For the best experience, open
https://m.suddione.com
on your mobile browser.
Advertisement

ಲಿಂಗಾಯಿತ ಮತ್ತು ಇಸ್ಲಾಂ ಧರ್ಮ ಬೇರೆಯಾದರೂ ಸಮಾನತೆಯಿದೆ : ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

02:41 PM Sep 04, 2024 IST | suddionenews
ಲಿಂಗಾಯಿತ ಮತ್ತು ಇಸ್ಲಾಂ ಧರ್ಮ ಬೇರೆಯಾದರೂ ಸಮಾನತೆಯಿದೆ   ಡಾ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 :
ಸಮಾನತೆಯ ಹರಿಕಾರ ಬಸವಣ್ಣ, ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಮಹಮದ್ ಪೈಗಂಬರ್‍ರವರ ಮೇಲೆಯೂ ಆಪಾದನೆಗಳು ಬಂದಿದ್ದವು. ಎಲ್ಲವನ್ನು ಸಮಾಧಾನದಿಂದ ಸ್ವೀಕರಿಸಿ ಸಮಾಜಕ್ಕೆ ಬೆಳಕು ನೀಡಿದ ಮಹಾತ್ಮರು ಎಂದು ಹೊಸದುರ್ಗ ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕುರಾನ್ ಪ್ರವಚನ ಉದ್ಘಾಟಿಸಿ ಮಾತನಾಡಿದರು.

Advertisement

ಸಮಾಜದಲ್ಲಿ ಮೆಚ್ಚುವವರು ಇದ್ದಾರೆ. ಚುಚ್ಚುವವರು ಇದ್ದಾರೆ. ಮೆಚ್ಚುಗೆಗೆ ಹಿಗ್ಗಬಾರದು, ಟೀಕೆಗೆ ಕುಗ್ಗಬಾರದು. ಎಲ್ಲವನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ವಿ ಜೀವನ ನಡೆಸಬಹುದು. ಅರಿವು ಜ್ಞಾನ ಇದ್ದ ಕಡೆ ಅಜ್ಞಾನ ನಿವಾರಣೆಯಾಗುತ್ತದೆ. ಭಾರತವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆಯುತ್ತಾರೆ.

ಪೈಗಂಬರ್, ಬಸವಣ್ಣ ಇನ್ನು ಅನೇಕ ಸಾಧು ಸಂತರುಗಳು ಸಿಹಿ ಕೊಟ್ಟಿದ್ದಾರೆ. ಆದರೆ ಸಿಹಿಯನ್ನು ಆಸ್ವಾದಿಸುವ ಮನಸ್ಸುಗಳು ಕಡಿಮೆಯಾಗುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಧರ್ಮ ಜಾತಿ ಹೆಸರಿನಲ್ಲಿ ಮತಾಂಧತೆ ಜಾಸ್ತಿಯಾಗುತ್ತಿದೆ. ಅದರಲ್ಲೂ ವಿದ್ಯಾವಂತರು ಹೆಚ್ಚು ಮತಾಂಧತೆಗೆ ಬಲಿಯಾಗುತ್ತಿರುವುದು ಅಪಾಯಕಾರಿ. ಅನೇಕ ಧರ್ಮ ಭಾಷೆಯವರು ದೇಶದಲ್ಲಿದ್ದಾರೆ. ಎಲ್ಲರೂ ಒಂದೆ ಎಂಬ ಭಾವನೆ ಮೂಡಬೇಕು. ಒಬ್ಬರು ಮತ್ತೊಬ್ಬರನ್ನು ಅಪ್ಪಿಕೊಳ್ಳುವ ಹೃದಯ ಶ್ರೀಮಂತಿಕೆ ಬೇಕು. ವಿದ್ಯೆ ವಿವೇಕವನ್ನು ಮೂಡಿಸುತ್ತದೆ. ಮಾನವರಲ್ಲಿ ನೈತಿಕ ಪ್ರಜ್ಞೆ ಹೆಚ್ಚಬೇಕು. ಧರ್ಮಾಂಧರಾಗಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಲಿಂಗಾಯಿತ ಧರ್ಮ, ಇಸ್ಲಾಂ ಧರ್ಮ ಬೇರೆಯಾದರೂ ಸಮಾನತೆಯಿದೆ. ದೇವನೊಬ್ಬ ನಾಮ ಹಲವು ಎಂದು ಪೈಗಂಬರ್ ಹೇಳಿದ್ದಾರೆ. ಮನುಷ್ಯ-ಮನುಷ್ಯರ ನಡುವೆ ಇರುವ ಗೋಡೆಯನ್ನು ಕಿತ್ತು ಒಳಗಿರುವ ಕ್ರೂರತ್ವವನ್ನು ಧಮನ ಮಾಡಬೇಕಿದೆ ಎಂದರು.

ಪ್ರೀತಿ, ಸೌರ್ಹಾಧತೆ, ಸಹಕಾರಿ, ಶಾಂತಿ ಜೀವನಕ್ಕೆ ಮುಖ್ಯ. ಒಬ್ಬರು ಮತ್ತೊಬ್ಬರನ್ನು ಗೌರವಿಸಬೇಕು. ಆದರ್ಶಗಳನ್ನು ಹೇಳುವುದಷ್ಟೆ ಅಲ್ಲ. ಜೀವನದಲ್ಲಿ ಪಾಲನೆಯಾಗಬೇಕು. ಎಲ್ಲಾ ಧರ್ಮಗಳು ಮಾನವ ಸೃಷ್ಠಿ. ಅತಿಯಾದ ಮತಾಂಧತೆ ಮನಸ್ಸಿನಲ್ಲಿ ಮೂಡಬಾರದು. ಅಹಂ ಮತ್ತಷ್ಟು ಅಪಾಯಕಾರಿ. ಪರಮ ಪವಿತ್ರವಾದ ಕುರಾನ್ ಬದುಕಿಗೆ ಬೇಕಾದ ಬೆಳಕು ನೀಡುತ್ತದೆ. ಯಾರನ್ನು ಉದಾಸೀನ ಮಾಡಬಾರದು. ದೈವಿ ಮಕ್ಕಳೆಂದು ಭಾವಿಸಿದರೆ ಶಾಂತಿ ನೆಲೆಸುತ್ತದೆ. ಸಂಪತ್ತಿನ ವ್ಯಾಮೋಹದ ಬದಲು ಜೀವನದಲ್ಲಿ ಶಾಂತಿ ನೆಮ್ಮದಿ ಯಾರಲ್ಲಿ ಇರುತ್ತದೋ ಅವರೆ ನಿಜವಾದ ಕುಬೇರರು ಎಂದು ಹೇಳಿದರು.

ರೆವೆರೆಂಡ್ ಫಾದರ್ ಎಂ.ಎಸ್.ರಾಜು ಮಾತನಾಡಿ ಮೂಢನಂಬಿಕೆಗೆ ಯಾರು ಒಳಗಾಗುತ್ತಾರೋ ಅಂತಹವರು ಹಾಳಾಗುವುದು ಖಂಡಿತ. ಮನುಷ್ಯನಾಗಿ ಹುಟ್ಟಿದ ಮೇಲೆ ಕೈಲಾದಷ್ಟು ಒಳ್ಳೆ ಕೆಲಸ ಮಾಡಬೇಕು. ಏಸು, ಪೈಗಂಬರ್, ಬಸವಣ್ಣ ಇವರುಗಳೆಲ್ಲಾ ಮನುಕುಲಕ್ಕೆ ಶಾಂತಿಯ ಸಂದೇಶ ನೀಡಿದ್ದಾರೆ. ಪ್ರಾರ್ಥನೆಯಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು. ಪರಿಶುದ್ದತೆ, ಮೋಕ್ಷ ಪ್ರಾಪ್ತಿಯಾಗುತ್ತದೆ. ದೇಹದ ಶೃಂಗಾರಕ್ಕಿಂತ ಆತ್ಮ ಶುದ್ದತೆ ಮುಖ್ಯ. ನೆರೆಹೊರೆಯವರನ್ನು ದ್ವೇಷಿಸುವ ಬದಲು ಪ್ರೀತಿಸುವ ಗುಣ ಎಲ್ಲರಲ್ಲಿಯೂ ಮೂಡಬೇಕು ಎಂದರು.

ಶಾಂತಿ ಪ್ರಕಾಶನ ವ್ಯವಸ್ಥಾಪಕ ಮಂಗಳೂರಿನ ಜಿ.ಮಹಮದ್ ಕುಂಞ ಮಾತನಾಡಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಹಲವು ವರ್ಷಗಳಿಂದಲೂ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ದೇವನು ಮಂಗಳಮಯನು. ವೈವಿದ್ಯತೆಯಿಂದ ಕೂಡಿರುವ ದೇಶ ನಮ್ಮದು. ಪರಸ್ಪರ ತಪ್ಪು ಕಲ್ಪನೆ, ಅಪ ನಂಬಿಕೆಯನ್ನು ಹೋಗಲಾಡಿಸುವ ಪ್ರಕ್ರಿಯೆಗೆ ಮಹತ್ವವಿದೆ. ಎಲ್ಲಾ ರೀತಿಯ ಸೌಲತ್ತುಗಳಿದ್ದರೂ ಮನುಷ್ಯ ಒತ್ತಡ, ಹತಾಶೆ, ಭಯ, ಭ್ರಮೆಯಿಂದ ಬದುಕುತ್ತಿದ್ದಾನೆ. ಮೌಲ್ಯವಿಲ್ಲದಂತಾಗಿದೆ. ಜೀವನದಲ್ಲಿ ಎಷ್ಟೆ ಕಷ್ಟಗಳು ಎದುರಾದರೂ ಭಯಪಡಬಾರದು. ಧಾರ್ಮಿಕ ಗ್ರಂಥ ಕುರಾನ್, ಬೈಬಲ್, ಬಸವಣ್ಣನವರ ವಚನಗಳಲ್ಲಿ ಮೌಲ್ಯಗಳಿವೆ ಎಂದು ನುಡಿದರು.

ಬದುಕಿಗೆ ಬೇರೆ ಬೇರೆ ವ್ಯಾಖ್ಯಾನಗಳಿವೆ. ಬದುಕು ಒಂದು ಪರೀಕ್ಷೆ ಎಂದು ಕುರಾನ್ ಹೇಳುತ್ತದೆ. ಎಲ್ಲರ ಬದುಕಿನಲ್ಲೂ ಏರಿಳಿತವಿದೆ. ಸುಖ, ದುಃಖ, ಕಣ್ಣೀರು, ನೆಮ್ಮದಿಯಿಂದ ಬದುಕು ಕೂಡಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಉದ್ಯಮಿ ಹಾಜಿ ಆರ್.ದಾದಾಪೀರ್, ಡಾ.ರಹಮತ್‍ವುಲ್ಲಾ, ಜುಬೇರ್ ಅನ್ಸಾರಿ, ಸಿರಾಜ್ ವೇದಿಕೆಯಲ್ಲಿದ್ದರು.

ನವೀನ್ ಮಸ್ಕಲ್ ವಂದಿಸಿದರು. ಜಮಾಅತೆ ಹಿಸ್ಲಾಮಿ ಹಿಂದ್ ಸದಸ್ಯ ಅಕ್ರಮುಲ್ಲಾ ಷರೀಪ್ ನಿರೂಪಿಸಿದರು.

Tags :
Advertisement