ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ : ಜಿಲ್ಲಾಧಿಕಾರಿ ವೆಂಕಟೇಶ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ಕಳೆದ ಹದಿನಾಲ್ಕರಿಂದ ಆರಂಭಗೊಂಡಿರುವ ಸ್ವಚ್ಚತಾ ಹಿ ಸೇವಾ ಸಪ್ತಾಹದ ಅಂಗವಾಗಿ ಐತಿಹಾಸಿಕ ಕೋಟೆ ಆವರಣದಲ್ಲಿ ಸ್ವತಃ ಜಿಲ್ಲಾಧಿಕಾರಿ ಬಿ.ವೆಂಕಟೇಶ್‍ರವರು ನಗರಸಭೆ ಹಾಗೂ ಇತರೆ ಸಂಘ ಸಂಸ್ಥೆಗಳ ಜೊತೆಗೂಡಿ ಕಸ ಗುಡಿಸುವ ಮೂಲಕ ಜನಸಾಮಾನ್ಯರಲ್ಲಿ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಿದರು.
ಕೋಟೆ ಆವರಣದಲ್ಲಿ ಸುತ್ತಾಡಿ ಅಲ್ಲಲ್ಲಿ ಬಿದ್ದಿದ್ದ ನೀರಿನ ಖಾಲಿ ಬಾಟಲ್ ಹಾಗೂ ಕುರುಕಲು ತಿಂಡಿಗಳ ಪಾಕೆಟ್‍ಗಳನ್ನು ಹುಡುಕಿ ಹುಡುಕಿ ತೆಗೆದು ಡಸ್ಟ್ ಬಿನ್‍ನಲ್ಲಿ ಹಾಕಿದರು.
ಕೋಟೆ ಆವರಣದಲ್ಲಿ ಬೆಳ್ಳಂಬೆಳಿಗ್ಗೆ ಸುತ್ತಾಡಿ ಸ್ವಚ್ಚಗೊಳಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟೇಶ್ ಬಿ. ದೇಶಾದ್ಯಂತ ಸ್ವಚ್ಚತಾ ಹೀ ಸೇವಾ ಸಪ್ತಾಹ ಆರಂಭಗೊಂಡು ಅ.2 ಗಾಂಧಿಜಯಂತಿವರೆಗೆ ನಡೆಯಲಿದೆ. ದೇಶದ ಪ್ರಧಾನಿ ನರೇಂದ್ರಮೋದಿರವರ ಕನಸಿನಂತೆ ಎಲ್ಲೆಡೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಪ್ರಶಸ್ತಿ ಪಡೆಯುವುದಕ್ಕಿಂತ ಮುಖ್ಯವಾಗಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಜನ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಇದರಿಂದ ನಗರದ ಸೌಂದರ್ಯ ಹೆಚ್ಚುತ್ತದೆ. ಮನೆಯಲ್ಲಿನ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿಸಿ ಪ್ರತಿನಿತ್ಯ ಬೆಳಿಗ್ಗೆ ಮನೆ ಬಾಗಿಲಿಗೆ ಬರುವ ನಗರಸಭೆ ವಾಹನಗಳಿಗೆ ಹಾಕಬೇಕು. ಎಲ್ಲೆಂದರಲ್ಲಿ ಕಸ ಮತ್ತು ಪ್ಲಾಸ್ಟಿಕ್ ಬಾಟಲ್‍ಗಳನ್ನು ಎಸೆಯುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತರಾದ ಶ್ರೀಮತಿ ರೇಣುಕ. ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಡಾನ್‍ಬೋಸ್ಕೊ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು, ಪ್ರಾಂಶುಪಾಲರಾದ ನಾಗರಾಜ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಮಜಹರ್‍ವುಲ್ಲಾ ಇನ್ನು ಅನೇಕರು ಸ್ವಚ್ಚತೆಯಲ್ಲಿ ಪಾಲ್ಗೊಂಡಿದ್ದರು.