ಕಾಯಕ ರತ್ನ ರಾಜ್ಯ ಮಟ್ಟದ ಪ್ರಶಸ್ತಿಗೆ ಚಿತ್ರದುರ್ಗದ ಆರ್. ಸತ್ಯಣ್ಣ ಆಯ್ಕೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ.10 : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಬೆಂಗಳೂರು ಜಿಲ್ಲಾ ಶಾಖೆ ಚಿತ್ರದುರ್ಗ ವತಿಯಿಂದ ಕಾಯಕ ರತ್ನ ರಾಜ್ಯ ಮಟ್ಟದ ಪ್ರಶಸ್ತಿಗೆ ಚಿತ್ರದುರ್ಗ ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಇವರನ್ನು ಆಯ್ಕೆ ಮಾಡಲಾಗಿದೆ.
ಬೀದರ್‌ನ ಡಾ.ಚನ್ನಬಸವ ಪಟ್ಟ ದೇವರ ರಂಗಮಂದಿರದಲ್ಲಿ ಜುಲೈ.13 ರಂದು ಬೆಳಿಗ್ಗೆ 10-30 ಕ್ಕೆ ಆರ್.ಸತ್ಯಣ್ಣನವರಿಗೆ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷರಾಗಿ ಕಳೆದ ಹತ್ತು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದು, ಕೋಟೆ ಸ್ಮಾರಕ ರಕ್ಷಣಾ ವೇದಿಕೆ ಖಜಾಂಚಿಯಾಗಿ, ಭಾರತೀಯ ಯೋಗ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷರಾಗಿರುವ ಆರ್.ಸತ್ಯಣ್ಣ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಿರಿಯ ನಾಗರೀಕರಿಗೆ ಕೋಟೆಯಲ್ಲಿ ಸಂಜೆ ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲು ಪುರಾತತ್ವ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅವಕಾಶ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸುವಂತೆ ಕೋಟೆಗೆ ಭೇಟಿ ನೀಡಿದ್ದ ಹಿಂದಿನ ಜಿಲ್ಲಾಧಿಕಾರಿ ವಿನೋತ್‍ಪ್ರಿಯ ಹಾಗೂ ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ.
ಕೋಟೆಗೆ ಬರುವ ಪ್ರವಾಸಿಗರಿಗೆ ಪ್ರಕೃತಿ ಕರೆಗೆ ತೊಂದರೆಯಾಗಬಾರದೆಂದು ಶೌಚಾಲಯ ನಿರ್ಮಾಣದಲ್ಲಿ ಇವರ ಪಾತ್ರವಿದೆ. ಕೋಟೆಯಲ್ಲಿರುವ ನವಿಲುಗಳಿಗೆ ಹತ್ತಾರು ವರ್ಷಗಳಿಂದಲೂ ಪಡಿತರ ಧಾನ್ಯಗಳನ್ನು ಸ್ವಂತ ಖರ್ಚಿನಿಂದ ಪೂರೈಸುತ್ತಿದ್ದಾರೆ. ಇವರ ಅಳಿಲು ಸೇವೆಯನ್ನು ಗುರುತಿಸಿ ಕಾಯಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಶಾಖೆಯ ಎಲ್ಲಾ ಸದಸ್ಯರುಗಳು ತೆರಳುತ್ತಿದ್ದು, ಆರ್.ಸತ್ಯಣ್ಣನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪರಿಷತ್‍ನ ಜಿಲ್ಲಾಧ್ಯಕ್ಷ ನಾಗರಾಜ್ ಸಂಗಮ್ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ : 8747825425 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.