ತಾಯಿ ಮಕ್ಕಳ ಆಸ್ಪತ್ರೆ ಲೋಕಾರ್ಪಣೆ | ಸಿಜೇರಿಯನ್ ಪ್ರಮಾಣ ತಗ್ಗಿಸಿ, ಉತ್ತಮ ಆರೋಗ್ಯ ಸೇವೆ ನೀಡಿ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಚಿತ್ರದುರ್ಗ.ಮಾರ್ಚ್.6: ದೇಶದಲ್ಲಿ ಸಿಜೇರಿಯನ್ ಹೆರಿಗೆ ಪ್ರಮಾಣ ಶೇ.30 ರಷ್ಟಿದೆ. ಅದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಪ್ರಮಾಣ ಶೇ.60 ರಷ್ಟು ಹಾಗೂ ತುಮಕೂರಿನ ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಶೇ.70 ರಷ್ಟಿರುವುದು ಕಳವಳಕಾರಿಯಾಗಿದೆ. ವೈದ್ಯರು ಸಿಜೇರಿಯನ್ ಪ್ರಮಾಣ ತಗ್ಗಿಸಿ, ಉತ್ತಮ ಆರೋಗ್ಯ ಸೇವೆ ನೀಡಲು ಮುಂದಾಗಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಹೆಚ್.ಎಂ) ಅಡಿಯಲ್ಲಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಬುಧವಾರ ಲೋಕಾರ್ಪಣೆ ಮಾಡಿದ ಆವರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎನ್.ಹೆಚ್.ಎಂ. ಅಡಿಯಲ್ಲಿ ರೂ.10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರ ಸದುಪಯೋಗ ಆಗಬೇಕು. ಆಸ್ಪತ್ರೆ ತಾಯಿ ಮಕ್ಕಳಿಗೆ ಆಸರೆಯಾಗಬೇಕು. ನಾಯಕನಹಟ್ಟಿಯಲ್ಲಿ ರೂ.8 ಕೋಟಿ, ಚಳ್ಳಕೆರೆಯಲ್ಲಿ ರೂ 13 ಕೋಟಿ, ಹಾಗೂ ಹಿರಿಯೂರು ನಗರದಲ್ಲಿ ರೂ.6 ಕೋಟಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಎನ್.ಹೆಚ್.ಎಂ. ಅಡಿ ರೂ.260 ಕೋಟಿ ವ್ಯಯಿಸಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ 2,25,250 ಜನರು ನೊಂದಣಿಯಾಗಿದ್ದಾರೆ.
ಇದುವರೆಗೂ ರೂ.51 ಕೋಟಿ ಹಣ ಆಯುಷ್ಮಾನ್ ಯೋಜನೆಯಡಿ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ. ಜನನಿ ಸುರಕ್ಷಾ ಯೋಜನೆ ಸೇರಿದಂತೆ ಅನೇಕ ಸೇವೆಗಳನ್ನು ಸಹ ನೀಡಲಾಗುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ಸ್ಪಂದನೆ ಸಿಗುತ್ತಿಲ್ಲ.ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು. ನುರಿತ ವೈದ್ಯರಿಂದ ಸೇವೆ ದೊರೆಯದಿದ್ದರೆ, ಜನರು ರಾಜಕಾರಣಗಳಿಗೆ ಶಾಪ ಹಾಕುತ್ತಾರೆ. ಇತ್ತೀಚಿಗೆ ಪಾವಗಡದಲ್ಲಿ ಕುಟುಂಬ ಯೋಜನೆ ಹಾಗೂ ಸಿಜೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ ಮೂವರು ಮಹಿಳೆಯರು ಮೃತರಾಗಿದ್ದಾರೆ. ಇದಕ್ಕೆ ಕಾರಣ ವೈದ್ಯರು ಹಣಕ್ಕಾಗಿ ಸ್ಪರ್ಧೆ ಮಾಡಿ, ಯಾವುದೇ ಮುಂಜಾಗೃತ ಕ್ರಮ ಇಲ್ಲದೆ ಆಪರೇಷನ್ ಮಾಡಿದ್ದಾಗಿದೆ ಎನ್ನಲಾಗುತ್ತಿದೆ ಹೀಗಾದರೇ ಜನರು ವೈದ್ಯರನ್ನು ನಂಬುವುದು ಹೇಗೆ ? ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಪ್ರಮಾಣ ಇಳಿಕೆ ಮಾಡಬೇಕು. ಅನಾರೋಗ್ಯಕ್ಕೆ ಒಳಪಟ್ಟು ಆಗಮಿಸುವ ರೋಗಿಗಳಿಗೆ ಆರೋಗ್ಯ ಸುಧಾರಣೆ ಆಗಿ ಸುರಕ್ಷಿತವಾಗಿ ಮನೆಗೆ ತೆರಳುವಂತಾಗಬೇಕು ಎಂದರು.
ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಜನರು ವೈದ್ಯೋ ನಾರಾಯಣೋ ಹರಿ ಎಂದು ಭಾವಿಸಿ ಗೌರವ ನೀಡುತ್ತಾರೆ. ವೈದ್ಯರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವೈದ್ಯರು ಉತ್ತಮ ಸೇವೆ ನೀಡಬೇಕು. ಚಿತ್ರದುರ್ಗ ಜಿಲ್ಲೆ ಸದಾ ಬರಗಾಲಕ್ಕೆ ತುತ್ತಾಗಿ ಜನರು ಸಂಕಷ್ಟದ ಸ್ಥಿತಿಯಲ್ಲಿ ಇರುತ್ತಾರೆ. ಬಡವರೇ ಹೆಚ್ಚಾಗಿ ಜಿಲ್ಲಾ ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಸ್ಪಂದನೆ ನೀಡಬೇಕು. ರೋಗಿಗಳನ್ನು ಬೇರೆ ಕಡೆಗೆ ಶಿಫಾರಸ್ಸು ಮಾಡುವುದು ನಿಲ್ಲಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿವೆ. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯ ಸೇವೆ ನೀಡಬೇಕು. ಹಳೆಯ ಕಟ್ಟಡದಲ್ಲಿ ಇರುವ ತಾಯಿ ಮಕ್ಕಳ ಆಸ್ಪತ್ರೆಯನ್ನು ಸಂಪೂರ್ಣವಾಗಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ, ಚಿತ್ರದುರ್ಗ ನಗರದ ಜಿಲ್ಲಾ ಆಸ್ಪತ್ರೆ 100 ವರ್ಷಗಳಷ್ಟು ಹಳೆಯದಾಗಿದೆ. ಅಕ್ಕ ಪಕ್ಕದ ಜಿಲ್ಲೆಯ ಜೊತೆಗೆ ಹೊರ ರಾಜ್ಯಗಳಿಂದ ರೋಗಿಗಳು ಬರುತ್ತಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 9 ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಘಟಕಗಳನ್ನು 15ಕ್ಕೆ ಏರಿಸಲು ಕ್ರಮವಹಿಸಲಾಗಿದೆ. ಇದರೊಂದಿಗೆ ಸಿ.ಎಸ್.ಅರ್ ನಿಧಿಯಲ್ಲಿ ಸಂಚಾರಿ ಡಯಾಲಿಸಿಸ್ ಘಟಕ ನೀಡಲು ಖಾಸಗಿ ಕಂಪನಿಗೆ ಕೋರಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್ ಸೌಲ್ಯಭ್ಯ ಲಭ್ಯವಿದೆ. 2021ರಲ್ಲಿಯೇ ತಾಯಿ ಮಕ್ಕಳ ಆಸ್ಪತ್ರೆ ಉದ್ಘಾಟನೆ ಮಾಡಬೇಕಿತ್ತು. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ ಕಟ್ಟಡವನ್ನು ರೋಗಿಗಳ ಚಿಕಿತ್ಸೆಗೆ ಬಳಸಲಾಗಿತ್ತು. ಕಳೆದ 6 ತಿಂಗಳಿಂದ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆಯುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 600 ರಿಂದ 700 ಸಹಜ ಹೆರಿಗೆ ಸೇರಿದಂತೆ, ಸುಮಾರು 1200 ರಿಂದ 1500 ಹೆರಿಗೆ ಆಗುತ್ತಿವೆ. ವೈದರು ಹಾಗೂ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಕುಟುಂಬ ಸದಸ್ಯರಂತೆ ಭಾವಿಸಿ ಸೇವೆ ನೀಡುವಂತೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ. ಅನ್ವರ್ ಭಾಷಾ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ.ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ರೇಣುಪ್ರಸಾದ್.ಜಿ.ಪಿ, ಚಿತ್ರದುರ್ಗ ವೈದ್ಯಕೀಯ ಕಾಲೇಜು ವಿಶೇಷಧಿಕಾರಿ ಡಾ.ಡಿ.ವೈ.ಯುವರಾಜ್, ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ಅಭಿನವ್ ಸೇರಿದಂತೆ, ಆರೋಗ್ಯ ರಕ್ಷಣಾ ಸಮಿತಿ ಸದಸ್ಯರು ಸೇತರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಬಿ.ಎಸ್. ನರ್ಸಿಂಗ್ ವಿದ್ಯಾರ್ಥಿನಿ ಸುಮಯ ಅವರ ತಂಡ ನಾಡಗೀತೆ ಹಾಗೂ ಪ್ರಾರ್ಥನೆ ನೆರವೇರಿಸಿದರು. ಮಕ್ಕಳ ತಜ್ಞ ಡಾ.ದೇವರಾಜ ಸ್ವಾಗತ ಕೋರಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಪದ ಕಲಾವಿದ ಮಂಜು ಮಾತೃವಂದನೆ ಗೀತೆ ಹಾಡಿದರು.