ಆಗಸ್ಟ್ 19 ರಂದು ನುಲಿಯ ಚಂದಯ್ಯ ಜಯಂತಿ | ನಮ್ಮ ಜನಾಂಗವನ್ನು ಕಡೆಗಣಿಸಲಾಗಿದೆ : ಹೆಚ್.ಎನ್.ರಾಮಚಂದ್ರಪ್ಪ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್ ,18 : ಬೆಂಗಳೂರಿನಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದೊಂದಿಗೆ ನಡೆಯಲಿರುವ ನುಲಿಯ ಚಂದಯ್ಯ ಜಯಂತಿ ಆಚರಣೆಯಲ್ಲಿ ನಮ್ಮ ಜನಾಂಗವನ್ನು ಕಡೆಗಣಿಸಲಾಗಿದೆ ಎಂದು ಅಖಿಲ ಕರ್ನಾಟಕ ಕೊರಚ ಮಹಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎನ್.ರಾಮಚಂದ್ರಪ್ಪ ಆಪಾದಿಸಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಳುವ ಮಹಾಸಭಾ ಎಂದು ರಾಜ್ಯ ಮಟ್ಟದಲ್ಲಿ ನೊಂದಾಯಿಸಿಕೊಂಡಿರುವ ಕೆಲವರು ನಮ್ಮ ಜನಾಂಗವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿರುವುದು ಅತೀವ ನೋವುಂಟಾಗಿದೆ. ಕೊರಚ, ಕೊರಮ, ಕೊರವಂಜಿ, ಕೊರವ, ಯರುಕುಲ ಎಂಬಿತ್ಯಾದಿ ಜಾತಿಗಳು ಒಳಗೊಂಡಂತೆ ರಾಜ್ಯದಲ್ಲಿ ಸುಮಾರು 2 ರಿಂದ 2.50 ಲಕ್ಷದಷ್ಟು ಜನಸಂಖ್ಯೆಯಿದೆ. ಕೊರಚ ಮತ್ತು ಕೊರಮ ಜನಾಂಗಕ್ಕೆ ಸಂಬಂಧಿಸಿದಂತೆ ಯಾವುದೇ ಗೆಜಟ್ ನೋಟಿಫಿಕೇಷನ್‍ನಲ್ಲಿ ಕುಳುವ ಎಂದು ನಮೂದಾಗಿಲ್ಲ. 2018 ನೇ ಸಾಲಿನಲ್ಲಿ ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ನೊಂದಣಿಯಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿದೆ ಎಂದು ಹೇಳಿದರು.
ಗುರು ನುಲಿಯ ಜಯಂತಿ ಆಚರಣೆಗೆ ನಮ್ಮನ್ನು ಆಹ್ವಾನಿಸದೆ ಕಡೆಗಣಿಸಲಾಗಿದೆ. ಹಗ್ಗ ನೇಯುವುದು, ಬುಟ್ಟಿ ಎಣೆಯುವುದು, ಬಿದಿರು ತಯಾರಿಕೆ, ಕಣಿ ಹೇಳುವುದು ಕುಲ ಕಸುಬು. ಹಾಗಾಗಿ ಜಯಂತಿಯಲ್ಲಿ ನಮ್ಮ ಕುಲ ಕಸುಬುಗಳಿಗೆ ಸಂಬಂಧಪಟ್ಟಂತೆ ಸ್ಥಬ್ದ ಚಿತ್ರಗಳನ್ನು ಪ್ರದರ್ಶಿಸುವುದು ಪ್ರಮುಖ ವಿಚಾರ. ಕೆಲವೆ ಕೆಲವು ವ್ಯಕ್ತಿಗಳು ನಮ್ಮ ಸಮಾಜವನ್ನು ದಿಕ್ಕುತಪ್ಪಿಸುವ ಕುತಂತ್ರ ಮಾಡುತ್ತಿರುವುದು ಸರಿಯಲ್ಲ. ಮುಂದಿನ ವರ್ಷ ಪ್ರತ್ಯೇಕವಾಗಿ ಗುರು ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ನಿರ್ದೇಶನ ನೀಡುವಂತೆ ಸರ್ಕಾರದ ಕಾರ್ಯದರ್ಶಿಯವರಲ್ಲಿ ಹೆಚ್.ಎನ್.ರಾಮಚಂದ್ರಪ್ಪ ಮನವಿ ಮಾಡಿದರು.
ಅಖಿಲ ಕರ್ನಾಟಕ ಕೊರಚ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಜಿಲ್ಲಾಧ್ಯಕ್ಷ ತಿಮ್ಮಣ್ಣ, ಮಂಜಪ್ಪ, ಶಿವಾನಂದಪ್ಪ, ಗಾಳೆಪ್ಪ ಇವರುಗಳು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.