ಕಾಂತಾರ ಸಿನಿಮಾ ಸಮಾಜದ ಮುಖ್ಯವಾಹಿನಿಗೆ ಬರಲು ನಾಡಿನ ಪ್ರೇಕ್ಷಕರ ಅಭಿಮಾನವೇ ಕಾರಣ : ನಟಿ ಮಾನಸಿ ಸುಧೀರ್
ಸುದ್ದಿಒನ್, ಚಳ್ಳಕೆರೆ : ತುಳು ಜನಾಂಗದ ಧಾರ್ಮಿಕ ಆರಾಧ್ಯ ದೇವರ ಮಹತ್ವ ಸಾರುವ ಕಾಂತಾರ ಸಿನಿಮಾ ಸಮಾಜದ ಮುಖ್ಯವಾಹಿನಿಗೆ ಬರಲು ನಾಡಿನ ಪ್ರೇಕ್ಷಕರ ಅಭಿಮಾನವೇ ಕಾರಣ ಎಂದು ಸಿನಿಮಾದ ನಾಯಕ ನಟ ರಿಷಭ್‍ಶೆಟ್ಟಿ ಅವರ ಅಮ್ಮನ ಪಾತ್ರ ಮಾಡಿರುವ ನಟಿ ಮಾನಸಿ ಸುಧೀರ್ ಹೇಳಿದ್ದಾರೆ.
ಚಿತ್ರದುರ್ಗದ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಪದಾಧಿಕಾರಿಗಳು ಉಡುಪಿಯಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ಅಭಿನಂದಿಸಿದ ವೇಳೆ ಮಾತನಾಡಿದ್ದಾರೆ.
ತುಳು ಭಾಷೆ ಮತ್ತು ಇಲ್ಲಿನ ಸಂಸ್ಕøತಿ ಆಚರಣೆಯಲ್ಲಿನ ದೈವಭಕ್ತಿ ಕಾಂತಾರ ಸಿನಿಮಾದ ಪ್ರಧಾನ ವಸ್ತು ವಿಷಯವಾಗಿದೆ. ವಯಸ್ಸಿನಲ್ಲಿ ಚಿಕ್ಕವಳಾಗಿದ್ದರೂ ತಾಯಿ ಪಾತ್ರಕ್ಕೆ ನನ್ನ ನಟನಾ ಕೌಶಲ್ಯವನ್ನು ಗುರುತಿಸಿದ ರಿಷಭ್‍ಶೆಟ್ಟಿ ಒಪ್ಪಿಗೆಯಂತೆ ತಾಯಿ ಪಾತ್ರ ನಟಿಸಲು ಅವಕಾಶವಾಯಿತು.
ಯಾವುದೇ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ ಬಯಸುವುದಕ್ಕಿಂತ ಮೊದಲು ನಮ್ಮಲ್ಲಿ ಪರಿಶ್ರಮ ಮತ್ತು ಆಸಕ್ತಿ ಇರಬೇಕು. ಯೂಟ್ಯೂಬ್ ಪ್ರಸಾರಕ್ಕೆ ಸಣ್ಣ ಪ್ರಮಾಣದಲ್ಲೂ ತುಂಬಾ ಆಸಕ್ತಿಯಿಂದ ನಟನಾ ಕೌಶಲ್ಯ ರೂಢಿಸಿಕೊಂಡಿದ್ದರ ಫಲವಾಗಿ, ರಿಷಭ್‍ಶೆಟ್ಟಿಯಂತಹ ಮೇರು ನಟರು ಗುರುತಿಸಿ ನಟನೆಗೆ ಅವಕಾಶ ನೀಡಲಾಗಿದೆ. ಕಲಾವಿದರಿಗೆ ಯಾವುದೇ ಭಾಷೆ, ವರ್ಗ, ಗಡಿ ಇಲ್ಲ ಎನ್ನುವ ಭಾವನೆ ಇದೆ. ಈ ದಿಸೆಯಲ್ಲಿ ಮಧ್ಯ ಕರ್ನಾಟಕದ ಸಾಹಿತ್ಯ ಸಂಘಟನೆಯವರು ಬಂದು ಅಭಿನಂದಿಸಿರುವುದು ನನ್ನ ಕಲಾ ಬದುಕಿಗೆ ಸಾರ್ಥಕ ಅನಿಸುತ್ತದೆ ಎಂದು ಸ್ಮರಿಸಿದ್ದಾರೆ.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಆರ್. ದಯಾವತಿ ಪುತ್ತೂರ್ಕರ್ ಮಾತನಾಡಿ, ಬದಲಾಗುತ್ತಿರುವ ಸಮಾಜದಲ್ಲಿ ಸಿನಿಮಾ ಕತೆಗಳು ಜನರಿಗೆ ಒಪ್ಪುವುದಿಲ್ಲ. ಇಂತಹ ಕಾಲಘಟ್ಟದಲ್ಲೂ ಕಾಂತಾರ ಸಿನಿಮಾ ಕೌಟುಂಬಿಕವಾಗಿ ನೋಡುವಂತಹ ಕತೆ ಆಧಾರಿತವಾಗಿದೆ. ತಾಯಿ ಪಾತ್ರ ನಿರ್ವಹಣೆಯಲ್ಲಿ ನಿಮ್ಮ ಕಲಾ ಕೌಶಲ್ಯತೆ ಮಹಿಳಾ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳಾದ ಸತ್ಯಭಾಮ, ರಂಗಲಕ್ಷ್ಮಿ, ಉಷಾರಾಣಿ, ರಶ್ಮಿ, ಪದ್ಮರಾಣಿ, ಸೌಮ್ಯಪುತ್ರನ್, ಡಾ. ಗೌರಮ್ಮ, ಶೋಭಾ, ಮಹೇಶ್ವರಿ, ಸವಿತಾ, ಟಿ. ಗೀತಾ ಮತ್ತಿತರರು ಇದ್ದರು.