ಕುಕ್ಕಟ ಮತ್ತು ಪಶು ಆಹಾರ ಉತ್ಪಾದಿಸಲು, ಮಾರಾಟ ಮಾಡಲು ಪರವಾನಗಿ ಕಡ್ಡಾಯ
ಚಿತ್ರದುರ್ಗ. ಮಾ.16: ಕುಕ್ಕುಟ ಮತ್ತು ಪಶು ಆಹಾರ ತಯಾರಿಕಾ ಘಟಕಗಳು, ಮಾರಾಟ ಮಾಡುವ ಕೇಂದ್ರಗಳು, ಸಂಘ ಸಂಸ್ಥೆಗಳು ಪಶು ಸಂಗೋಪನೆ ಇಲಾಖೆಯಿಂದ ಪರವಾನಗಿ (ಲೈಸನ್ಸ್) ಪಡೆಯುವುದು ಕಡ್ಡಾಯವಾಗಿದೆ.
ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯಿಂದ ಕರ್ನಾಟಕ ಕುಕ್ಕಟ, ಜಾನುವಾರು ಆಹಾರ (ತಯಾರಿಕೆ ಮತ್ತು ಮಾರಾಟ ನಿಯಂತ್ರಣ) ಕಾಯ್ದೆ 1987 ರ ಪ್ರಕಾರ ಕುಕ್ಕುಟ (ಕೋಳಿ) ಮತ್ತು ಜಾನುವಾರು (ಪಶು) ಆಹಾರ ತಯಾರಿಕಾ ಘಟಕಗಳು, ಮಾರಾಟ ಮಾಡುವ ಅಂಗಡಿ ಮತ್ತು ಸಂಘ ಸಂಸ್ಥೆಗಳು ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆಯಿಂದ ಉತ್ತಮ ಗುಣಮಟ್ಟದ ಕುಕ್ಕುಟ ಮತ್ತು ಪಶು ಅಹಾರ ಉತ್ಪಾದಿಸಲು, ಮಾರಾಟ ಮಾಡಲು ಪರವಾನಗಿ (ಲೈಸನ್ಸ್) ಪಡೆಯುವುದು ಕಡ್ಡಾಯವಾಗಿದೆ.
ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರಪಾಲಿಕೆ ಮತ್ತು ಸ್ಥಳೀಯ ಕೈಗಾರಿಕೆ ಇಲಾಖೆಯಿಂದ ಈಗಾಗಲೇ ಪರವಾನಗಿ ಪಡೆದಿದ್ದರೂ ಕೂಡ, ಸರ್ಕಾರದ ಮೇಲ್ಕಾಣಿಸಿದ ಕಾಯ್ದೆಯನ್ವಯ ಪಶುಪಾಲನಾ ಇಲಾಖೆ ವತಿಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.
2024ನೇ ಸಾಲಿಗೆ ಕುಕ್ಕಟ ಮತ್ತು ಪಶು ಆಹಾರ ಉತ್ಪಾದಕರು, ಮಾರಾಟಗಾರರು ನೂತನವಾಗಿ ಪರವಾನಗಿ ಪಡೆಯಲು ಮತ್ತು ನವೀಕರಿಸಲು ಸೇವಾಸಿಂಧು ಜಾಲತಾಣ ತಂತ್ರಾಂಶ sevasindhuservices.karnataka.gov.in ಮೂಲಕ ಆನ್‍ಲೈನ್‍ನಲ್ಲಿ ಸೂಕ್ತ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿ ಪರವಾನಗಿ ಪಡೆಯಲು ಕೋರಲಾಗಿದೆ.
ಪರವಾನಗಿ ಪಡೆಯದೇ ಕುಕ್ಕಟ ಮತ್ತು ಪಶು ಆಹಾರ ಉತ್ಪಾದನೆ ಮತ್ತು ಮಾರಾಟ ಮಾಡಿದ್ದಲ್ಲಿ (ಉತ್ಪಾದನೆ ಮತ್ತು ನಿಯಂತ್ರಣ) ಆಜ್ಞೆ 1987 ರ ಕಂಡಿಕೆ 8, 9(1) ಹಾಗೂ 11(1)(ಸಿ) ಪ್ರಕಾರ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು.