ಚಿತ್ರದುರ್ಗದ ಜಾನಪದ ಕಲಾವಿದರ ಬಗ್ಗೆ ನಿರ್ಲಕ್ಷ್ಯ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿರುದ್ಧ ದಸಂಸ ಆಕ್ರೋಶ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಅಗಸ್ಟ್. 24 : ಜಾನಪದ ಕಲೆಗಳನ್ನು ಹಾಗೂ ಕಲಾವಿದರನ್ನು ಪೋಷಿಸಬೇಕಾದಂತಹ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾರ್ಯಕ್ರಮಗಳನ್ನು ನೀಡಲು ಜಿಲ್ಲೆಯ ಗ್ರಾಮೀಣ ಭಾಗದ ಕಲಾವಿದರನ್ನು ಪರಿಗಣಿಸದೆ ಹೊರ ಜಿಲ್ಲೆಯ ಕೆಲವು ಆಯ್ದ ಕಲಾವಿದರಿಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಗ್ರಾಮೀಣ ಭಾಗದ ಕಲಾವಿದರನ್ನು ನಿರ್ಲಕ್ಷ ಮಾಡುತ್ತಿದೆ ಎಂದು ದಲಿತಸಂಘರ್ಷ ಸಮಿತಿ(ಪರಿವರ್ತನಾ ವಾದ) ಕಲಾಮಂಡಳಿ ರಾಜ್ಯ ಅಧ್ಯಕ್ಷರು, ರಂಗಭೂಮಿ ಗಾಯಕರಾದ ಮುತ್ತುರಾಜ್ ಇಲಾಖೆಯ ಆಧಿಕಾರಿಗಳ ಮೇಲೆ ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದ ಪರ್ತಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯು ಚಿನ್ಮೂಲಾದ್ರಿ ನಾಡು ಎಂದು ಹಿಂದೆ ಪ್ರಸಿದ್ದಿಯನ್ನು ಪಡೆದಿತ್ತು. ಹಾಗೂ ಈ ಜಿಲ್ಲೆಯು ಹಲವಾರು ಕಲೆಗಳನ್ನು ಒಳಗೊಂಡ ಬೀಡಾಗಿದ್ದು ತ.ರಾ.ಸು, ಜಾನಪದ ಸಿರಿಯಜ್ಜಿಯಂತಹ ಮಹಾ ಸಾಧಕರನ್ನು ಕರುನಾಡಿಗೆ ಪರಿಚಯಿಸಿದಂತಹ ಜಿಲ್ಲೆಯಾಗಿದೆ. ಜಾನಪದ ಸಂಸ್ಕೃತಿಯ ಪ್ರಮುಖ ಕಲೆಗಳಾದಂತಹ ಸೋಬಾನೆ, ಕೋಲಾಟ, ಭಜನೆ, ಬಯಲಾಟ ಇನ್ನು ಹಲವಾರು ಕಲೆಗಳನ್ನು ಜೀವಂತವಾಗಿರಿಸಿದೆ.
ಈ ಕಲೆಗಳನ್ನು ಹಾಗೂ ಕಲಾವಿದರನ್ನು ಪೋಷಿಸಬೇಕಾದಂತಹ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾರ್ಯಕ್ರಮಗಳನ್ನು ನೀಡಲು ಜಿಲ್ಲೆಯ ಗ್ರಾಮೀಣ ಭಾಗದ ಕಲಾವಿದರನ್ನು ಪರಿಗಣಿಸದೆ ಹೊರ ಜಿಲ್ಲೆಯ ಕೆಲವು ಆಯ್ದ ಕಲಾವಿದರಿಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಗ್ರಾಮೀಣ ಭಾಗದ ಕಲಾವಿದರು ಕಾರ್ಯಕ್ರಮ ನೀಡಲು ಗ್ರಾಮೀಣ ಕಲಾವಿದರು ಕೇಳಲು ಹೋದರೆ ನೀವು ಶಾಸ್ತ್ರೀಯ ಸಂಗೀತ ಕಲಿತಿರುವಿರಾ ಹಾಗೂ ನಿಮ್ಮ ಜಾತಿ ಯಾವುದು, ಇಲಾಖೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂಬ ಸಬೂಬು ಹೇಳುತ್ತಾರೆ.
ಸರ್ಕಾರದಿಂದ ಇಲಾಖೆಗೆ ಹಲವಾರು ಯೋಜನೆಗಳ ಅಡಿಯಲ್ಲಿ ಅನುದಾನ ಬಿಡುಗಡೆಯಾಗುತ್ತಿದ್ದು ಇಲಾಖೆಯ ಕೆಲವು ಅಧಿಕಾರಿಗಳು ಹೊರ ಜಿಲ್ಲೆಯ ಕೆಲವು ಆಯ್ದ ಕಲಾವಿದರಿಂದ ಕಾರ್ಯಕ್ರಮಕ್ಕೆ ಇಂತಿಷ್ಟು ಕಮಿಷನ್ ಪಡೆಯುವ ಮೂಲಕ ಇಲಾಖೆಯ ಎಲ್ಲಾ ಕಾರ್ಯಕ್ರಮನ್ನು ಅವರಿಗೆ ನೀಡುತ್ತ ಬಂದಿರುವುದು ಗ್ರಾಮೀಣ ಕಲಾವಿದರಿಗೆ ಮಾಡುತ್ತಿರುವ ದೊಡ್ಡ ವಂಚನೆಯಾಗಿದೆ ಎಂದು ದೂರಿದ್ದಾರೆ.
ಸರ್ಕಾರದಿಂದ ನಡೆಸುವಂತಹ ಜನಪದ ಉತ್ಸವ, ಗಿರಿಜನ ಉತ್ಸವ, ನಾಟಕೋತ್ಸವಗಳನ್ನು ಕೆಲವು ವರ್ಷಗಳಿಂದ ಆಯೋಜನೆ ಮಾಡದೆ ಗ್ರಾಮೀಣ ಕಲೆಗಳು ನಶಿಸಿ ಹೋಗಲು ಇಲಾಖೆಯಲ್ಲಿರುವ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗುತ್ತಿದೆ. ಇಂತಹ ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ಹಣದ ದಾಹ ಮುಂದುವರೆದಲ್ಲಿ ಗ್ರಾಮೀಣ ಭಾಗದ ಕಲೆಗಳು ಹಾಗೂ ಈ ಕಲೆಯನ್ನೆ ನಂಬಿ ಜೀವಿಸುತ್ತಿರುವ ಕಲಾವಿದರ ಕಷ್ಟ ಕಾರ್ಪಣ್ಯಗಳನ್ನು ಕೇಳುವವರಾರು. ಮುಂದೆ ಈ ತಪ್ಪುಗಳು ಮರುಕಳಿಸದೆ ಜಿಲ್ಲೆಯ ಗ್ರಾಮೀಣ ಭಾಗದ ಕಲಾವಿದರಿಗೆ ಇಲಾಖೆಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗ್ರಾಮೀಣ ಕಲೆಗಳನ್ನು ಪೋಷಿಸುವಂತಹ ಕೆಲಸವನ್ನು ಇಲಾಖೆಯ ಸರ್ಕಾರವನ್ನು ಅಧಿಕಾರಿಗಳನ್ನು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಗೋಷ್ಟಿಯಲ್ಲಿ ಸಾಹಿತಿಗಳಾದ ನಾಂಗೇದ್ರಪ್ಪ ರಂಗ ಭೂಮಿ ಹಿರಿಯ ಕಲಾವಿದರಾದ ಡಿ.ಆರ್ ಮಲ್ಲರೆಡ್ಡಿ,ಬಿ.ಆರ್ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.