For the best experience, open
https://m.suddione.com
on your mobile browser.
Advertisement

ಮುಂಗಾರು, ಸಂಭಾವ್ಯ ಪ್ರಕೃತಿ ವಿಕೋಪ ನಿಯಂತ್ರಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

04:49 PM May 09, 2024 IST | suddionenews
ಮುಂಗಾರು  ಸಂಭಾವ್ಯ ಪ್ರಕೃತಿ ವಿಕೋಪ ನಿಯಂತ್ರಣ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ   ಜಿಲ್ಲಾಧಿಕಾರಿ ಟಿ ವೆಂಕಟೇಶ್
Advertisement

ಚಿತ್ರದುರ್ಗ : ಮೇ 09 : ಶೀಘ್ರದಲ್ಲಿ ಮುಂಗಾರು ಆರಂಭಗೊಳ್ಳುವ ನಿರೀಕ್ಷೆ ಇದ್ದು, ಜಿಲ್ಲೆಯಲ್ಲಿ ಸಂಭಾವ್ಯ ಪ್ರಕೃತಿ ವಿಕೋಪಗಳ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸದಾ ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಸೂಚಿಸಿದರು.

Advertisement
Advertisement

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ಸಾಲಿನ ಮುಂಗಾರು, ಪೂರ್ವ ಮುಂಗಾರು ಮಳೆ ಅವಧಿಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಳೆದ ದಶಕಗಳಿಂದೀಚೆಗೆ ಜಿಲ್ಲೆಯಲ್ಲಿ ಸಂಭವಿಸಿರಬಹುದಾದ ಮಳೆ ಅನಾಹುತಗಳನ್ನು ಗಮನದಲ್ಲಿರಿಸಿಕೊಂಡು, ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಲ್ಲಿ ಸಂಭವಿಸಬಹುದಾದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಗ್ರ ವರದಿಯನ್ನು ಸಿದ್ದಪಡಿಸಿ, ಅಗತ್ಯ ಕ್ರಮಗಳಿಗಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಸಲ್ಲಿಸುವಂತೆ ಅವರು ಸೂಚಿಸಿದರು.

Advertisement

Advertisement
Advertisement

ಈ ಅವಧಿಯಲ್ಲಿ ವಿಶೇಷವಾಗಿ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಸಣ್ಣ ಮತ್ತು ಭಾರೀ ನೀರಾವರಿ ಇಲಾಖೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಂಭಾವ್ಯ ಅವಘಡಗಳ ನಿಯಂತ್ರಣಕ್ಕೆ ಸಿದ್ಧರಿರುವಂತೆ ಸೂಚಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ನೀರು ಸಕಾಲದಲ್ಲಿ ಸಮರ್ಪಕವಾಗಿ ಹರಿದುಹೋಗದೇ ಜನಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗುವ, ಜನ-ಜಾನುವಾರು ಪ್ರಾಣಹಾನಿ ಆಗಬಹುದಾದ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪ್ರಸ್ತುತ ಚರಂಡಿಗಳಲ್ಲಿ ತುಂಬಿರುವ ಕಸವನ್ನು ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕೇಂದ್ರದಲ್ಲಿ ಎರಡು ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಲಾ ಒಂದು ಸಹಾಯವಾಣಿ ಕೇಂದ್ರವನ್ನು ಆರಂಭಿಸಲು ಆಯಾ ತಾಲೂಕುಗಳ ತಹಶೀಲ್ದಾರರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ದಿನದ 24ಗಂಟೆಯೂ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಅಗತ್ಯವೆನಿಸಿದಲ್ಲಿ ಅವಘಡ ಸಂಭವಿಸಿದ ತಾಲೂಕುಗಳಲ್ಲಿ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲು ಜಿಲ್ಲಾಡಳಿತ ಸಿದ್ಧವಾಗಿದೆ ಅಲ್ಲದೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖಾ ಪಡೆ, ನಾಗರೀಕ ರಕ್ಷಣಾ ದಳ, ಗೃಹರಕ್ಷಕ ದಳ, ಆಪದ್‍ಮಿತ್ರ ಅಡಿಯಲ್ಲಿ ತರಬೇತಿ ಪಡೆದ ಸಮುದಾಯ ಮಟ್ಟದ ಸ್ವಯಂ ಸೇವಕರನ್ನು ಜಾಗೃತಿಗೊಳಿಸಿ ಸನ್ನದ್ಧ ಸ್ಥಿತಿಯಲ್ಲಿಡಲು, ಲಭ್ಯವಿರುವ ರಕ್ಷಣಾ ಸಲಕರಣೆ ಮಾಹಿತಿ ಕ್ರೋಢೀಕರಿಸುವುದು ಹಾಗೂ ಎಲ್ಲಾ ಸಲಕರಣೆಗಳನ್ನು ಸುಸ್ಥಿತಿಯಲ್ಲಿರುವಂತೆ ಕ್ರಮವಹಿಸಿರುವುದಾಗಿ  ಜಿಲ್ಲಾಧಿಕಾರಿಗಳು ತಿಳಿಸಿದರು. ಕಾಳಜಿ ಕೇಂದ್ರಗಳ ಸ್ಥಾಪನೆ, ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವುದು, ಸಂತ್ರಸ್ಥರಿಗೆ ಊಟೋಪಹಾರ, ಆರ್ಥಿಕ ನೆರವು, ಪಡಿತರ ವಿತರಣೆಗೂ ಜಿಲ್ಲಾಡಳಿತದ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ನಿರಂತರವಾಗಿರುವಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ ಅವರು, ಮಳೆಗಾಲದಲ್ಲಿ ಜಿಲ್ಲೆಯ ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯಲು ಅಗತ್ಯವಾಗಿರುವ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಸಕಾಲದಲ್ಲಿ ರಸಗೊಬ್ಬರ ಪೂರೈಸಲು ದಾಸ್ತಾನು ಮಾಡಿಟ್ಟುಕೊಳ್ಳುವ ಬಗ್ಗೆಯೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಗಮನಹರಿಸುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತೀಕ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Tags :
Advertisement