ಫೆಬ್ರವರಿ 10 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರೈತ ನಾಯಕ ನಂಜುಂಡಸ್ವಾಮಿರವರ ನೆನಪಿನ ದಿನ : ರೈತ ಪರ ಬಜೆಟ್ ಮಂಡನೆಗೆ ಒತ್ತಾಯ : ಬಗಡಲಪುರ ನಾಗೇಂದ್ರ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.21 : ರೈತ ನಾಯಕ ನಂಜುಂಡಸ್ವಾಮಿರವರ ನೆನಪಿನ ದಿನವನ್ನು ಫೆ.10 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ಪರ ಬಜೆಟ್ ಮಂಡಿಸುವಂತೆ ಹಕ್ಕೊತ್ತಾಯಿಸಲಾಗುವುದು. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಸರ್ಕಾರಕ್ಕೆ ಒಗ್ಗಟ್ಟು ಪ್ರದರ್ಶಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಗಡಲಪುರ ನಾಗೇಂದ್ರ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದಿಂದ ಎ.ಪಿ.ಎಂ.ಸಿ.ಯಲ್ಲಿರುವ ರೈತ ಭವನದಲ್ಲಿ ಭಾನುವಾರ ನಡೆದ ಮಧ್ಯ ಕರ್ನಾಟಕದ ವಿಭಾಗೀಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾವೇಶ ಉದ್ಗಾಟಿಸಲಿದ್ದಾರೆ. ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಬಿ.ಆರ್.ಪಾಟೀಲ್, ತೋಟಗಾರಿಕೆ, ಕೃಷಿ ಪರಿಣಿತರು, ಹೋರಾಟಗಾರರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ಅಲ್ಲಿ ರೈತರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. 90 ರ ನಂತರ ರೈತರ ಚಳುವಳಿಯಲ್ಲಿ ಒಡಕುಂಟಾಯಿತು. ಬಿಜೆಪಿ. ರೈತ ಸಂಘಟನೆಯನ್ನು ಹೊಡೆಯಿತು. ಕೇವಲ ಹೆಗಲ ಮೇಲೆ ಹಸಿರು ಟವಲ್ ಹಾಕುವುದಲ್ಲ. ವಿಚಾರವಿಟ್ಟುಕೊಂಡು ಹೋರಾಡಿದಾಗ ಮಾತ್ರ ಸರ್ಕಾರ ರೈತರಿಗೆ ಮಣಿಯುತ್ತದೆ ಎಂದು ಪದಾಧಿಕಾರಿಗಳಿಗೆ ತಿಳಿಸಿದರು.
ಇವತ್ತಿನ ಬಿಜೆಪಿ.ಯ ಕುತಂತ್ರ ರೈತ ನಾಯಕ ನಂಜುಂಡಸ್ವಾಮಿಗೆ ಮೊದಲೆ ಗೊತ್ತಿತ್ತು. ನಮಗೆ ಈಗ ಗೊತ್ತಾಗಿದೆ. ಮಳೆಯಿಲ್ಲದೆ ರೈತನ ಬದುಕು ಸಂಕಷ್ಟದಲ್ಲಿದೆ. ಬೆಳೆಯಿದ್ದರೂ ಬೆಂಬಲ ಬೆಲೆ ಇಲ್ಲ. ಸರಣಿ ಆತ್ಮಹತ್ಯೆಗಳಾಗುತ್ತಿದೆ. ಭಾರತದಲ್ಲಿ ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಬಂಡವಾಳಶಾಹಿಗಳು, ಉದ್ಯಮಿಗಳು ಆಹಾರ ಕ್ಷೇತ್ರಕ್ಕೆ ಕೈಹಾಕಿ ಸಂಪನ್ಮೂಲಗಳನ್ನು ಲೂಟಿ ಹೊಡೆಯುತ್ತಿದ್ದಾರೆ. ಹೋರಾಟಗಾರರು ಮಾರಾಟವಾಗುವ ಯುಗ ಬಂದಿದೆ. ಈಗ ಚಳುವಳಿಗಳ ಪರ್ವ ಆರಂಭವಾಗಿದೆ. 2024 ರ ಲೋಕಸಭೆ ಚುನಾವಣೆ ನಂತರ 2028 ರ ವಿಧಾನಸಭೆ ಚುನಾವಣೆಯಲ್ಲಿ ರೈತರು ರಾಜಕೀಯ ಶಕ್ತಿ ಪಡೆದುಕೊಳ್ಳಬೇಕಾಗಿದೆ ಎಂದು ರೈತರನ್ನು ಜಾಗೃತಿಗೊಳಿಸಿದರು.
ಬಗರ್‍ಹುಕುಂ ಸಾಗುವಳಿ ಹೋರಾಟ ಯಶಸ್ವಿಯಾಗಲು ರೈತ ಸಂಘ ಕಾರಣ. ರೈತರ ಭೂಮಿ ಉಳಿಸಿಕೊಳ್ಳಲು ಹೋರಾಡಬೇಕಿದೆ. ರೈತ ಸಂಘ ಎಂದರೆ ಕೇವಲ ರೈತರಲ್ಲ. ರೈತರೇತರರು ಇದ್ದಾರೆ. ರೈತ ಸಂಘ, ದಲಿತ ಸಂಘ, ಕಾರ್ಮಿಕರೆಲ್ಲರೂ ಸೇರಿ ಒಟ್ಟಾಗಿ ಹೋರಾಟ ಮಾಡುತ್ತೇವೆ. ಕೃಷಿ ಬೆಲೆ ಆಯೋಗ 2013 ರಲ್ಲಿ ಅಸ್ತಿತ್ವಕ್ಕೆ ಬಂತು. ಆದರೂ ಅದರಿಂದ ರೈತರಿಗೆ ಏನು ಪ್ರಯೋಜನವಿಲ್ಲ. ಅದಕ್ಕಾಗಿ ಕೃಷಿ ಬೆಲೆ ಆಯೋಗವನ್ನು ರೈತ ಆಯೋಗ ಎಂದು ಬದಲಾಯಿಸಬೇಕು. ರೈತರು ಘನತೆ ಗೌರವದಿಂದ ಬದುಕಬೇಕು. ಸ್ವಾತಂತ್ರ್ಯ. ವ್ಯಕ್ತಿ ಸ್ವಾತಂತ್ರ್ಯ ಬೇಕು. ರೈತನಿಗೆ 60 ವರ್ಷವಾದ ಮೇಲೆ ಸರ್ಕಾರ ಪಿಂಚಣಿ ನೀಡಬೇಕು. ಆರ್ಥಿಕವಾಗಿ ಪುನಶ್ಚೇತನಗೊಳಿಸಬೇಕು. ಹಾಗಾಗಿ ರೈತರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಫೆ.10 ರಂದು ನಡೆಯುವ ನಂಜುಂಡಸ್ವಾಮಿ ನೆನಪಿನ ದಿನದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರ ಹದಿನಾಲ್ಕುವರೆ ಲಕ್ಷ ಕೋಟಿ ರೂ. ಬಂಡವಾಳ ಶಾಹಿಗಳ ಸಾಲ ಮನ್ನ ಮಾಡಿದೆ. ರೈತರ ಸಾಲ ಏಕೆ ಮನ್ನ ಮಾಡುತ್ತಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಲಾಗುವುದು. ಮುಂದಿನ ಹತ್ತು ವರ್ಷಗಳಲ್ಲಿ ರೈತರಿಗೆ ದೊಡ್ಡ ಯೋಜನೆಯನ್ನು ರೂಪಿಸಬೇಕಾಗಿರುವುದರಿಂದ ದೊಡ್ಡ ಸಂಘಟನೆಯನ್ನು ಕಟ್ಟಬೇಕು. ಅಸಮಾಧಾನ ಬಿಟ್ಟು ಹೋರಾಟಕ್ಕಾಗಿ ಒಂದಾಗಿ ಎಂದು ರೈತ ಪದಾಧಿಕಾರಿಗಳಿಗೆ ಬಗಡಲಪುರ ನಾಗೇಂದ್ರ ಕಿವಿಮಾತು ಹೇಳಿದರು.
ರೈತ ಪರ ರಾಜ್ಯ ಕೇಂದ್ರ ಸರ್ಕಾರ ಏನು ಮಾಡಬೇಕು ಎಂಬ ಮಾಹಿತಿಯನ್ನು ಸಮಾವೇಶದಲ್ಲಿ ರಾಜಕಾರಣಿಗಳಿಗೆ ನೀಡಲಾಗುವುದು. ಅದಕ್ಕಾಗಿ ಫೆ.10 ರ ಸಮಾವೇಶ ಹಸಿರೀಕರಣವಾಗಬೇಕು. ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆ ಜಾರಿಯಾಗಿಲ್ಲ. ವಿಮ ಹಣದಲ್ಲಿ ಮೋಸ, ಅಳತೆಯಲ್ಲಿ ವಂಚನೆಯಾಗುತ್ತಿದೆ. ಬರದ ಜಿಲ್ಲೆ, ಹೋರಾಟದ ನೆಲ, ಗಂಡು ಮೆಟ್ಟಿನ ನಾಡು ಚಿತ್ರದುರ್ಗ ಜಿಲ್ಲೆಯಿಂದ ಕನಿಷ್ಟ ಒಂದು ಸಾವಿರ ರೈತರಾದರೂ ನಂಜುಂಡಸ್ವಾಮಿ ನೆನಪು ಸಮಾವೇಶದಲ್ಲಿ ಸೇರಬೇಕು. 26 ರಂದು ಸಂಯುಕ್ತ ಕಿಸಾನ್ ಮೋರ್ಚ ಹೆಸರಿನಲ್ಲಿ ಟ್ರಾಕ್ಟರ್ ರ್ಯಾಲಿ ನಡೆಯಲಿದೆ. ಫೆ.18 ರಂದು ರೈತ ಮುಖಂಡ ಪುಟ್ಟಣ್ಣಯ್ಯನವರ ನೆನಪಿನಲ್ಲಿ ಮಂಡ್ಯ ಜಿಲ್ಲೆ ಹೆಬ್ಬೂರಿನಲ್ಲಿ ರೈತರ ಸ್ವಂತ ಕಟ್ಟಡ ರಾಜ್ಯದಲ್ಲಿಯೇ ಪ್ರಥಮವಾಗಿ ಉದ್ಗಾಟನೆಯಾಗಲಿದೆ. ಆರನೆ ವರ್ಷದ ನೆನಪಿಗಾಗಿ ಪ್ರತಿಮೆ ಅನಾವರಣವಾಗಲಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ರೈತ ಮುಖಂಡರುಗಳಾದ ಕೆ.ಪಿ.ಭೂತಯ್ಯ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪೂರ್ಣಚ್ಚ, ರಾಜ್ಯ ಕಾರ್ಯಾಧ್ಯಕ್ಷ ಹೊರಕೇರಪ್ಪ, ಪ್ರೇಮ, ನಿತ್ಯಶ್ರಿ, ಧನಂಜಯ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.