ಎನ್.ಪಿ.ಎಸ್. ರದ್ದುಗೊಳಿಸಿ ಹಳೆ ಪಿಂಚಣಿ ಪದ್ದತಿಯನ್ನು ಜಾರಿಗೆ ತರಬೇಕು : ಶಾಸಕ ಡಾ.ಎಂ.ಚಂದ್ರಪ್ಪ
ಹೊಳಲ್ಕೆರೆ : ಸಾರ್ವಜನಿಕ ಜೀವನದಲ್ಲಿ ಸರ್ಕಾರಿ ನೌಕರರ ಪಾತ್ರ ತುಂಬಾ ಮುಖ್ಯ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹೊಳಲ್ಕೆರೆ ತಾಲ್ಲೂಕು ಶಾಖೆಯಿಂದ ನೌಕರರ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ನಾಯಕತ್ವ ಗುಣಗಳ ಕಾರ್ಯಾಗಾರ, ಉತ್ತಮ ಸೇವಾ ನೌಕರರಿಗೆ ಪ್ರಶಸ್ತಿ ಪ್ರದಾನ, ಸರ್ವ ಸದಸ್ಯರ ಮಹಾಸಭೆ ಉದ್ಗಾಟಿಸಿ ಮಾತನಾಡಿದರು.
ರಾಜಕಾರಣಿಗಳು ನೌಕರರು ಒಂದು ಗಾಡಿಯ ಎರಡು ಚಕ್ರಗಳಿದ್ದಂತೆ ಒಟ್ಟೊಟ್ಟಿಗೆ ಸೇರಿ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸಲು ಸಾಧ್ಯ. ಜೀವನದಲ್ಲಿ ಸಿಕ್ಕಿರುವ ಅವಕಾಶವನ್ನು ಸಾರ್ವಜನಿಕರಿಗೆ ಅರ್ಪಿಸಿ ಆತ್ಮಸಾಕ್ಷಿಗನುಗುಣವಾಗಿ ಕೆಲಸ ಮಾಡಿ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಸದಾ ಇರುತ್ತದೆಂದು ನೌಕರರಿಗೆ ಭರವಸೆ ನೀಡಿದರು.
ಸರ್ಕಾರಿ ನೌಕರಿ ಎಲ್ಲರಿಗೂ ಸಿಗುವುದಿಲ್ಲ. ಪೂರ್ವಜನ್ಮದ ಪುಣ್ಯದಿಂದ ನಿಮಗೆ ನೌಕರಿ ಸಿಕ್ಕಿದೆ. ನಾಯಕತ್ವದ ಗುಣ ಬೆಳೆಸಿಕೊಳ್ಳುವುದರ ಜೊತೆ ಸಾರ್ವಜನಿಕರ ಕೆಲಸ ಮಾಡಿದ ಆತ್ಮತೃಪ್ತಿಯಿರಬೇಕು. ಕೆಲಸದಲ್ಲಿ ನಿರ್ಲಕ್ಷ್ಯ ತೋರುವವರನ್ನು ರಿಟೈರ್‍ಮೆಂಟ್ ಮಾಡುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿರುವುದರಿಂದ ನಿಮ್ಮ ಜವಾಬ್ದಾರಿಯನ್ನರಿತು ಕೆಲಸ ಮಾಡಿ.
2005 ರಲ್ಲಿ ಜಾರಿಗೆ ತಂದ ಎನ್.ಪಿ.ಎಸ್. ಪದ್ದತಿಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಪದ್ದತಿಯನ್ನು ಜಾರಿಗೆ ತರಬೇಕೆಂಬುದು ನಿಮ್ಮ ಬಹುದಿನಗಳ ಬೇಡಿಕೆಯಿದೆ. ವಿಧಾನಸಭೆ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ. ಬೆಳಗಾವಿ ಅಧಿವೇಶನದಲ್ಲೂ ನೌಕರರು ಎನ್.ಪಿ.ಎಸ್. ರದ್ದತಿಗಾಗಿ ಮುಷ್ಕರ ಮಾಡಿದ್ದಾರೆ. ಇದು ಅತ್ಯಂತ ಗಂಭೀರವಾದುದು ಎಂದರು.
ಸರ್ಕಾರಿ ನೌಕರ ಹಾಗೂ ಕುಟುಂಬ ನೆಮ್ಮದಿಯಾಗಿರಬೇಕಾದರೆ ಹಳೆ ಪಿಂಚಣಿ ಪದ್ದತಿ ಜಾರಿಯಾಗಬೇಕು. ಇಷ್ಟೊತ್ತಿಗಾಗಲೆ ಸರ್ಕಾರ ನಿಮ್ಮ ಬೇಡಿಕೆಯನ್ನು ಈಡೇರಿಸಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ ನಿಮ್ಮ ಅತಿ ಮುಖ್ಯವಾದ ಬೇಡಿಕೆ ಬಗ್ಗೆ ನಾನು ಕೂಡ ಸರ್ಕಾರದ ಗಮನ ಸೆಳೆದು ಎನ್.ಪಿ.ಎಸ್. ರದ್ದತಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲೋಕೇಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ
ಹೆಚ್.ಶ್ರೀನಿವಾಸ್, ಉಪ ತಹಶೀಲ್ದಾರ್ ಸುನಿಲ್‍ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಆರ್.ಅಶೋಕ್, ಮುಖ್ಯಾಧಿಕಾರಿ ವಾಸೀಂ, ವ್ಯಕ್ತಿತ್ವ ವಿಕಸನ ತರಬೇತುದಾರ ಹೆಚ್.ಎಸ್.ನವೀನ್‍ಕುಮಾರ್, ರಾಜ್ಯ ಪರಿಷತ್ ಸದಸ್ಯ ಶಿವಮೂರ್ತಿ ಸೇರಿದಂತೆ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ವಿವಿಧ ಇಲಾಖೆ ನೌಕರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.