ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ : ಶಾಸಕ ಡಾ.ಎಂ.ಚಂದ್ರಪ್ಪ ಭಾಗಿ
ವರದಿ ಮತ್ತು ಫೋಟೋ ಕೃಪೆ,
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಹೊಳಲ್ಕೆರೆ, ಅಕ್ಟೋಬರ್. 05, ಹೊಳಲ್ಕೆರೆ, ಅಕ್ಟೋಬರ್. 05 : ರಾಜಕೀಯಕ್ಕಿಂತ ಮುಖ್ಯವಾಗಿ ಒಗ್ಗಟ್ಟಾಗಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ನಾಯಕ ಜನಾಂಗಕ್ಕೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಮಹರ್ಷಿ ಜಯಂತಿ ಆಚರಿಸುವ ಕುರಿತು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಾಲ್ಮೀಕಿ ಮಹರ್ಷಿ ಅದ್ಬುತವಾದ ರಾಮಾಯಣ ಗ್ರಂಥ ರಚಿಸಿ ಶ್ರೀರಾಮನ ಆದರ್ಶಗಳನ್ನು ಸಮಾಜಕ್ಕೆ ಪರಿಚಯಿಸಿದರು. 2009-10 ರಲ್ಲಿ ವಾಲ್ಮೀಕಿ ಮುರಾರ್ಜಿ ದೇಸಾಯಿ ಶಾಲೆ ಆರಂಭಿಸಲಾಯಿತು. ಎಸ್ಸಿ.ಎಸ್ಟಿ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು 21 ಕೋಟಿ ರೂ.ವೆಚ್ಚದಲ್ಲಿ ಬೊಮ್ಮನಕಟ್ಟೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಬಿ.ಸಿ.ಎಂ. ಮತ್ತು ಸಾಮಾನ್ಯ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಹದಿಮೂರು ಕೋಟಿ ರೂ.ವೆಚ್ಚದಲ್ಲಿ ಎರಡು ಹಾಸ್ಟೆಲ್‍ಗಳನ್ನು ಕಟ್ಟಲಾಗುವುದು. ಗುಣಮಟ್ಟದ ರಸ್ತೆ, ಶಾಲಾ-ಕಾಲೇಜುಗಳ ನಿರ್ಮಾಣವಾಗಿದೆ. ತಾಲ್ಲೂಕಿನಾದ್ಯಂತ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಾರದೆಂದು ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ಪೂರೈಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಸರ್ಕಾರದಿಂದ ಹದಿನೇಳರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುವುದು. 26 ರಂದು ನೀವುಗಳು ಅದ್ದೂರಿಯಾಗಿ ಆಚರಿಸುವ ವಾಲ್ಮೀಕಿ ಜಯಂತಿ ಕುರಿತು ಸಾಧಕ ಬಾಧಕಗಳನ್ನು ಚರ್ಚಿಸಿ ಸಿದ್ದತೆ ಮಾಡಿಕೊಳ್ಳಿ. ನನ್ನ ಸಂಪೂರ್ಣ ಸಹಕಾರವಿರುತ್ತದೆ. ಬಡ ಮಕ್ಕಳಿಗೆ ಅನುಕೂಲ ಮಾಡುವುದು ರಾಜಕಾರಣಿಗಳ ಕರ್ತವ್ಯ. ಅಧಿಕಾರವಿದ್ದಾಗ ಹತ್ತಾರು ಜನಕ್ಕೆ ಉಪಯೋಗವಾಗುವ ರೀತಿಯಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದರು.
ಮದಕರಿನಾಯಕ, ಬಿಚ್ಚುಗತ್ತಿ ಭರಮಣ್ಣನಾಯಕ ಹಾಗೂ ಮಹರ್ಷಿ ವಾಲ್ಮೀಕಿರವರ ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಅವರ ಚಿಂತನೆಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವಂತೆ ನಾಯಕ ಜನಾಂಗಕ್ಕೆ ಶಾಸಕ ಡಾ.ಎಂ.ಚಂದ್ರಪ್ಪ ಮನವಿ ಮಾಡಿದರು.
ಹೊಳಲ್ಕೆರೆ ತಹಶೀಲ್ದಾರ್ ಶ್ರೀಮತಿ ಬೀಬಿ ಫಾತಿಮ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರೇಣುಕಾದೇಸಾಯಿ, ಸಮಾಜದ ಮುಖಂಡರುಗಳಾದ ರಾಮಣ್ಣ, ತಿಪ್ಪೇಸ್ವಾಮಿ
ಪುಟ್ಟಣ್ಣ, ರಂಗಸ್ವಾಮಿ, ಸುರೇಶ್‍ಗೌಡ್ರು, ಹೊರಕೇರಪ್ಪ, ಹನುಮಂತಪ್ಪ, ಲೋಹಿತ್, ರಾಜಣ್ಣ, ವಿವಿಧ ಇಲಾಖೆ ಅಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.