ಮಾಯಾವತಿ ವಿರುದ್ಧ ಬೇಸತ್ತು ಬಹುಜನ ಸಮಾಜ ಪಾರ್ಟಿಗೆ ಸಾಮೂಹಿಕ ರಾಜೀನಾಮೆ : ಎನ್. ಪ್ರಕಾಶ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 05 : ಪರಿಶಿಷ್ಟ ಜಾತಿಯಲ್ಲಿನ ಒಳ ಪಂಗಡಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸರಿಯಿಲ್ಲವೆಂದಿರುವ ಬಿಎಸ್ಪಿ. ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ವಿರುದ್ದ ಬೇಸತ್ತು ಜಿಲ್ಲಾ ಬಿಎಸ್‍ಪಿ.ಯ ಸಮಿತಿಯ ಎಲ್ಲರೂ ಸಾಮೂಹಿಕವಾಗಿ ರಾಜಿನಾಮೆ ನೀಡಿದ್ದೇವೆಂದು ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಪ್ರೀಂಕೋರ್ಟ್‍ನ ಮಹತ್ತರ ತೀರ್ಪನ್ನು ವಿರೋಧಿಸಿರುವ ಮಾಯಾವತಿಯವರ ಹೇಳಿಕೆ ವಿರುದ್ದ ಬೇಸತ್ತು ರಾಜ್ಯಾಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಿದ್ದು, ಕರ್ನಾಟಕದಲ್ಲಿ ಬಹುಜನ ಸಮಾಜ ಪಾರ್ಟಿಯನ್ನು ಪುನರ್ ರಚಿಸುತ್ತೇವೆ. ರಾಜ್ಯಾಧ್ಯಕ್ಷ ಮಾಯಸಂದ್ರ ಮುನಿಯಪ್ಪರವರು ಕೂಡ ಈಗಾಗಲೆ ರಾಜೀನಾಮೆ ನೀಡಿದ್ದಾರೆ. ರಾಜ್ಯದಿಂದ ಐವರು ನಾಯಕರು ಅಹವಾಲು ಸಲ್ಲಿಸಲು ಹೋದಾಗ ಸೌಜನ್ಯಕ್ಕಾದರೂ ಮಾತನಾಡಿಸದೆ ಅವಮಾನ ಮಾಡಿರುವುದರ ವಿರುದ್ದ ಹದಿನಾಲ್ಕು ಪುಟಗಳ ಪತ್ರ ಬರೆದಿದ್ದೇವೆ. ನಮಗೆ ಅಸಮಾಧಾನವಿರುವುದರಿಂದ ಕರ್ನಾಟಕ ಬಹುಜನ ಪಾರ್ಟಿಯನ್ನು ಕಟ್ಟುತ್ತೇವೆಂದು ಎನ್.ಪ್ರಕಾಶ್ ಹೇಳಿದರು.
ಬಿಎಸ್‍ಪಿ. ಜಿಲ್ಲಾ ಸಂಯೋಜಕ ಕೆ.ಎನ್.ದೊಡ್ಡೊಟ್ಟೆಪ್ಪ, ಸಂಯೋಜಕ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಹನುಮಂತರಾಯ, ಕಾರ್ಯದರ್ಶಿಗಳಾದ ಶ್ರೀನಿವಾಸ್
ಎಂ.ಜಗದೀಶ್, ಲಕ್ಷ್ಮಕ್ಕ, ರಾಘವೇಂದ್ರ, ಮಹಾಲಿಂಗಪ್ಪ, ಚಂದ್ರಣ್ಣ, ರಂಗಸ್ವಾಮಿ, ನರಸಿಂಹಮೂರ್ತಿ, ಗುರುಸ್ವಾಮಿ, ಗೋವಿಂದಪ್ಪ, ರಾಜೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.