For the best experience, open
https://m.suddione.com
on your mobile browser.
Advertisement

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ ಅಪರಿಮಿತ : ಶ್ರೀ ಶಾಂತವೀರ ಸ್ವಾಮೀಜಿ

11:13 AM Jun 05, 2024 IST | suddionenews
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ ಅಪರಿಮಿತ   ಶ್ರೀ ಶಾಂತವೀರ ಸ್ವಾಮೀಜಿ
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಜೂ.05 : ಶಿಕ್ಷಣವೇ ಶಕ್ತಿ ಎಂಬ ನಾಣ್ನೂಡಿಗೆ ಶಕ್ತಿ ತುಂಬಿದವರು ನಾಲ್ವಡಿ ಕೃಷ್ಣರಾಜ ಒಡೆಯರು ಎಂದು ಕುಂಚಿಟಿಗ ಗುರುಪೀಠದ ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ವಿಶ್ಲೇಷಿಸಿದರು.

Advertisement

ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿಯಲ್ಲಿ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ಅಸ್ಷೃಶ್ಯರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ ಅವರು, ಶಿಕ್ಷಣವೇ ಎಲ್ಲರ ಅಭಿವೃದ್ಧಿಗೂ ಮೂಲ ಎಂದು ಭಾವಿಸಿ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದರು. ಮೈಸೂರು ವಿಶ್ವವಿದ್ಯಾನಿಲಯ ಪ್ರಾರಂಭಿಸಿದರು. ಬೆಂಗಳೂರಿನಲ್ಲಿ ಕೃಷಿ ವಿ.ವಿ ಸ್ಥಾಪಿಸಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭಕ್ಕೆ ಕಾರಣೀಭೂತರಾದರು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾಯಿದೆ ಜಾರಿ, ವಯಸ್ಕರಿಗಾಗಿ ವಯಸ್ಕರ ಶಾಲೆ.

Advertisement

ಪ್ರಜೆಗಳ ಸಮಸ್ಯೆಯನ್ನು ಆಲಿಸಲು ಪ್ರಜಾಪ್ರತಿನಿಧಿ ಸಭೆಯನ್ನು ಬಲಗೊಳಿಸಿ, ನ್ಯಾಯವಿಧಾಯಕ ಸಭೆಯನ್ನು ಸ್ಥಾಪಿಸಿದರು. ಸಾಮಾಜಿಕ ನ್ಯಾಯದ ಪರ ಮಹಾರಾಜರ ನಿಲುವು ಯಾವಾಗಲು ಹೆಚ್ಚಾಗಿತ್ತು. ಮೈಸೂರಿನಲ್ಲಿ ನಡೆದ ಮೀಸಲಾತಿ ಚಳುವಳಿ, ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಮಿಲ್ಲರ್ ಆಯೋಗದ ಶಿಫಾರಸ್ಸಿನಂತೆ, ಬ್ರಾಹ್ಮಣೇತರರಿಗೆ ಶೇ 75% ಮೀಸಲಾತಿ ನೀಡಿ ಹೊಸ ಶಕೆಗೆ ಮುನ್ನುಡಿಯನ್ನಿಟ್ಟರು ನಾಲ್ವಡಿಯವರು.
ತಮ್ಮ ಕಾಲಾವಧಿಯನ್ನು ದೇವದಾಸಿ ಪದ್ದತಿಯನ್ನು ನಿರ್ಮೂಲನೆಗೊಳಿಸಿದ್ದು, ಗೆಜ್ಜೆಪೂಜೆ ಕಾರ್ಯಕ್ರಮವನ್ನು ನಿಷೇಧಿಸಿದ್ದು, ವಿಧವಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದು, ಮಹಿಳೆಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡಲು ಕಾನೂನು ರೂಪಿಸಿದ್ದು.. ಹೀಗೆ ಮಹಾರಾಜರು ಸಾಮಾಜಿಕ ಕಳಕಳಿಯಿಂದ ಕೈಗೊಂಡ ಕ್ರಮಗಳು ಅನೇಕ.
ಒಂದರ ಹಿಂದೆ ಒಂದರಂತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆ ಅಪರಿಮಿತ ಎಂದು ವಿಶ್ಲೇಷಿಸಿದರು.

Advertisement
Advertisement

ಮಡಿವಾಳ ಗುರುಪೀಠದ ಜಗದ್ಗುರು ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ್ಲ ಅನ್ನೋ ಮಾತು ಎಷ್ಟು ನಿಜವೋ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ನೀಡದ ಕ್ಷೇತ್ರವೇ ಇಲ್ಲ ಅನ್ನೋದು ಅಷ್ಟೇ ಸತ್ಯ. ಮೈಸೂರಿನ ಸುವರ್ಣ ಯುಗಕ್ಕೆ ಕಾರಣರಾದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತ ಸರ್ವಶ್ರೇಷ್ಟವಾದದ್ದು. ಅಂದು ರಾಜರು ಇಂದು ರಾಜಕಾರಣಿಗಳು ಜನರನ್ನು ಆಳುತ್ತಿದ್ದಾರೆ ಜನನಾಯಕ ಅಂದ್ರೆ ಒಡೆಯರ್ ರೀತಿಯಲ್ಲಿ ಇರಬೇಕು. ಜಗತ್ತಿಗೆ ತೋರಿಸಿಕೊಟ್ಟ ಇವರ ಕೊಡುಗೆಗಳು ಅಜರಾಮರ ಎಂದು ಹೇಳಿದರು.

ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ ಮಾತನಾಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಯೋಗದ ಅನೇಕ ಪ್ರಯೋಜನಗಳನ್ನು ಗುರುತಿಸಿ, ಮಹಾರಾಜರು ಶ್ರೀ ಟಿ.ಕೃಷ್ಣಮಾಚಾರ್ಯರನ್ನು ಪ್ರೋತ್ಸಾಹಿಸಿದರು, ಅವರು ಪಟ್ಟಾಭಿ ಜೋಯಿಸ್ ಮತ್ತು ಬಿಕೆಎಸ್ ಅಯ್ಯಂಗಾರ್ ಅವರಿಗೆ ತರಬೇತಿ ನೀಡಿದರು.

ಕೃಷ್ಣರಾಜ ಒಡೆಯರ್ ಅವರು ಪಿಟೀಲು, ಕೊಳಲು, ಸಿತಾರ್, ವೀಣೆ, ಸ್ಯಾಕ್ಸೋಫೋನ್, ಮೃದಂಗಂ, ಪಿಯಾನೋ ಮತ್ತು ನಾದಸ್ವರಂ ಸೇರಿದಂತೆ ಹಲವಾರು ಸಂಗೀತ ವಾದ್ಯಗಳನ್ನು ನುಡಿಸಬಲ್ಲರು. ಅವರ ಪೂರ್ವವರ್ತಿಗಳಂತೆ, ಅವರು ಹಲವಾರು ಹಿಂದೂಸ್ತಾನಿ, ಕರ್ನಾಟಕ ಮತ್ತು ಪಾಶ್ಚಿಮಾತ್ಯ ಕಲಾವಿದರನ್ನು ಪೋಷಿಸಿದರು. ಮೈಸೂರು ಮಹಾರಾಜರ ಕೆಲವು ಗೌರವಾನ್ವಿತ ಅತಿಥಿಗಳಲ್ಲಿ ಗೌಹರ್ ಜಾನ್, ಅಬ್ದುಲ್ ಕರೀಂ ಖಾನ್ ಮತ್ತು ಆಗ್ರಾ ಘರಾನಾದ ಸದಸ್ಯರು- ಉಸ್ತಾದ್ ವಿಲಾಯತ್ ಹುಸೇನ್ ಖಾನ್ ಮತ್ತು ನಟ್ಟನ್ ಖಾನ್ ಸೇರಿದ್ದಾರೆ. ಬರ್ಕತುಲ್ಲಾ ಖಾನ್ ಅವರು ಅರಮನೆಯಲ್ಲಿ ಸಂಗೀತಗಾರರಾಗಿದ್ದರು. ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದ ಪ್ರಚಾರಕ್ಕಾಗಿ ಮಹಾರಾಜರು ಸಹ ಗುರುತಿಸಲ್ಪಟ್ಟರು ಎಂದು ತಿಳಿಸಿದರು.

ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ ಕನ್ನಡ ನಾಡಿನ ಪ್ರಾತಃ ಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರು ಆಧುನಿಕ ಕನ್ನಡ ನಾಡಿನ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್. ಇಂದು ನಮ್ಮ ರಾಜ್ಯ ರಾಜಧಾನಿ ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ವಿಶ್ವದಾದ್ಯಂತ ಬೆಂಗಳೂರು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ದೇಶ ಯುವಜನರು ಉದ್ಯೋಗಾವಕಾಶಗಳನ್ನು ಅರಸುವಾಗ ಅವರ ಮನಸ್ಸಿನಲ್ಲಿ ಮೂಡುವುದು ಮೊದಲಿಗೆ ಬೆಂಗಳೂರಿನ ಹೆಸರು. ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು, ಸ್ಟಾರ್ಟ್‌ ಅಪ್‌, ಶೈಕ್ಷಣಿಕ ವಲಯ ಹೀಗೆ ಬೆಂಗಳೂರು ಹತ್ತು ಹಲವು ಕ್ಷೇತ್ರಗಳಲ್ಲಿ ಇಂದು ವಿಶ್ವವ್ಯಾಪ್ತಿಯಾಗಿದೆ. ಆದರೆ ಈ ಸಾಧನೆ ಕೇವಲ ಒಂದೆರಡು ದಶಕಗಳಲ್ಲಿ ಸಾಧನೆಯಾದದ್ದಲ್ಲ. ಅದರ ಹಿಂದೆ ನೂರಾರು ವರ್ಷಗಳ ಪರಿಶ್ರಮವಿದೆ. ಈ ಎಲ್ಲವೂ ಮೈಸೂರಿನ ಪ್ರಸಿದ್ಧ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಕಿದ ಅಡಿಪಾಯದ ಮೇಲೆ ಎದ್ದು ನಿಂತಿರುವ ಭವ್ಯ ಸೌಧವಾಗಿದೆ ಎಂದು ಬಣ್ಣಿಸಿದರು.

ಯಾದವ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ನಾಲ್ವಡಿಯವರನ್ನ ವಿದ್ವಾಂಸರು, ಶಿಕ್ಷಣ ತಜ್ಣರು, ಇತಿಹಾಸಕಾರರು ’ ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಕರೆದಿದ್ದಾರೆ. ಗಾಂಧೀಜಿಯವರಿಂದಲೇ ‘ರಾಜರ್ಷಿ’ ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಂಸೆ ಪಡೆದಿದ್ದರು. ಒಡೆಯರ್ ಕೊಡುಗೆ ನೀಡದ ಕ್ಷೇತ್ರಗಳೇ ಇಲ್ಲ. ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್‌, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಲಯಗಳಲ್ಲಿ ಅಂದಿನ ಮೈಸೂರು ರಾಜ್ಯ ಮುಂಚೂಣಿಯಲ್ಲಿತ್ತು. ಇದರ ಹಿಂದೆ ಇವರ ಕೊಡುಗೆ ಅಪಾರವಾಗಿತ್ತು ಎಂದು ತಿಳಿಸಿದರು.

ಸಭೆಯಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಈಡಿಗ ಗುರುಪೀಠದ ಜಗದ್ಗುರು ಶ್ರೀ ರೇಣುಕಾನಂದ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ, ಕುಂಬಾರ ಗುರುಪೀಠದ ಜಗದ್ಗುರು ಶ್ರೀ ಬಸವ ಗುಂಡಯ್ಯ ಸ್ವಾಮೀಜಿ, ಶಿವಮೊಗ್ಗದ ಬಸವ ಮರುಳಸಿದ್ಧ ಸ್ವಾಮೀಜಿ, ಶಿಕಾರಿಪುರ ಚನ್ನಬಸವ ಸ್ವಾಮೀಜಿ, ಹಾವೇರಿ ಬಸವ ಶಾಂತಲಿಂಗ ಸ್ವಾಮೀಜಿ, ಸಿರಗುಪ್ಪ ಬಸವ ಭೂಷಣ ಸ್ವಾಮೀಜಿ, ಕೊರಟಗೆರೆ ಮಹಾಲಿಂಗ ಸ್ವಾಮೀಜಿ, ನೆಲಮಂಗಲ ಡಾ.ರಮಾನಂದ ಸ್ವಾಮೀಜಿ, ತುಮಕೂರಿನ ತಿಪ್ಪೇರುದ್ರ ಸ್ವಾಮೀಜಿ, ಬೆಳಗಾವಿ ಜಯದೇವ ಸ್ವಾಮೀಜಿ ಗೌರವ ಉಪಸ್ಥಿತಿಯಿದ್ದರು.

ಇದೇ ಸಂದರ್ಭದಲ್ಲಿ ಮಡಿವಾಳ ಜಗದ್ಗುರುಗಳ 40ನೇ ಜನ್ಮದಿನೋತ್ಸವದ ಶುಭಾಶಯಗಳನ್ನು ಶ್ರೀಗಳ ತಂಡ ತಿಳಿಸಿದರು.

Advertisement
Tags :
Advertisement