ಚಿತ್ರದುರ್ಗ ಕಲ್ಲಿನ ಕೋಟೆಯಲ್ಲಿ ಮೂಲ ಸೌಲಭ್ಯ ಕೊರತೆ : ಸತ್ಯಣ್ಣ ವಿಷಾದ
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 08 : ಐತಿಹಾಸಿಕ ಪ್ರಸಿದ್ದ ಪಡೆದಿರುವ ಚಿತ್ರದುರ್ಗದ ಏಳುಸುತ್ತಿನ ಕೋಟೆ ವೀಕ್ಷಣೆಗೆ ದಿನ ದಿನಕ್ಕೂ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲವೆಂದು ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ವಿಷಾಧಿಸಿದರು.
ಕೋಟೆ ವಾಯುವಿಹಾರಿಗಳ ಸಂಘ, ಭಾರತೀಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ, ಎಸ್.ಜೆ.ಎಂ.ಫಾರ್ಮಸಿ ಕಾಲೇಜು ಎನ್.ಎಸ್.ಎಸ್. ಘಟಕ ಹಾಗೂ ಪರಿಸರ ಪ್ರೇಮಿಗಳ ಒಕ್ಕೂಟದಿಂದ ಕೋಟೆ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಲ್ಲಿನಕೋಟೆ ಈಗ ಗಿಡ ಮರಗಳ ಕೋಟೆಯಾಗಿ ಪರಿಣಮಿಸಿದೆ. ದೊಡ್ಡ ದೊಡ್ಡ ಕಲ್ಲುಗಳ ನಡುವೆ ಮರಗಳ ಬೇರು ನುಸುಳಿರುವುದರಿಂದ ಕೋಟೆಯ ಕಲ್ಲುಗಳು ಸಡಿಲಗೊಳ್ಳುವ ಸಾಧ್ಯತೆಗಳಿವೆ. ಪುರಾತತ್ವ ಇಲಾಖೆಯವರು ಇತ್ತ ಗಮನಹರಿಸಿ ಕಲ್ಲುಗಳ ನಡುವೆ ಬೆಳೆದಿರುವ ಗಿಡ-ಮರಗಳನ್ನು ಕತ್ತರಿಸಬೇಕು. ಅತಿ ಮುಖ್ಯವಾಗಿ ಕೋಟೆ ವೀಕ್ಷಣೆಗೆ ಬರುವವರಿಗೆ ಶೌಚಾಲಯದ ವ್ಯವಸ್ಥೆಯಾಗಬೇಕೆಂದು ಒತ್ತಾಯಿಸಿದರು.
ಚಿನ್ಮುಲಾದ್ರಿ ಸಾಹಿತ್ಯ ವೇದಿಕೆಯ ಶೋಭ ಮಲ್ಲಿಕಾರ್ಜುನ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಉಸಿರಾಟಕ್ಕೆ ಶುದ್ದವಾದ ಗಾಳಿಯಿಲ್ಲದಂತಾಗಿದೆ. ಹಾಗಾಗಿ ಎಲ್ಲಾ ಕಡೆ ಗಿಡ ಮರಗಳನ್ನು ಹೆಚ್ಚು ಹೆಚ್ಚು ಬೆಳೆಸಿದರೆ ಮುಂದಿನ ಪೀಳಿಗೆಗೆ ಹಸಿರು ವಾತಾವರಣವನ್ನು ಕೊಡುಗೆಯಾಗಿ ನೀಡಿದಂತಾಗುತ್ತದೆ. ಕೋಟೆಗೆ ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್, ಕುರುಕಲು ತಿಂಡಿಯ ಕವರ್‍ಗಳನ್ನು ಎಸೆಯಬಾರದು. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಜಾಗೃತಿ ಎಲ್ಲರಲ್ಲಿಯೂ ಮೂಡಬೇಕೆಂದು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಬಿ.ಎನ್.ನಾಗರಾಜ್ ಮಾತನಾಡುತ್ತ ಐತಿಹಾಸಿಕ ಚಿತ್ರದುರ್ಗ ಕೋಟೆ ದೇಶ-ವಿದೇಶಗಳಲ್ಲಿ ಹೆಸರು ಗಳಿಸಿದೆ. ವಿದೇಶಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಕೋಟೆಯನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಕೋವಿಡ್ ಸಂದರ್ಭದಲ್ಲಿ ಶುದ್ದವಾದ ಆಮ್ಲಜನಕ್ಕೆ ಎಷ್ಟು ಮಹತ್ವವಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಆದ್ದರಿಂದ ಪರಿಸರವನ್ನು ಜೋಪಾನವಾಗಿ ಕಾಪಾಡಿದರೆ ಸಕಲ ಜೀವರಾಶಿಗಳಿಗೆ ಉಪಯೋಗವಾಗಲಿದೆ ಎಂದರು.
ಪರಿಸರ ಪ್ರೇಮಿ ಮಲ್ಲಿಕಾರ್ಜುನಯ್ಯ ಮಾತನಾಡಿ ಕೋಟೆಯಲ್ಲಿ ನೂರಾರು ಗಿಡಗಳನ್ನು ನೆಟ್ಟು ಬಹುದೂರಗಳಿಂದ ನೀರು ತಂದು ಗಿಡಗಳನ್ನು ಪೋಷಿಸಿದ ಪರಿಣಾಮ ಈಗ ದೊಡ್ಡ ಮರವಾಗಿ ಬೆಳೆದು ನಿಂತಿವೆ. ಇದರಿಂದ ಪರಿಸರಕ್ಕೆ ಅನುಕೂಲವಾಗಿದೆ. ಮುಂದಿನ ಪೀಳಿಗೆಗೆ ಶುದ್ದವಾದ ಗಾಳಿ ಸಿಗಬೇಕಾದರೆ ಸ್ವಚ್ಚತೆ ಹಾಗೂ ಗಿಡ ಮರಗಳನ್ನು ಬೆಳೆಸುವುದು ಅತಿ ಮುಖ್ಯ ಎಂದು ನುಡಿದರು.
ಕೋಟೆ ವಾಯುವಿಹಾರಿಗಳ ಸಂಘದ ಗೌರವಾಧ್ಯಕ್ಷ ಕೂಬಾನಾಯ್ಕ, ಮಲ್ಲಿಕಾರ್ಜುನಾಚಾರ್, ಯೋಗ ಶಿಕ್ಷಕ ರವಿ ಅಂಬೇಕರ್, ಮಲ್ಲಿಕಾರ್ಜುನಸ್ವಾಮಿ, ಮುರಿಗೆಮ್ಮ, ಪ್ರೊ.ನಟರಾಜ್, ಸಂದೀಪ್, ಪುರಾತತ್ವ ಇಲಾಖೆಯ ರಾಣಿ, ಇರ್ಫಾನ್, ಲೋಕೇಶ್, ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿಗಳು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು.