳಿಗೆ ಅನುಮೋದನೆ ನೀಡಿದ್ದು, ತರಬೇತಿಗಾಗಿಯೇ 19 ಏಜೆನ್ಸಿಗಳನ್ನು ಗುರುತಿಸಲಾಗಿದೆ. ಒಂದು ಕೇಂದ್ರದಲ್ಲಿ ತರಬೇತಿಯನ್ನು ಕೂಡ ಪ್ರಾರಂಭಿಸಲಾಗಿದೆ. ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿ 50 ತರಬೇತಿ ಕೇಂದ್ರಗಳನ್ನು ಗುರುತಿಸಿ ವರದಿ ಸಲ್ಲಿಸುವಂತೆ ಸೂಚನೆ ಬಂದಿದ್ದು, ಗುರುತಿಸುವ ಕಾರ್ಯ ನಡೆದಿದೆ ಎಂದರು. ಅರ್ಹ ಫಲಾನುಭವಿಗಳಿಗೆ ತಿಂಗಳ ಒಳಗೆ ತರಬೇತಿ ಪ್ರಾರಂಭಿಸಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.