Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಡಿಕೆ ಬೆಳೆ: ವಿಸ್ತೀರ್ಣ, ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನ : ಡಾ.ನಾಗರಾಜ್ ಅಡಿವಪ್ಪರ್

06:57 PM Feb 14, 2024 IST | suddionenews
Advertisement

ಚಿತ್ರದುರ್ಗ. ಫೆ.14:   ನಮ್ಮ ದೇಶದಲ್ಲಿ ಕರ್ನಾಟಕದಲ್ಲಿ ಶೇ.79ರಷ್ಟು ಅಡಿಕೆ ಬೆಳೆ ಬೆಳೆಯುತ್ತಿದ್ದು, ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಶಿವಮೊಗ್ಗ ಅಡಿಕೆ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ. ನಾಗರಾಜ್ ಅಡಿವಪ್ಪರ್ ಹೇಳಿದರು.

Advertisement

 

ಹಿರಿಯೂರಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಈಚೆಗೆ ಜಿಲ್ಲೆಯ ರೈತರಿಗೆ “ಅಡಿಕೆ ಬೆಳೆಯ ಸುಧಾರಿತ ಬೇಸಾಯ ತಾಂತ್ರಿಕತೆ ಹಾಗೂ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ” ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಅಡಿಕೆ ಬೆಳೆಯನ್ನು ಬೆಳೆಯಲು ನೀರು ಬಸಿದು ಹೋಗುವ ಕೆಂಪು ಮಣ್ಣು ಸೂಕ್ತವಾಗಿದ್ದು, ನೀರು ನಿಲ್ಲುವ ಜೌಗು ಮತ್ತು ಸವಳು ಮಣ್ಣಿನ ಪ್ರದೇಶಗಳು ಅಡಿಕೆಗೆ ಸೂಕ್ತವಲ್ಲ. ಮಣ್ಣಿನ ರಸಸಾರ 6 ರಿಂದ 7 ಸೂಕ್ತ. ಅಡಿಕೆಯನ್ನು 9*9 ಅಡಿ ಅಂತರದಲ್ಲಿ 2*2*2 ಅಡಿ ಅಳತೆಯ ಗುಂಡಿಯಲ್ಲಿ ನಾಟಿ ಮಾಡುವುದು ಸೂಕ್ತ ಎಂದು ತಿಳಿಸಿದ ಅವರು, ಅಡಿಕೆಯಲ್ಲಿ ಅಂತರ ಬೆಳೆಯಾಗಿ ಬಾಳೆ, ವೀಳ್ಯೆದೆಳೆ, ಜಾಯಿಕಾಯಿ ಮತ್ತು ಕರಿಮೆಣಸು ಚಿತ್ರದುರ್ಗ ಜಿಲ್ಲೆಗೆ ಸೂಕ್ತವಾಗಿದೆ ಎಂದು ಹೇಳಿದರು.


ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ರೈತರು ಅಡಿಕೆಯನ್ನು ಪ್ರಮುಖ ತೋಟಗಾರಿಕೆ ವಾಣಿಜ್ಯ ಬೆಳೆಯಾಗಿ ಬೆಳೆಯಲು ಆಸಕ್ತಿ ತೋರುತ್ತಿದ್ದು, ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಉತ್ತಮ ತಳಿಗಳ ಆಯ್ಕೆ, ಬೇಸಾಯ ಕ್ರಮ, ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆಯ ತಾಂತ್ರಿಕ ಮಾಹಿತಿ ಅಗತ್ಯವಿದೆ.

ಇದಲ್ಲದೆ ರೈತರಿಗೆ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಮಾಡುವ ವಿಧಾನದ ಮಾಹಿತಿಯೊಂದಿಗೆ ಪ್ರಾತ್ಯಕ್ಷಿಕೆ ಮಾಡುವುದು ಸಹ ಈ ತರಬೇತಿಯ ಪ್ರಮುಖ ವಿಷಯವಾಗಿದ್ದು, ಇದರಿಂದ ಅಡಿಕೆ ಸಿಪ್ಪೆಯನ್ನು ಎಲ್ಲೆಂದರಲ್ಲೆ ಬಿಸಾಕುವುದು ಹಾಗೂ ಇದರಿಂದಾಗುವ ಅವಘಡಗಳನ್ನು ತಪ್ಪಿಸಲು ಮತ್ತು ರೈತರು ಸ್ವತಃ ತಮ್ಮ ತೋಟಕ್ಕೆ ಬೇಕಾಗುವ ಕಾಂಪೋಸ್ಟ್ ಗೊಬ್ಬರ ಮಾಡಿಕೊಳ್ಳಬಹುದಾಗಿರುವುದರಿಂದ ಈ ತರಬೇತಿಯು ಸಹಕಾರಿಯಾಗಲಿದೆ ಎಂದರು.


ತೋಟಗಾರಿಕೆ ತಜ್ಞ ಡಾ.ಸುದೀಪ್ ಮಾತನಾಡಿ ಅಡಿಕೆಯ ವಿವಿಧ ತಳಿಗಳು ಮತ್ತು ಅವುಗಳ ವಿಶೇಷ ಗುಣಗಳು, ಸಸ್ಯಾಭಿವೃದ್ದಿಯ ಕ್ರಮಗಳು, ಪೋಷಕಾಂಶಗಳ ನಿರ್ವಹಣೆ, ಹಸಿರೆಲೆ ಗೊಬ್ಬರದ ನಿರ್ವಹಣೆ, ಹಾಗೂ ನೀರು ಮತ್ತು ಬಸಿಗಾಲುವೆಯ ನಿರ್ವಹಣೆ ಕುರಿತು ತಿಳಿಸಿದರು

ಕೀಟಶಾಸ್ತ್ರ ತಜ್ಞೆ ಡಾ. ಸ್ವಾತಿ ಅವರು ಅಡಿಕೆಯಲ್ಲಿ ಬರುವ ಪ್ರಮುಖ ರೋಗಗಳಾದ ಸುಳಿ ಕೊಳೆ, ಹಿಂಗಾರು ಒಣಗುವ ರೋಗ, ದುಂಡಾಣು ಎಲೆ ಪಟ್ಟಿ ರೋಗ, ಅಣಬೆ ರೋಗ, ಎಲೆ ಚುಕ್ಕಿ ಮತ್ತು ಹಿಡಿಮುಂಡಿಗೆ ಹಾಗೂ ಪ್ರಮುಖ ಕೀಟಗಳಾದ ನುಸಿ, ರುಗೋಸ್ ಸುರಳಿ ಸುತ್ತುವ ಬಿಳಿನೊಣ, ಸುಳಿ ತಿಗಣೆ, ಹಿಂಗರು ತಿನ್ನುವ ಹುಳುಗಳ ಹಾನಿಯ ಲಕ್ಷಣ ಮತ್ತು ಅವುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ತದ ನಂತರ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ರೈತರಿಗೆ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆಯ ವಿಧಾನವನ್ನು ಕಾಂಪೋಷ್ಟ ಘಟಕದಲ್ಲಿ ತೆಳುವಾಗಿ ಒಣ ಎಲೆ, ಕೆಂಪು ಮಣ್ಣು ಹರಡಿ ಅದರ ಮೇಲೆ 1/3 ಭಾಗ ಅಡಿಕೆ ಸಿಪ್ಪೆ ತುಂಬಿ ನಂತರ 1 ಕೆಜಿ ಸೂಕ್ಷ್ಮ ಜೀವಿಗಳ ಮಿಶ್ರಣ (ಕಾಂಪೋಸ್ಟ್ ಕಲ್ಚರ್), ಸಗಣಿ ಬಗ್ಗಡ ಸಿಂಪಡಿಸಿ ಪುನಃ 2 ಬಾರಿ ಮೇಲಿನಂತೆ ಕ್ರಮಗಳನ್ನು ಅನುಸರಿಸಿ ಪ್ರಾತ್ಯಕ್ಷಿಕೆಯನ್ನು ಮಾಡಲಾಯಿತು.
ಕಾಂಪೋಸ್ಟ್ ಘಟಕದ ಮೇಲ್ಬಾಗವನ್ನು ತೆಂಗಿನ ಗರಿಯಿಂದ ಮುಚ್ಚಿ ಅಥವಾ ಚಪ್ಪರ ಹಾಕಿ 2-3 ದಿನಗಳಿಗೊಮ್ಮೆ ನೀರನ್ನು ಹಾಕಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು. ತಿಂಗಳಿಗೊಮ್ಮೆ 3 ತಿಂಗಳವರೆಗೆ ಗುದ್ದಲಿ ಸಹಾಯದಿಂದ ಅಡಿಕೆ ಸಿಪ್ಪೆಯನ್ನು ತಿರುವಿ ಹಾಕಬೇಕು. 3 ತಿಂಗಳ ನಂತರ 20*5*5 ಅಡಿ ಇರುವ ಘಟಕಕ್ಕೆ 5 ಕೆಜಿ ಎರೆಹುಳು ಬಿಡಬೇಕು. ಪ್ರತಿ ವಾರ ತೆಳುವಾಗಿ ಸಗಣಿ ಬಗ್ಗಡ ಹಾಕಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು.

ಎರೆಹುಳು ಹಾಕಿದ ನಂತರ ಯಾವುದೇ ರೀತಿಯ ಮಿಶ್ರಣ ಮಾಡಬಾರದು. ಮಳೆಗಾಲದಲ್ಲಿ ನೀರು ನಿಂತರೆ ಕೆಳಭಾಗದಲ್ಲಿ ಒಂದು ಪೈಪ್ ಹಾಕಿ ಹೆಚ್ಚಾದ ನೀರನ್ನು ತೆಗೆಯಬೇಕು. ಈ ರೀತಿ ಮೇಲಿನ ಎಲ್ಲ್ಲಾ ಪ್ರಕ್ರಿಯೆಗಳನ್ನು ಮಾಡಿದರೆ 6 ತಿಂಗಳಲ್ಲಿ ಉತ್ಕ್ರಷ್ಟವಾದ ಗೊಬ್ಬರ ತಯಾರಾಗುತ್ತದೆ ಎಂದು ಮಾಹಿತಿ ನೀಡಿದರು.

ತರಬೇತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 75 ಕ್ಕೂ ಹೆಚ್ಚು ಆಸಕ್ತ ರೈತರು ಭಾಗವಹಿಸಿದ್ದು, ಭಾಗವಹಿಸಿದ ರೈತರಿಗೆ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿಕೊಳ್ಳಲು ಉಚಿತವಾಗಿ ಕಾಂಪೋಸ್ಟ್ ಕಲ್ಚರ್‍ನ್ನು ನೀಡಲಾಯಿತು.

 

Advertisement
Tags :
chitradurgasuddionesuddione newsಅಡಿಕೆ ಬೆಳೆಚಿತ್ರದುರ್ಗಡಾ.ನಾಗರಾಜ್ ಅಡಿವಪ್ಪರ್ಮೊದಲ ಸ್ಥಾನವಿಸ್ತೀರ್ಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article