ಯಾದಗಿರಿ ಪಿಎಸ್ಐ ಸಾವು ಪ್ರಕರಣದಲ್ಲಿ ಶಾಸಕನ ಹೆಸರು : ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?
ಬೆಂಗಳೂರು: ಯಾದಗಿರಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಪಿಎಸ್ಐ ಆಗಿದ್ದ 34 ವರ್ಷದ ಪರಶುರಾಮ್ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಇಂದು ಪ್ರತಿಭಟನೆ ಕೂಡ ನಡೆದಿದೆ. ಅವರ ಸಾವಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಪುತ್ರ ಪಂಪಣ್ಣ ಕಾರಣ ಎಂದೇ ಹೇಳಲಾಗಿದೆ. ಈಗಾಗಲೇ ಈ ಸಂಬಂಧ ದೂರು ಕೂಡ ದಾಖಲಾಗಿದೆ. 30 ಲಕ್ಷ ಲಂಚ ಕೇಳಿದ್ದರಿಂದ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಯಾದಗಿರಿ ಪಿಎಸ್ಐ ಅನುಮಾನಾಸ್ಪದ ಸಾವಿನ ಕುರಿತು ಕೂಲಂಕುಶವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇವೆ. ಆತ್ಮಹತ್ಯೆ ಮಾಡಿಕೊಂಡಿಲ್ಲ, ಡೆತ್ ನೋಟ್ ಬರೆದಿಟ್ಟಿಲ್ಲ. ವರ್ಗಾವಣೆ ವಿಚಾರಕ್ಕೆ ನೊಂದಿದ್ದರು ಎಂದು ಅವರ ಪತ್ನಿ ದೂರು ನೀಡಿದ್ದಾರೆ. ನಾನು ಸಮುದಾಯ ಯಾವುದಿ ಎಂಬುದನ್ನು ನೋಡುವುದಿಲ್ಲ. ಕಾನೂನನ್ನು ನೋಡುತ್ತೇನೆ. ಈ ರೀತಿ ಘಟನೆ ನಡೆದಾಗ ಎಫ್ಐಆರ್ ದಾಖಲಿಸಬೇಕು. ಎಫ್ಐಆರ್ ಹಾಕುವ ಮುನ್ನ ಪರಿಶೀಲನೆ ನಡೆಸುತ್ತಾರೆ. ಶಾಸಕರಿದ್ದರು, ಬೇರೆಯವರಿದ್ದರು, ಆಡಳಿತ ಪಕ್ಷದವರೇ ಆದರೂ ಎಫ್ಐಆರ್ ದಾಖಲಿಸುತ್ತೇವೆ ಎಂದಿದ್ದಾರೆ.
ಪಿಎಸ್ಐ ಪರಶುರಾಮ ಸಾವಿಗೆ ಶಾಸಕ ಚನ್ನಾರೆಡ್ಡಿ ಹಾಗೂ ಪುತ್ರ ಪಂಪಣ್ಣ ಗೌಡ ಕಾರಣ ಎಂದು ಪರಶುರಾಮ್ ಪತ್ನಿ ಶ್ವೇತಾ ಈಗಾಗಲೆ ದೂರು ದಾಖಲಿಸಿದ್ದಾರೆ. ಚೆನ್ನಾರೆಡ್ಡಿ ಅವರು ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಇದರಿಂದ ಕಿರುಕುಳ ನೀಡುತ್ತಿದ್ದರು. ನಾವೂ ದಲಿತರು, ದುಡ್ಡು ಕೊಟ್ಟಿಲ್ಲ ಎಂಬ ಕಾರಣಕ್ಕೆ ಪೋಸ್ಟಿಂಗ್ ಕೊಟ್ಟಿಲ್ಲ ಎಂದು ಮೃತ ಪರಶುರಾಮ್ ಪತ್ನಿ ಶ್ವೇತಾ ದೂರು ನೀಡಿದ್ದಾರೆ.