ಬಯಲುಸೀಮೆಗೆ ನೀರುಣಿಸುವ ಕಾಳಜಿ ಯಾರಿಗೂ ಇಲ್ಲ : ಭದ್ರೆ ರಾಜಕೀಯ ಅಸ್ತ್ರ : ಎಎಪಿ ಜಿಲ್ಲಾಧ್ಯಕ್ಷ ಜಗದೀಶ್ ಆರೋಪ
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 26 : ಭದ್ರಾ ಮೇಲ್ದಂಡೆ ಯೋಜನೆ ದಶಕಗಳ ಹೋರಾಟದಿಂದ ಜಾರಿಗೊಂಡಿದೆ. ಆದರೂ ಬಯಲುಸೀಮೆಗೆ ನೀರುಣಿಸುವಲ್ಲಿ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ರಾಜಕಾರಣ ಮಾಡುತ್ತಿವೆ ಎಂದು ಎಎಪಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿತ್ರದುರ್ಗ ಸೇರಿ ಬಯಲುಸೀಮೆ ಜಿಲ್ಲೆಗಳು ನಿರಂತರ ಬರಗಾಲ, ಅಪರೂಪಕ್ಕೊಮ್ಮೆ ವರುಣನ ಅಬ್ಬರಕ್ಕೆ ತತ್ತರಿಸುತ್ತಲೇ ಇವೆ. ಈ ಪ್ರದೇಶದ ರೈತರ ಬದುಕು ಹಸನುಗೊಳಿಸಲು ಭದ್ರಾ ಮೇಲ್ದಂಡೆ ಯೋಜನೆಯೊಂದೇ ಪರಿಹಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯೋಜನೆ ಜಾರಿಗೆ ಜಿಲ್ಲೆಯ ವಿವಿಧ ಸಂಘಟನೆಗಳು, ನೀರಾವರಿ ಹೋರಾಟ ಸಮಿತಿ ನಿರಂತರ ಹೋರಾಟ ನಡೆಸಿದ್ದರ ಫಲ ಅನುಷ್ಠಾನಗೊಂಡಿದೆ. ಆದರೆ, ರಾಜಕೀಯ ಕಾರಣ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳಲ್ಲಿ ಇಚ್ಛಾಶಕ್ತಿ ಕೊರತೆ ಕಾರಣಕ್ಕೆ ಯೋಜನೆ ಪೂರ್ಣಗೊಂಡಿಲ್ಲ ಎಂದು ದೂರಿದ್ದಾರೆ. ಈ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರ ಪರಸ್ಪರ ಆರೋಪದಲ್ಲಿ ತೊಡಗಿದ್ದು, ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಬೇಸರಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಬಯಲುಸೀಮೆ ಪ್ರದೇಶ ಹಸಿರಾಗಲಿದೆ. ರೈತರ ಬದುಕು ಹಸನಾಗಲಿದೆ. ಕೃಷಿ ಚಟುವಟಿಕೆ ಗರಿಗೇದರಿ ಈ ಮೂಲಕ ಕೂಲಿ, ವ್ಯಾಪಾರ, ಸಣ್ಣ ಉದ್ಯಮಗಳು ಜೀವ ಪಡೆದುಕೊಳ್ಳಲಿವೆ. ಲಕ್ಷಾಂತರ ಮಂದಿ ಬದುಕು ಕಟ್ಟಿಕೊಳ್ಳಲಿದ್ದಾರೆ. ಗುಳೇ ಪದ್ಧತಿ ಬಹುತೇಕ ಸ್ಥಗಿತಗೊಳ್ಳಲಿದೆ ಎಂದರು.
ಈ ಮೂಲಕ ಪದೇ ಪದೆ ಬರಗಾಲ, ಬೆಳೆಹಾನಿ ಹೀಗೆ ವಿವಿಧ ರೀತಿ ಪರಿಹಾರ ನೀಡುವ ಹಣ ಸರ್ಕಾರಕ್ಕೆ ಉಳಿತಾಯವಾಗಲಿದೆ. ಸಾಲ ಮರುಪಾವತಿ ಆಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬ್ಯಾಂಕ್‌ಗಳು ಪ್ರಗತಿ ಕಾಣಲಿವೆ. ಜತೆಗೆ ಚುನಾವಣೆ ಸಂದರ್ಭ ಮತ ಖರೀದಿಗೆ ಕಡಿವಾಣ ಬೀಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸಮಗ್ರವಾಗಿ ಶೀಘ್ರ ಪೂರ್ಣಗೊಳ್ಳಬೇಕಿದೆ. ಆದರೆ, ರಾಜಕೀಯ ಪಕ್ಷಗಳಿಗೆ ಜನರು ಸ್ವಾವಲಂಬಿ, ಸ್ವಾಭಿಮಾನದ ಬದುಕು ನಡೆಸುವುದು ಇಷ್ಟವಿಲ್ಲ. ಆದ್ದರಿಂದಲೇ ಯೋಜನೆಗೆ ವೇಗ ನೀಡುತ್ತಿಲ್ಲ. ಈ ಮೂಲಕ ಸಾರ್ವಜನಿಕರ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ ನಡೆಸುತ್ತಿಲ್ಲ ಎಂದು ದೂರಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿಗೆ ಅನ್ನದಾತರು ಸಿಲುಕಿದ್ದಾರೆ. ಈ ವಿಷಯದಲ್ಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಸ್ಪರ ಜನರ ಹಿತಾಸಕ್ತಿ ಕಾಪಾಡಲು ಹೆಚ್ಚು ಪರಿಹಾರ ನೀಡಲು ಮುಂದಾಗಬೇಕು. ಉಪ ಚುನಾವಣೆ ಗೆಲುವಿಗಿಂತಲೂ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಬದುಕು ಸರಿದಾರಿಗೆ ತರುವ ಹೊಣೆಗಾರಿಕೆ ಎರಡು ಸರ್ಕಾರಗಳು ಪ್ರದರ್ಶಿಸಬೇಕೆಂದು ಆಗ್ರಹಿಸಿದ್ದಾರೆ.