ಡಿಸೆಂಬರ್ 23 ರಿಂದ ಗಾದ್ರಿಪಾಲನಾಯಕ ಸ್ವಾಮಿಯ ಸಾಲು ಎತ್ತಿನ ಗಾಡಿಗಳ ಮಿಂಚೇರಿ ಮಹೋತ್ಸವ : ಬಿ.ಕಾಂತರಾಜ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.20 : ಬುಡಕಟ್ಟು ಜನಾಂಗದ ಜನಕ, ಗೋರಕ್ಷಕ, ನುಡಿದಂತೆ ನಡೆದ ಸತ್ಯ ಸಂತ ಗಾದ್ರಿಪಾಲನಾಯಕ ಸ್ವಾಮಿಯ ಸಾಲು ಎತ್ತಿನ ಗಾಡಿಗಳ ಮಿಂಚೇರಿ ಮಹೋತ್ಸವ ತಾಲ್ಲೂಕಿನ ಬಚ್ಚಬೋರನಹಟ್ಟಿಯಿಂದ ಡಿ.23 ರಿಂದ ಆರಂಭಗೊಳ್ಳಲಿದ್ದು, ಬೆಳಿಗ್ಗೆ 7 ಗಂಟೆಗೆ ದೇವರ ಮಜ್ಜನ ಬಾವಿಯಲ್ಲಿ ಗಂಗಾ ಪೂಜೆ ನಂತರ ಬೆಳಿಗ್ಗೆ 11-30 ಕ್ಕೆ ಹೊರಡಲಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮುದಾಯದ ಬುಡಕಟ್ಟು ಉತ್ಸವ ಎತ್ತಿನಗಾಡಿ ಸಂಭ್ರಮ ಮಿಂಚೇರಿ ಮಹೋತ್ಸವ ಐದು ವರ್ಷಗಳಿಗೊಮ್ಮೆ ನಡೆಯಲಿದೆ. ಡಿ.27 ರಂದು ಮಧ್ಯಾಹ್ನ 2 ಗಂಟೆಗೆ ನಗರದ ರಾಜ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆ ಸಂಚರಿಸಲಿದೆ.
ಸ್ಥಳೀಯ ಶಾಸಕರು, ಸಚಿವರು 23 ರಂದು ಮೆರವಣಿಗೆ ಉದ್ಗಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ರಕ್ಷಣಾಧಿಕಾರಿ ಧರ್ಮೆಂದ್ರಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಇನ್ನು ಅನೇಕರು ಪಾಲ್ಗೊಳ್ಳಲಿದ್ದಾರೆಂದು ಹೇಳಿದರು.
ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಮಾತನಾಡಿ ಗಾದ್ರಿಪಾಲನಾಯಕ ಹಸುಗಳನ್ನು ಸಾಕಿಕೊಂಡಿದ್ದಾಗ ಹುಲಿಗೂ ಮತ್ತು ಗಾದ್ರಿಪಾಲನಾಯಕನ ನಡುವೆ ನಡೆದ ಸೆಣಸಾಟದಲ್ಲಿ ಸಾವನ್ನಪ್ಪಬೇಕಾಯಿತು ಎಂಬ ಇತಿಹಾಸವಿದೆ. ಹುಲಿ ಮತ್ತು ಗಾದ್ರಿಪಾಲನಾಯಕ ಸಮಾಧಿ ಮಿಂಚೇರಿಯಲ್ಲಿದೆ. ಸೀಬಾರ, ಗೂಳಯ್ಯನಹಟ್ಟಿ, ಕ್ಯಾಸಾಪುರ, ಕಡ್ಲೆಗುದ್ದು, ಕೋಣನೂರು, ಚುಕ್ಕೇನಹಳ್ಳಿ, ಸಿರಿಗೆರೆ, ದಡ್ಡಿಗೆನಹಾಳ್, ಮದಕರಿಪುರ, ಮಿಂಚೇರಿಪುರ, ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸಿ 27 ರಂದು ಚಿತ್ರದುರ್ಗಕ್ಕೆ ಆಗಮಿಸಲಿದೆ ಎಂದರು.
ನಗರಸಭೆ ಸದಸ್ಯ ದೀಪು, ತಮಟಕಲ್ಲು ಬಸಣ್ಣ, ಡಿ.ಗೋಪಾಲಸ್ವಾಮಿ ನಾಯಕ, ಬೋರಯ್ಯ, ಕಾಟಿಹಳ್ಳಿ ಕರಿಯಪ್ಪ, ಪ್ರಹ್ಲಾದ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.