ಗ್ರಾ.ಪಂ.ಕಾರ್ಯಪಡೆ ಸಮಿತಿ ಸಕ್ರೀಯವಾಗಿರಲಿ : ಎಸ್.ಎಸ್.ಮಂಜುನಾಥ್
ಚಿತ್ರದುರ್ಗ. ನ.05 : ಗ್ರಾಮ ಪಂಚಾಯತಿಯ ಆರೋಗ್ಯ ಕಾರ್ಯಪಡೆ ಸಮಿತಿಗಳು ಪಂಚಾಯಿತಿ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯ ಪ್ರವೃತ್ತರಾದರೆ ಆರೋಗ್ಯವಂತ ಗ್ರಾಮ ರಚನೆ ಮಾಡಬಹುದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮಂಜುನಾಥ್ ಹೇಳಿದರು.
ಮಂಗಳವಾರ ಚಿತ್ರದುರ್ಗ ತಾಲ್ಲೂಕು ಡಿ.ಎಸ್.ಹಳ್ಳಿ ಮತ್ತು ಇಂಗಳದಾಳ್ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರಿಗೆ ಮತ್ತು ಸಮನ್ವಯ ಇಲಾಖೆಯ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಗ್ರಾಮ ಆರೋಗ್ಯ ಯೋಜನೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ತಾಯಿ ಮತ್ತು ಶಿಶು ಮರಣ, ಕ್ಷಯ ರೋಗ, ಕೀಟಜನ್ಯ ರೋಗ ನಿಯಂತ್ರಣ ಮಾಡುವುದರೊಂದಿಗೆ, ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ ಹಾಗೂ ಭ್ರೂಣ ಹತ್ಯೆ ಕಾಯ್ದೆ ಅನುಷ್ಠಾನ ಕಾಯ್ದೆ ಜಾರಿ ಮಾಡುವಲ್ಲಿ ಕಾರ್ಯಪಡೆಯ ಕೆಲಸ ಮುಖ್ಯವಾಗಿರುತ್ತದೆ. ಇದರೊಂದಿಗೆ ಜೀವನ ಶೈಲಿ ರೋಗಗಳ ನಿಯಂತ್ರಣಕ್ಕೂ ಕಾರ್ಯಪಡೆ ಮಹತ್ವ ನೀಡಬೇಕು. ವಾರ್ಡ್ವಾರು ಸಮಿತಿಗಳನ್ನ ರಚನೆ ಮಾಡಿ ಪ್ರತಿ ವಾರ್ಡ್ಗಳಲ್ಲಿಯೂ ಆರೋಗ್ಯ ಕಿಟ್ ಬಳಕೆ ಮಾಡಿ ೩೦ ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ, ಈ ಎಲ್ಲಾ ಮಾಹಿತಿಗಳ ದತ್ತಾಂಶಗಳನ್ನ ಗಣಕೀಕರಣಗೊಳಿಸಿಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಂಪನ್ಮೂಲ ವ್ಯಕ್ತಿ ವಾಸವಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಿ.ಎಸ್.ಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಸರೋಜಮ್ಮ, ಇಂಗಳದಾಳ್ ಗ್ರಾ.ಪಂ. ಅಧ್ಯಕ್ಷ ಕೆರುವಲ್ಲಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ರೇಣುಕಮ್ಮ, ಅನಿತಾ, ರೇಖಾ, ಪಿ.ಡಿ.ಓ ಶಿಲ್ಪ ಸೇರಿದಂತೆ ಮತ್ತಿತರರು ಇದ್ದರು.