ಜನವರಿ 28 ರಂದು ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಬೃಹತ್ ಜಾಗೃತಿ ಸಮಾವೇಶ : ರಾಮಚಂದ್ರಪ್ಪ ಹೇಳಿಕೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.27 : ಮೇಲ್ಜಾತಿಯವರು ಶೋಷಿತರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿರುವುದರಿಂದ ಸಮಾವೇಶದ ಮೂಲಕ ದಲಿತರು, ಹಿಂದುಳಿದವರು, ಆದಿವಾಸಿ, ಅಲೆಮಾರಿಗಳು, ಅಲ್ಪಸಂಖ್ಯಾತರು ಶಕ್ತಿ ಪ್ರದರ್ಶಿಸಬೇಕಿದೆ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕ ರಾಮಚಂದ್ರಪ್ಪ ಕರೆ ನೀಡಿದರು.
ಮುಂದಿನ ತಿಂಗಳು 28 ರಂದು ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ನಡೆಯುವ ಶೋಷಿತ ಸಮುದಾಯಗಳ ಬೃಹತ್ ಜಾಗೃತಿ ಸಮಾವೇಶದ ಅಂಗವಾಗಿ ದಾವಣಗೆರೆ ರಸ್ತೆಯಲ್ಲಿರುವ ಎನ್.ಬಿ.ಟಿ.ಹಾಲ್‍ನಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಬುಧವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ದಾವಣಗೆರೆಯಲ್ಲಿ ನಡೆದ ವೀರಶೈವ-ಲಿಂಗಾಯತರ ಮಹಾ ಅಧಿವೇಶನದಲ್ಲಿ ಕಾಂತರಾಜ್ ವರದಿಯನ್ನು ವಿರೋಧಿಸುವುದಾಗಿ ನಿರ್ಣಯ ತೆಗೆದುಕೊಳ್ಳುವ ಮೂಲಕ ನಮ್ಮ ಮೇಲೆ ಸವಾರಿ ಮಾಡುವುದಾಗಿ ಸಂದೇಶ ನೀಡಿದ್ದಾರೆ. ಸರ್ಕಾರ ಇನ್ನು ವರದಿಯನ್ನೇ ಬಿಡುಗಡೆಗೊಳಿಸಿಲ್ಲ. ವೈಜ್ಞಾನಿಕ-ಅವೈಜ್ಞಾನಿಕ ಎಂದು ಹೇಗೆ ಹೇಳಲು ಸಾಧ್ಯ. 1931 ರಲ್ಲಿ ಜಾತಿವಾರು ಸಮೀಕ್ಷೆಯಾಗಿತ್ತು. 92 ವರ್ಷಗಳ ನಂತರ ಈಗ ಮತ್ತೆ ಜಾತಿವಾರು ಜನಗಣತಿಯಾಗಿದೆ. ಲಿಂಗಾಯತರು, ವಕ್ಕಲಿಗರು ಹಿಂದುಳಿದವರಲ್ಲ ಎಂದು ನಾಗನಗೌಡ ಆಯೋಗದ ವರದಿಯಲ್ಲಿ ತೋರಿಸಿಲ್ಲದ ಕಾರಣ ಇದನ್ನು ವಿರೋಧಿಸಿದರು. ಹಾವನೂರ್ ಆಯೋಗದ ವರದಿಯನ್ನು ತಿರಸ್ಕರಿಸಿದ್ದರು. ಆದರೆ ಹಿಂದುಳಿದ ವರ್ಗಗಳ ಹರಿಕಾರ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ದಿಟ್ಟತನದಿಂದ ವರದಿಯನ್ನು ಜಾರಿಗೊಳಿಸಿದರು. ಶೋಷತ ಸಮುದಾಯಗಳು ಮೈಮರೆತು ಕೂತರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿ.ಪಿ.ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತಂದ ಪರಿಣಾಮ ಹಿಂದುಳಿದವರಿಗೆ ಮೀಸಲಾತಿ ಸಿಕ್ಕಿತು. ಆಗ ಆರ್.ಎಸ್.ಎಸ್.ನವರು ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿದರು. ಮೇಲ್ಜಾತಿಯವರ ದಬ್ಬಾಳಿಕೆಗೆ ಕಡಿವಾಣ ಹಾಕಬೇಕಿದೆ. ರಾಜ್ಯ ಸರ್ಕಾರ ಶೋಷಿತರ ಉದ್ದಾರ ಮಾಡಬೇಕೆಂದು ಒತ್ತಾಯಿಸುವುದಕ್ಕಾಗಿ ಮುಂದಿನ ತಿಂಗಳು ರಾಜ್ಯದ ಮುಖ್ಯಮಂತ್ರಿ ಸೇರಿ ಎಲ್ಲಾ ಮುಖಂಡರನ್ನು ಆಹ್ವಾನಿಸಲಾಗುವುದು. ಲಕ್ಷಾಂತರ ಸಂಖ್ಯೆಯಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಆದಿವಾಸಿ, ಅಲೆಮಾರಿಗಳು ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಮಾತನಾಡಿ ಮುಂದಿನ ತಿಂಗಳು ನಡೆಯುವ ಸಮಾವೇಶ ಸಾಂಸ್ಕøತಿಕ ಚಳುವಳಿಯಾಗಿ ರೂಪುಗೊಂಡಾಗ ಮಾತ್ರ ಹಿಂದುಳಿದ ವರ್ಗ ಶೋಷಿತರ ಸಮುದಾಯಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ ಬ್ರಾಹ್ಮಣರು, ಮನುವಾದ ಸಿದ್ದಾಂತವುಳ್ಳವರು ನಮ್ಮನ್ನು ಆಳುತ್ತಿರುತ್ತಾರೆ. ಅನೇಕ ರೀತಿಯ ವ್ಯತಿರಿಕ್ತ ಸಮಸ್ಯೆಗಳು ನಮ್ಮ ಮುಂದಿದೆ. ಸಾಮಾಜಿಕ, ಧಾರ್ಮಿಕ ನೆಲೆಗಳಲ್ಲಿ ವಿಭಜನೆಯಾಗುತ್ತಿದೆ. ನಮ್ಮ ಮೇಲಿನ ದಬ್ಬಾಳಿಕೆಗೆ ಸಾಂಸ್ಕøತಿಕ ಉಪಕರಣಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಅಪಾಯದ ಅಂಚಿನಲ್ಲಿರುವ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ದಲಿತರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರು, ಆದಿವಾಸಿ, ಅಲೆಮಾರಿಗಳು ಒಗ್ಗಟ್ಟಿನಿಂದ ಇರಬೇಕಾಗುತ್ತದೆ. ಶೋಷಿತರ ಜಾಗೃತಿ ಸಮಾವೇಶವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಮುಂದಿನ ತಿಂಗಳು ನಡೆಯಲಿರುವ ಶೋಷಿತರ ಜಾಗೃತಿ ಸಮಾವೇಶ ಯಾರ ವಿರುದ್ದವಾಗಿ ಅಲ್ಲ. ನಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಜಾತಿ ಧರ್ಮಗಳ ವಿರುದ್ದ ಎತ್ತಿಕಟ್ಟುವ ಕೆಲಸವಾಗುತ್ತಿದೆ. ಎಲ್ಲಾ ಸಮಸ್ಯೆಗಳನ್ನು ಹೆದರಿಸಿ ಒಂದಾಗಿ ಬಾಳುವ ಹಕ್ಕು ನೀಡಿರುವುದು ಸಂವಿಧಾನ. ಕಾಂತರಾಜ್ ವರದಿಯನ್ನು ಸರ್ಕಾರ ಬಿಡುಗಡೆಗೊಳಿಸಬೇಕಿದೆ ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡುತ್ತ ಹಿಂದುಳಿದ, ಶೋಷಿತ ಸಮುದಾಯಗಳ ಶಕ್ತಿ ಪ್ರದರ್ಶನವಾಗಬೇಕು. ಶೋಷಿತ ಸಮುದಾಯಗಳು ಮುಂದೆ ಒಂದಾಗಿದ್ದರೆ ರಾಜಕೀಯ ಶಕ್ತಿ ಪಡೆದುಕೊಳ್ಳಬಹುದು. ಅನೇಕ ಆಯೋಗಗಳು ಬಂದಿದೆ. ಕಾಂತರಾಜ್ ಆಯೋಗದ ವರದಿ ಜಾರಿಯಾಗಲೇಬೇಕು. ಮೇಲ್ಜಾತಿಯವರು ವರದಿ ಬಗ್ಗೆ ಭಯ ಪಡುವುದು ಏಕೆ? ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿಟ್ಟ ಹೆಜ್ಜೆ ಇಡಬೇಕಿದೆ ಎಂದರು.
ಭೋವಿ ಸಮಾಜದ ಮುಖಂಡ ದಾವಣಗೆರೆ ಡಿ.ಬಸವರಾಜ್ ಮಾತನಾಡಿ ಹಿಂದುಳಿದ ವರ್ಗಗಳ ಸಮಾವೇಶ ಅನಿವಾರ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಿರೋಧ ಪಕ್ಷದವರು ಕಿರುಕುಳ ನೀಡುತ್ತಿರುವುದರಿಂದ ಶೋಷಿತ ಸಮುದಾಯಗಳು ಅವರ ರಕ್ಷಣೆಗೆ ನಿಲ್ಲಬೇಕಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡುತ್ತ 260 ವರ್ಷಗಳ ಹಿಂದೆಯೇ ಹಿಂದುಳಿದ ಜನಾಂಗಕ್ಕೆ ಭೂಮಿಯ ಒಡೆತನ ನೀಡಿದ ಟಿಪ್ಪು ತನ್ನ ಸೈನ್ಯದಲ್ಲಿ ಶೇ.80 ರಷ್ಟು ದಲಿತರು, ಹಿಂದುಳಿದವರು, ಶೋಷಿತರನ್ನು ನೇಮಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಕಾಂಗ್ರೆಸ್ ಮುಖಂಡ ಜೆಜೆ.ಹಟ್ಟಿ ತಿಪ್ಪೇಸ್ವಾಮಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಇವರುಗಳು ಮಾತನಾಡಿದರು.
ಶೋಷಿತ ಸಮುದಾಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮ್, ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ರಾಮಕೃಷ್ಣ, ವೆಂಕಟಪತಿ ಸುಬ್ಬರಾಜು, ಮೇಯರ್ ರಾಮಚಂದ್ರಪ್ಪ, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಮಾನವಿ ವೀರಣ್ಣ, ಕಾರ್ಯದರ್ಶಿ ಬಸವರಾಜ್ ಬಸಲಿಗುಂದಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಯೋಗೇಶ್‍ಬಾಬು, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್, ಸವಿತಾ ಸಮಾಜದ ಎನ್.ಡಿ.ಕುಮಾರ್, ಛಲವಾದಿ ಜನಾಂಗದ ಹೆಚ್.ಸಿ.ನಿರಂಜನಮೂರ್ತಿ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಪ್ಪ, ಅಲೆಮಾರಿ ಸಮುದಾಯದ ಎಸ್.ಲಕ್ಷ್ಮಿಕಾಂತ್, ಕೊರಚ ಸಮಾಜದ ಕೃಷ್ಣಪ್ಪ, ಎಂ.ಪಿ.ಶಂಕರ್, ರೂಪ ಕೃಷ್ಣಪ್ಪ, ಕುಶಲಕರ್ಮಿ ಜನಾಂಗದ ಪ್ರಸನ್ನಕುಮಾರ್, ಪ್ರಕಾಶ್‍ನಾಯ್ಕ, ದೇವರಾಜ್, ರಾಜ್‍ಕುಮಾರ್ ಸೊಲೋಮನ್ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ಮಾಜಿ ಸದಸ್ಯರುಗಳಾದ ಆರ್.ಕೃಷ್ಣಮೂರ್ತಿ, ಆರ್.ನರಸಿಂಹರಾಜ, ಗೊಲ್ಲ ಜನಾಂಗದ ದೊಡ್ಡಮಲ್ಲಯ್ಯ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಛಲವಾದಿ ಸಮಾಜದ ಎಸ್.ಎನ್.ರವಿಕುಮಾರ್ ಸೇರಿದಂತೆ ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತ ದಲಿತ ಸಮುದಾಯದ ಅನೇಕರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.