ಚಿತ್ರದುರ್ಗದಲ್ಲಿ ನಾಳೆ ಮ್ಯಾಕ್ಸ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ : ಜಾಗ್ರತೆಯಿಂದ ಭಾಗಿಯಾಗಿ ಯಶಸ್ವಿಗೊಳಿಸಿ: ಕಿಚ್ಚ ಸುದೀಪ್
ಸುದ್ದಿಒನ್, ಚಿತ್ರದುರ್ಗ, ಡಿ.22 : ನಾಳೆ (ಡಿಸೆಂಬರ್. 22) ಸಂಜೆ 6 : 30ಕ್ಕೆ ನಗರದ ‘ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ಟೇಡಿಯಂ’ನಲ್ಲಿ ನಡೆಯುವ ‘ಮ್ಯಾಕ್ಸ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಚಿತ್ರದುರ್ಗ, ದಾವಣಗೆರೆ ಹಾಗೂ ಸುತ್ತಲಿನ ಜಿಲ್ಲೆಗಳ ತಮ್ಮ ಅಭಿಮಾನಿಗಳಿಗೆ ನಟ ಸುದೀಪ್ ವಿಡಿಯೋ ಮೂಲಕ ಆತ್ಮಿಯ ಆಮಂತ್ರಣ ನೀಡಿದ್ದಾರೆ. ಹೌದು ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ‘ಮ್ಯಾಕ್ಸ್’ ಸಿನಿಮಾ ಇದೇ ಡಿ. 25ರಂದು ವಿಶ್ವಾದ್ಯಂತ ಕನ್ನಡ ಸೇರಿದಂತೆ ಬಹು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಹಾಗಾಗಿ ಚಿತ್ರತಂಡ ಚಿತ್ರದುರ್ಗದಲ್ಲಿ ಇಂದು ‘ಮ್ಯಾಕ್ಸ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಸುದೀಪ್ ಹಾಗೂ ಚಿತ್ರತಂಡ ತಮ್ಮ ಅಭಿಮಾನಿಗಳು ಮತ್ತು ಅವರ ಕುಟುಂಬಗಳಿಗೆ ಜಾಗೃತಿ ಮೂಡಿಸುವ ವಿಡಿಯೋ ಮೂಲಕ ‘ಜಾಗ್ರತೆಯಿಂದ ಕಾರ್ಯಕ್ರಕ್ಕೆ ಭಾಗಿಯಾಗಿ ಯಶಸ್ವಿಗೊಳಿಸಿ’ ಎಂದು ಆತ್ಮಿಯ ಆಮಂತ್ರಣ ನೀಡಿದ್ದಾರೆ.
ಲಕ್ಷಾಂತರ ಜನ ಸೇರಲಿರುವ ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಸೇರಿದಂತೆ ನಟರಾದ ಡಾಲಿ ಧನಂಜಯ್, ವಿನಯ್ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ಶ್ರೇಯಸ್ ಮಂಜು, ಡಾರ್ಲಿಂಗ್ ಕೃಷ್ಣ, ನವೀನ್ ಶಂಕರ್, ನಿರೂಪ್ ಭಂಡಾರಿ ಹಾಗೂ ನಿರ್ದೇಶಕರಾದ ಎ.ಪಿ. ಅರ್ಜುನ್, ರೊಹೀತ್ ಪದಕಿ, ಅನೂಪ್ ಭಂಡಾರಿ ಭಾಗವಹಿಸಲಿದ್ದಾರೆ. ಜೊತೆಗೆ ‘ಮ್ಯಾಕ್ಸ್’ ಚಿತ್ರದ ಕಲಾವಿದರು, ತಂತ್ರಜ್ಞರು ಭಾಗವಹಿಸುವ ವೇದಿಕೆಯಲ್ಲಿ ಬಿಗ್‌ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ವಿನಯ್ ಗೌಡ, ನಟಿ ಶರಣ್ಯ ಶೆಟ್ಟಿ ಮುಂತಾದವರು ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಅನೂಶ್ರೀ ನಿರೂಪಣೆ ಮಾಡಲಿದ್ದಾರೆ.