For the best experience, open
https://m.suddione.com
on your mobile browser.
Advertisement

ವಿಶ್ವಮಾನವರಾಗದೆ ವಿಶ್ವಗುರು ಆಗಲು ಸಾಧ್ಯವಿಲ್ಲ : ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ

11:28 AM Dec 31, 2023 IST | suddionenews
ವಿಶ್ವಮಾನವರಾಗದೆ ವಿಶ್ವಗುರು ಆಗಲು ಸಾಧ್ಯವಿಲ್ಲ   ಡಾ  ಜಿ  ಎನ್  ಮಲ್ಲಿಕಾರ್ಜುನಪ್ಪ
Advertisement

Advertisement

ಸುದ್ದಿಒನ್, ಚಿತ್ರದುರ್ಗ :"ಮುಂಬರುವ ದಿನಗಳಲ್ಲಿ ಭಾರತ ವಿಶ್ವಗುರುವಾಗುವ ಗುರಿ ಇಟ್ಟುಕೊಂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ವಿಶ್ವಮಾನವನಾಗದೆ ವಿಶ್ವಗುರುವಾಗುವುದು ಅಸಾಧ್ಯದ ಮಾತು.  ಗೌತಮ ಬುದ್ಧನ ಜೀವ ಕಾರುಣ್ಯ, ಬಸವಣ್ಣನ ದಯೆಯೇ ಧರ್ಮದ ಮೂಲ ಎನ್ನುವ ತಾತ್ವಿಕತೆ ಮತ್ತು ಕುವೆಂಪು ಅವರ ವಿಶ್ವಮಾನವ ಸಂದೇಶಗಳನ್ನು ತನ್ನ ಅಭಿವೃದ್ಧಿ ಮಂತ್ರಗಳನ್ನಾಗಿಸಿಕೊಂಡಾಗ ಮಾತ್ರ ಇದು ಸಾಧ್ಯ" ಎಂದು ಸಾಹಿತಿ ಮತ್ತು ಆರ್ಥಿಕ ಚಿಂತಕ ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ ಹೇಳಿದರು. 

ನಗರದ ಹೊರವಲಯದಲ್ಲಿರುವ ಸೀಬಾರ-ಗುತ್ತಿನಾಡು ಗ್ರಾಮದ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯಲ್ಲಿ ಶನಿವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾಗಿ ಆಚರಿಸಲ್ಪಡುವ "ವಿಶ್ವಮಾನವ ದಿನ"ದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಅವರು ಈ ಅಭಿಪ್ರಾಯಪಟ್ಟರು.

Advertisement

ಮುಂದುವರೆದು ಮಾತನಾಡಿದ ಅವರು " ಜಗದ ಕವಿ, ಯುಗದ ಕವಿ ಎಂದು ವರಕವಿ ದ.ರಾ.ಬೇಂದ್ರೆಯವರಿಂದ ಬಣ್ಣಿಸಲ್ಪಟ್ಟ ಕುವೆಂಪು ಅವರ ಪಂಚ ಮಂತ್ರಗಳಾದ ಮನುಜ ಮತ, ವಿಶ್ವ ಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣ ದೃಷ್ಟಿ" ಪರಿಕಲ್ಪನೆಗಳನ್ನು ನಮ್ಮ ಮನೋಭಾವ ಹಾಗೂ ಕೃತ್ಯಗಳನ್ನಾಗಿಸಿಕೊಂಡಾಗ ವೈಯುಕ್ತಿಕ ನೆಲೆಯಲ್ಲಿ ಯಾವುದೇ ದ್ವೇಷಾಗ್ನಿ ಇರುವುದಿಲ್ಲ, ಜಾಗತಿಕ ನೆಲೆಯಲ್ಲಿ ಯುದ್ಧಗಳಿರುವುದಿಲ್ಲ.  ಶಾಲಾ ಕಾಲೇಜುಗಳಲ್ಲಿ ಆರಂಭದಿಂದಲೇ ಮಕ್ಕಳಲ್ಲಿ ಇಂಥ ವೈಜ್ಞಾನಿಕ, ವೈಚಾರಿಕ ಮತ್ತು ಮಾನವೀಯ ಗುಣಗಳನ್ನು ಬಿತ್ತುವುದರಿಂದ ಮಾತ್ರ ಇದನ್ನು ಸಾಧ್ಯವಾಗಿಸಬಹುದೇ ಹೊರತು ಮತಧರ್ಮಾಧಾರಿತ ಮೌಢ್ಯಮಾರ್ಗಗಳಿಂದಲ್ಲ" ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಚಿಂತಕ ಮತ್ತು ಪತ್ರಕರ್ತ ಚಳ್ಳಕೆರೆ ಯರ್ರಿಸ್ವಾಮಿಯವರು, "ಕುವೆಂಪು ಅವರ ನಿಸರ್ಗಪ್ರೀತಿ, ವೈಚಾರಿಕ ಕ್ರಾಂತಿ, ಸನಾತನ ಜ್ಞಾನಮೂಲಗಳನ್ನು ಶ್ರದ್ಧೆಯಿಂದ ಅಧ್ಯಯನಮಾಡಿ ಅಲ್ಲಿನ ಒಳಿತು,ಕೆಡುಕುಗಳನ್ನು ಬೊಟ್ಟುಮಾಡಿ ತೋರಿಸುವ ಗುಣ ಅನನ್ಯವಾದುದು. ಅಂತಹ ಗುಣಗಳನ್ನು ತಾವೂ ಹೊಂದಿ ಮಕ್ಕಳಲ್ಲಿ ಅವುಗಳನ್ನು ಬೆಳೆಸುವ ಶಕ್ತಿಯನ್ನು ನಮ್ಮ ಅಧ್ಯಾಪಕರುಗಳು ರೂಢಿಸಿಕೊಂಡರೆ ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಅವರು ನಿಜವಾದ ಮಾದರಿಯಾಗುತ್ತಾರೆ" ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀಕಂಠದೇವ ಅವರು "ಕುವೆಂಪು ಅವರ ವಿಶ್ವಮಾನವ ಸಂದೇಶ ಪ್ರೇರಣೆಯಲ್ಲಿ ಸಂಸ್ಥೆಯನ್ನು ಸ್ಥಾಪಿಸಿದ್ದು ಗ್ರಾಮೀಣ ಮಕ್ಕಳಿಗೆ ಅವರ ಪೋಷಕರಿಗೆ ಸಾಧ್ಯವಾಗುವ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ನೀಡುತ್ತಾ ಬಂದಿದೆ.  ಇಲ್ಲಿಂದ ಉತ್ತೀರ್ಣರಾಗಿ ಹೋಗಿರುವ ಬಹುತೇಕ ಎಲ್ಲ ವಿದ್ಯಾರ್ಥಿಗಳು ಉನ್ನತ ಬದುಕು ಕಟ್ಟಿಕೊಂಡಿದ್ದಾರೆ.  ಈ ಸಂಸ್ಥೆ ಇದೀಗ ತನ್ನ ರಜತ ಮಹೋತ್ಸವ ಆಚರಿಸುತ್ತಿದೆ" ಎಂದು ಸಂತಸ ಹಂಚಿಕೊಂಡರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಶಿಕ್ಷಕ ಸಾಂಸ್ಕತಿಕ ಕಾರ್ಯದರ್ಶಿ ಶಿವಕುಮಾರ್ ಅವರು ಎಲ್ಲರನ್ನೂ ಸ್ವಾಗತಿಸಿ, ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Tags :
Advertisement