ಕುಷ್ಟರೋಗ ಮುಕ್ತ ತಾಲ್ಲೂಕು ನಿಮ್ಮ ಗುರಿ : ಅಧಿಕಾರಿಗಳಿಗೆ ತಹಶೀಲ್ದಾರ್ ತಾಕೀತು
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 30 : ತಾಲ್ಲೂಕನ್ನು ಕುಷ್ಟರೋಗ ಮುಕ್ತವನ್ನಾಗಿಸುವುದು ನಿಮ್ಮ ಗುರಿಯಾಗಬೇಕೆಂದು ತಹಶೀಲ್ದಾರ್ ಶ್ರೀಮತಿ ನಾಗವೇಣಿ ವೈದ್ಯರುಗಳಿಗೆ ಸೂಚಿಸಿದರು.
ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಬುಧವಾರ ನಡೆದ ತಾಲ್ಲೂಕು ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ಸಮನ್ವಯ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಅಂಗನವಾಡಿ ಸಹಾಯಕಿಯರು, ಶಾಲಾ ಶಿಕ್ಷಕರು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಪ್ರಚಾರ
ಆಂದೋಲನ ಕೈಗೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಿ ಕುಷ್ಟರೋಗ ಮುಕ್ತ ತಾಲ್ಲೂಕು ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ ತಾಲ್ಲೂಕಿನ 265 ಹಳ್ಳಿಗಳಲ್ಲಿಯೂ ನ.4 ರಿಂದ 21 ರತನಕ ಕುಷ್ಠರೋಗ ಪತ್ತೆ ಪ್ರಕರಣ ಅಭಿಯಾನದಡಿ ಮನೆ ಮನೆ ಸಮೀಕ್ಷೆ ನಡೆಸಿ ಕುಷ್ಟರೋಗಿಗಳ ಲಕ್ಷಣ ಪತ್ತೆ ಹಚ್ಚಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ತಾಲ್ಲೂಕಿನ ಪ್ರತಿ ಮನೆಗಳಿಗೆ ಭೇಟಿ ನೀಡಿ ಚರ್ಮದ ಮೇಲಿನ ಕಲೆಗೆಳನ್ನು ಗುರುತಿಸಿ ಸಂಶಯಾಸ್ಪದ ಪ್ರಕರಣಗಳ ಪಟ್ಟಿ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಬಳಿ ಪ್ರಕರಣಗಳ ಮರು ತಪಾಸಣೆ ನಡೆಸಿ ಕುಷ್ಟ ರೋಗವೆಂದು ಖಚಿತ ಪಡಿಸಿದಲ್ಲಿ ಶೀಘ್ರವೇ ಬಹುವಿಧ ಚಿಕಿತ್ಸೆ ನೀಡಲಾಗುವುದೆಂದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಲೋಚಕರಾದ ಪ್ರಭುದೇವ ಮಾತನಾಡಿ ರಾಷ್ಟ್ರೀಯ ತಂಬಾಕು ಕಾರ್ಯಕ್ರಮದ ಅಡಿಯಲ್ಲಿ ಯುವಜನ ಹಾಗೂ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮತ್ತು ಪ್ರತಿಜ್ಞಾ ವಿಧಿ ಬೋಧಿಸುವುದು. ತಂಬಾಕು ಕಾರ್ಯಾಚರಣೆಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಮಿತಿ ರಚಿಸಿಕೊಂಡು ದಾಳಿ ನಡೆಸುವ ಕುರಿತು ಚರ್ಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂಜುಳ, ವಿದ್ಯಾ, ಶಿಕ್ಷಣ ಇಲಾಖೆ, ನಗರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ರಾಷ್ವ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಡಾ. ಮಹೇಂದ್ರಕುಮಾರ್, ಡಾ.ಮಂಜುಳ, ಡಾ.ಸುಪ್ರಿತಾ, ನರ್ಸಿಂಗ್ ಅಧಿಕಾರಿ ಪೂಜಾ, ತಾಲ್ಲೂಕು ವ್ಯವಸ್ಥಾಪಕ ಮೊಹಮದ್ ಆಲಿ, ತಾಲ್ಲೂಕು ಲೆಕ್ಕಪತ್ರ ಪರಿಶೋಧಕ ಹಬೀಬ್, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಇತರೆ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.