ಸೋಮಾರಿ ಜೀವನಶೈಲಿ ಬಿಡಿ, ಪಾಶ್ರ್ವವಾಯುವಿನಿಂದ ರಕ್ಷಣೆ ಪಡೆಯಿರಿ : ಜಿಲ್ಲಾ ಶಸ್ತ್ರ ಚಿಕಿತ್ಸ ಡಾ.ರವೀಂದ್ರ
ಚಿತ್ರದುರ್ಗ. ಅ.29: ಸೋಮಾರಿ ಜೀವನಶೈಲಿ ಬಿಟ್ಟು, ಪಾಶ್ರ್ವವಾಯುವಿನಿಂದ ರಕ್ಷಣೆ ಪಡೆಯಿರಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಎ.ರವೀಂದ್ರ ಹೇಳಿದರು.
ನಗರದ ಕೋಟೆ ಮುಂಭಾಗದ ಮದರ್ ತೆರೇಸಾ ಸ್ಕೂಲ್ ಆಫ್ ನರ್ಸಿಂಗ್ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಸಹಯೋಗದೊಂದಿಗೆ ವಿಶ್ವ ಸ್ಟ್ರೋಕ್ ದಿನ-2024 ಮಾನಸಿಕ ಆರೋಗ್ಯದ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಶ್ರ್ವವಾಯುಗೆ ಅನಾರೋಗ್ಯಕರ ಆಹಾರ ಪದ್ಧತಿ, ಮದ್ಯಪಾನ, ಧೂಮಪಾನ, ಬೊಜ್ಜು ಮುಖ್ಯ ಕಾರಣಗಳಾಗಿವೆ. ಸಾರ್ವಜನಿಕರು, ಆರೋಗ್ಯ ಕಾರ್ಯಕರ್ತರು, ನರ್ಸಿಂಗ್ ವಿದ್ಯಾರ್ಥಿಗಳು ಪ್ರಾರಂಭಿಕ ಲಕ್ಷಣಗಳನ್ನು ಗುರುತಿಸಿ, ನಾಲ್ಕರಿಂದ ಐದು ಗಂಟೆಯ ಒಳಗೆ ಜಿಲ್ಲಾ ಆಸ್ಪತ್ರೆಯ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗಕ್ಕೆ ಕರೆತಂದರೆ ಚಿಕಿತ್ಸೆ ಆರೈಕೆ ನೀಡಲಾಗುತ್ತದೆ. ಈ ಸಮಯವನ್ನ ಗೋಲ್ಡನ್ ಅವರ್ ಎಂದು ಕರೆಯುತ್ತೇವೆ ಎಂದು ತಿಳಿಸಿದ ಅವರು, ಇದರಿಂದ ಸಂಪೂರ್ಣ ಗುಣಮುಖರಾಗಬಹುದು ಎಂದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ನರರೋಗ ತಜ್ಞ ಕಿರಣ್ ಗೌಡ ಮಾತನಾಡಿ, ಪಾಶ್ರ್ವವಾಯು ಅಥವಾ ಮೆದುಳಿನ ಆಘಾತ ಮೆದುಳಿನ ಭಾಗಕ್ಕೆ ಕಡಿಮೆ ಆಮ್ಲಜನಕ ಪೂರೈಕೆಯಿಂದಾಗಿ ಉಂಟಾಗುವ ಸ್ಥಿತಿ ಸಮತೋಲನ ಅಥವಾ ಸಮನ್ವಯದ ನಷ್ಟ ಒಂದು ಅಥವಾ ಎರಡು ಕಣ್ಣುಗಳ ದೃಷ್ಟಿ ನಷ್ಟ ಮುಖದ ಒಂದು ಬದಿಯಲ್ಲಿ ದೌರ್ಬಲ್ಯ ಕೈ ಅಥವಾ ಕಾಲಿನ ದೌರ್ಬಲ್ಯ ಅಥವಾ ಮರಗಟ್ಟುವಿಕೆಯ ಸ್ಪಷ್ಟಮಾತು ಅಥವಾ ಮಾತನಾಡಲು ತೊಂದರೆ ಈ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ರೋಗಿಯನ್ನ ನಾಲ್ಕರಿಂದ ಐದು ಗಂಟೆಯ ಒಳಗೆ ಆಸ್ಪತ್ರೆಗೆ ಕರೆತನ್ನಿ. ಚಿಕಿತ್ಸೆ ನೀಡಿ ಮುಂದೆ ಉಂಟಾಗುವಂತಹ ಅನಾಹುತ ತಪ್ಪಿಸಬಹುದು ಎಂದರು.
ಜಿಲ್ಲಾ ಮಾನಸಿಕ ರೋಗಗಳ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮದರ್ ತೆರೆಸಾ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ಮಂಜುಳಾ, ಪಿಡಿಒ ಸುಷ್ಮಾರಾಣಿ, ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ ಜಾನಕಿ ಸೇರಿದಂತೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಮತ್ತಿತರರು ಇದ್ದರು.