For the best experience, open
https://m.suddione.com
on your mobile browser.
Advertisement

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

09:38 PM Apr 24, 2024 IST | suddionenews
ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ   ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ತಿರುಗೇಟು
Advertisement

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ ಗೊತ್ತಿದ್ದು ಹೋರಾಟಗಾರರಿಗೆ ಅಪಮಾನ ಮಾಡಲು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹೇಳಿದರು.

Advertisement

ನಗರದ ಐಯುಡಿಪಿ ಲೇಔಟ್‍ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗಾಗಿ ಜಿಲ್ಲೆಯ ಜನ ನಾಲ್ಕೈದು ದಶಕಗಳ ಕಾಲ ಹೋರಾಟ ನಡೆಸಿದ್ದಾರೆ ಎಂದರು.

ಇದಕ್ಕೆ ಸ್ಪಷ್ಟ ರೂಪ ದೊರೆತಿದ್ದು ಸಾಹಿತಿ ಬಂಜಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ಜಿಲ್ಲೆಯ ಪತ್ರಕರ್ತರು ಅಧ್ಯಯನ ಕೈಗೊಂಡು ನೀರಾವರಿ ಹೋರಾಟ ಸಮಿತಿ ಅಸ್ಥಿತ್ವಕ್ಕೆ ತಂದಾಗ. ಮೊದಲ ಅಧ್ಯಕ್ಷರು ಮುತ್ಸದ್ಧಿ ರಾಜಕಾರಣಿ ಎಚ್.ಹನುಮಂತಪ್ಪ, ಬಳಿಕ ಪಿ.ಕೋದಂಡರಾಮಯ್ಯ ಅಧ್ಯಕ್ಷರಾದ ಸಂದರ್ಭ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ನಂತರ ದಲಿತ ನಾಯಕ ಎಂ.ಜಯಣ್ಣ ಅಧ್ಯಕ್ಷರಾಗಿ ಸಮಿತಿಯನ್ನು ಮುನ್ನುಡಿಸಿದರು.

Advertisement

ಈ ಚಳವಳಿಗೆ ಪತ್ರಕರ್ತರು, ವಿದ್ಯಾರ್ಥಿ, ರೈತ, ಕನ್ನಡಪರ, ಕಾರ್ಮಿಕ ಸೇರಿದಂತೆ ವಿವಿಧ ಸಮುದಾಯದ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ. ಜಿಲ್ಲೆಯ ಎಲ್ಲ ಪಕ್ಷಗಳು, ಜನಪ್ರತಿನಿಧಿಗಳು ಬೆಂಬಲವಾಗಿ ನಿಂತಿದ್ದರು. ಆದರೆ ಬಿಜೆಪಿಯವರು ಮಾತ್ರ ಈ ವಿಷಯವನ್ನು ಎಲ್ಲಿಯೂ ಪ್ರಸ್ತಾಪಿಸದೆ ಜಿಲ್ಲೆಯ ಜನರಿಗೆ ಅಪಮಾನ ಮಾಡುತ್ತಿದ್ದಾರೆ ಎಂದರು.

2004ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಜೆಟ್‍ನಲ್ಲಿ ಯೋಜನೆ ಜಾರಿ ಕುರಿತು ಪ್ರಸ್ತಾಪ ಮಾಡಿತು. ಜತೆಗೆ ಸಾಧಕ-ಬಾಧಕ ಕುರಿತು ಅಧ್ಯಯ ನಡೆಸಲು ತೀರ್ಮಾನ ಕೈಗೊಂಡಿತು. ಬಳಿಕ ಕಾಂಗ್ರೆಸ್ಸಿನ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೆ.ಸಿ.ರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ, ಹೀಗೆ ವಿವಿಧ ಹಂತದಲ್ಲಿ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಶ್ರಮಿಸಿದೆ.

ಆದರೆ 2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭ ಪಡೆಯಲು ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದ ಬಳಿಕ ಅದೇ ವೇದಿಕೆಯಲ್ಲಿ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಿತು. ಆದರೆ, ಒಂದು ಬಿಡಿಗಾಸು ನೀಡದೆ ಯೋಜನೆಗೆ ಚಾಲನೆ ನೀಡಿದ್ದು ಬಹುದೊಡ್ಡ ವಂಚನೆ ಆಗಿತ್ತು ಎಂದು ದೂರಿದರು.

2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಯೋಜನೆಗೆ ಹೇರಳವಾಗಿ ಹಣ ನೀಡಿದರು. ಪರಿಣಾಮ ಕಾಮಗಾರಿ ತ್ವರಿತವಾಗಿ ಆರಂಭಗೊಂಡಿತು. ಆದರೆ, ಈ ಯೋಜನೆ ವಿಷಯದಲ್ಲಿ ಬಿಜೆಪಿ ನಾಯಕರು ಕೇವಲ ಸುಳ್ಳು ಹೇಳಿಕೊಂಡು, ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಭದ್ರಾ ಕಾಮಗಾರಿಯಲ್ಲೂ ಬಿಜೆಪಿಯವರು ಕಮಿಷನ್ ಪಡೆದಿರುವುದು ಜಗಜ್ಜಾಹಿರಾಗಿದೆ ಎಂದು ಆರೋಪಿಸಿದರು.

ಇನ್ನೇನೂ ಭದ್ರೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ನೀಡಿದೇವು ಎಂದು ಬಿಜೆಪಿಯವರೇ ಹೇಳಿದರು, ಜೊತೆಗೆ 5300 ಕೋಟಿ ರೂ. ಅನುದಾನ ಬಜೆಟ್‍ನಲ್ಲಿ ಘೋಷಣೆ ಮಾಡಿದರು. ಆದರೆ, ಇದ್ಯಾವುದು ಆಗಲಿಲ್ಲ. ಒಂದು ರೀತಿ ಜಿಲ್ಲೆಯ ಜನರನ್ನು ವಂಚಿಸುವ ಕೆಲಸ ಮಾಡಿದರು ಎಂದು ಟೀಕಿಸಿದರು.

ಈಗ ಮತ್ತೊಮ್ಮೆ ಜಿಲ್ಲಾಯಾದ್ಯಂತ ಯೋಜನೆ ವಿಷಯದಲ್ಲಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದು, ತಾಯಿ ಭದ್ರೆ ಮತ್ತು ಜಿಲ್ಲೆಯ ಜನರು ಇದನ್ನು ಸಹಿಸುವುದಿಲ್ಲ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರು, ಸಚಿವರು ಪ್ರದರ್ಶಿಸಿದ ಬದ್ಧತೆ ಹಾಗೂ ಜಿಲ್ಲೆಯ ಹೋರಾಟಗಾರರ ಶ್ರಮ ಜನರಿಗೆ ಗೊತ್ತಿದೆ. ಈ ಸತ್ಯ ಅರಿತು ಬಿಜೆಪಿಯವರು ಈಗಲಾದರೂ ಸುಳ್ಳು ಹೇಳುವುದು ನಿಲ್ಲಿಸಬೇಕು ಎಂದು ತಿಳಿಸಿದರು.

ಯೋಜನೆ ಕುರಿತು ಬಹಿರಂಗ ಚರ್ಚೆಯನ್ನು ಬಿಜೆಪಿಯರೇ ಏರ್ಪಡಿಸಲಿ, ದಿನಾಂಕ, ಸಮಯ, ಸ್ಥಳ ಎಲ್ಲವೂ ಅವರೇ ನಿರ್ಧರಿಸಲಿ. ಅಲ್ಲಿ ದಾಖಲೆ ಸಮೇತ ಚರ್ಚೆ ನಡೆಸಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ ಅವರು, ಚರ್ಚೆ ಬಳಿಕವಾದರೂ ಬಿಜೆಪಿಯವರು ಸುಳ್ಳು ಹೇಳುವುದನ್ನು ನಿಲ್ಲಿಸಬಹುದು ಎಂದು ವ್ಯಂಗ್ಯವಾಡಿದರು.

ಇಂದಿರಾಗಾಂಧಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಹಾಗೂ ಎರಡು ಭಾರಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಮತ್ತು ಕ್ಷೇತ್ರ ವ್ಯಾಪ್ತಿಯ ಶಾಸಕರು, ಸಚಿವರು, ಮುಖಂಡರು ಒಗ್ಗೂಟ್ಟಿನಿಂದ ಚುನಾವಣೆ ಎದುರಿಸುತ್ತಿರುವುದು ನನ್ನ ಗೆಲುವನ್ನು ಖಚಿತಪಡಿಸಿದೆ. ಜತೆಗೆ ಕಾಂಗ್ರೆಸ್ ಶಾಸಕರು, ಮುಖಂಡರು ತಾವೇ ಚುನಾವಣೆಗೆ ಸ್ಪರ್ಧಿಸಿದ್ದೇವೆ ಎಂಬ ಮನೋಭಾವನೆಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವುದು ಬಿಜೆಪಿಯವರಲ್ಲಿ ನಡುಕು ಉಂಟು ಮಾಡಿದ್ದು, ಚುನಾವಣೆಗೆ ಮುಂಚೆಯೇ ಸೋಲು ಒಪ್ಪಿಕೊಂಡಿರುವುದು ಯೋಗಿ ಆದಿತ್ಯನಾಥ್ ಕಾರ್ಯಕ್ರಮ ರದ್ದುಗೊಳಿಸಿರುವುದನ್ನು ದೃಢಪಡಿಸಿದೆ ಎಂದರು.

ಗ್ಯಾರಂಟಿ ಯೋಜನೆಗಳ ಕುರಿತು ಸುಳ್ಳು ಪ್ರಚಾರ ನಡೆಸುತ್ತಿದ್ದ ಬಿಜೆಪಿಯವರು ಕಾಪಿ ಮಾಡಿ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ. ಕುಟುಂಬದ ಯಜಮಾನಿಗೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ನೀಡುವ ಕಾಂಗ್ರೆಸ್ ಪಕ್ಷದ ಘೋಷಣೆ ಬಿಜೆಪಿಯವರನ್ನು ನಿದ್ದೆಗೆಡಿಸಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬರಲಿವೆ ಎಂದು ಬಿಜೆಪಿ ಪರವಿರುವ ಸಂಸ್ಥೆಗಳ ಸಮೀಕ್ಷೆಗಳೇ ಹೇಳುತ್ತಿವೆ. ಆದ್ದರಿಂದ ಬೆಚ್ಚಿಬಿದ್ದಿರುವ ಬಿಜೆಪಿ ನಾಯಕರು ದಕ್ಷಿಣ ಭಾರತದಲ್ಲಿ ಪ್ರಚಾರ ಕಾರ್ಯಕ್ರಮ ನಡೆಸಲು ಹಿಂಜರಿಯುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಡಿಸಿಸಿ ಕಾರ್ಯಧ್ಯಕ್ಷ ಹಾಲಸ್ವಾಮಿ, ಎನ್.ಎಸ್.ಯುಐ ಘಟಕದ ಜಿಲ್ಲಾಧ್ಯಕ್ಷ ಕಿರಣ್ ಯಾವದ್, ಕಾಂಗ್ರೆಸ್ ಮುಖಂಡರಾದ ರಘು, ಸತೀಶ್, ಕೋಟಿ, ಹರೀಶ್ ಉಪಸ್ಥಿತರಿದ್ದರು.

Tags :
Advertisement