For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ವಿಜೃಂಭಣೆಯ ಕನಕದಾಸ ಜಯಂತಿ : ಸಾಧಕರಿಗೆ ಸನ್ಮಾನ

06:58 PM Nov 30, 2023 IST | suddionenews
ಚಿತ್ರದುರ್ಗದಲ್ಲಿ ವಿಜೃಂಭಣೆಯ ಕನಕದಾಸ ಜಯಂತಿ   ಸಾಧಕರಿಗೆ ಸನ್ಮಾನ
Advertisement

ಚಿತ್ರದುರ್ಗ. ನ.30: ಕನಕದಾಸರು ಮರಣಿಸಿ 5 ಶತಮಾನಗಳು ಕಳೆದಿವೆ. ಇಂದಿಗೂ ಅವರ ಚಿಂತನೆಗಳು ಪ್ರಸ್ತುತವಾಗಿವೆ. ಕನಕದಾಸರ ತತ್ವಗಳನ್ನು ಜೀವನ ಹಾಗೂ ಆಡಳಿತದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ದಾರ್ಶನಿಕರಾಗಿ ಕನಕದಾಸರು ಎಲ್ಲಾ ಕಾಲಕ್ಕೂ ಸಲ್ಲವರು ಎಂದು ಅಕ್ಕಮಹಾದೇವಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಸುನಂದಮ್ಮ ಹೇಳಿದರು.

Advertisement
Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಸಭೆ ಹಾಗೂ ಜಿಲ್ಲಾ ಕುರುಬ ಸಂಘದ ಸಹಯೋಗದಲ್ಲಿ, ನಗರ ತರಾಸು ರಂಗಮಂದಿರದಲ್ಲಿ ಗುರುವಾರ ಆಯೋಜಿಸಲಾದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.

Advertisement

ಕನಕದಾಸರು, ಬಡವರು ಹಾಗೂ ಜನಪರವಾಗಿ ಸಾಹಿತ್ಯ ರಚನೆ ಮಾಡಿದ್ದಾರೆ. ಜಾತಿ, ಬಣ್ಣ, ವರ್ಗಗಳ ನಡುವಿನ ತಾರತಮ್ಯವನ್ನು ಖಂಡಿಸಿದ್ದಾರೆ. ಅಭಿವೃದ್ಧಿ ಎಂದರೆ ದೊಡ್ಡ ಭವನಗಳ ನಿರ್ಮಾಣ ಮಾಡುವುದಲ್ಲ. ಅಧಿಕಾರ ಹಾಗೂ ಸಂಪತ್ತು ಸಿಕ್ಕಾಗ ಜನ ಸಾಮಾನ್ಯರಿಗೆ ವಿನಯೋಗಿಸಬೇಕು. ಹಸಿದವರಿಗೆ ಅನ್ನ ನೀಡಬೇಕು.  ಕನಕದಾಸರು ರಚಿಸಿದ ಮೋಹನ ತರಂಗಿಣಿಯಲ್ಲಿ ಸುಭೀಕ್ಷ ರಾಷ್ಟ್ರದ ಚಿತ್ರಣ ನೀಡುತ್ತಾರೆ. ಇದು ಅಂದಿನ ವಿಜಯನಗರ ಸಾಮ್ರಾಜ್ಯದ ಬಣ್ಣನೆಯಾಗಿದೆ. ಜನಸಾಮಾನ್ಯರಿಗೆ ಅಗತ್ಯವಾದ ಅರವಟಿಗೆ, ಚಾವಡಿಗಳನ್ನು ರಾಜ್ಯದ ಎಲ್ಲಡೆ ಅಂದು ನಿರ್ಮಿಸಲಾಗಿತ್ತು. ಹಸಿದವರಿಗೆ ನಿತ್ಯ ಊಟ ನೀಡಲಾಗುತ್ತಿತ್ತು ಎಂದು ಕನಕದಾಸರು ಬರೆದಿದ್ದಾರೆ.

Advertisement
Advertisement

ಬೃಹತ್ ಸಮುದ್ರಕ್ಕಿಂತ ಜನರಿಗೆ ಕುಡಿಯಲು ನೀರು ನೀಡುವ ಕೆರೆ, ತೊರೆ, ನದಿ, ಹಳ್ಳಗಳು ಉತ್ತಮ ಎಂದು ಕನಕದಾಸರು ಸಾರಿದ್ದಾರೆ. ಸಂಪತ್ತು ಎಲ್ಲವನ್ನೂ ಕ್ರೂಢಿಕರಿಸಿಕೊಂಡು ಜನಸಾಮಾನ್ಯರಿಗೆ ವಿನಯೋಗಿಸದೆ ಇದ್ದರೆ ಅದು ಉಪ್ಪುನೀರಿನ ಸಮುದ್ರವಿದ್ದಂತೆ ಎಂದು ಹೋಲಿಕೆ ಮಾಡಿದ್ದಾರೆ.
ಕನಕದಾಸರು ನಡೆ ನುಡಿಗಳಲ್ಲಿ ಒಂದಾಗಿ ಬಾಳಿದರು. ಹರಿಹರ ತತ್ವನ್ನು ಒಟ್ಟುಗೂಡಿಸಿ ಸಾಹಿತ್ಯ ರಚನೆ ಮಾಡಿದ್ದಾರೆ. ಕುಲ, ಜಾತಿ, ಪಂಥಗಳನ್ನು ಮೀರಿ ಜನರು ಬಾಳುವಂತೆ ಬೋಧಿಸಿದ್ದಾರೆ. ‘ಡೊಂಕು ಬಾಲದ ನಾಯಕರೇ’ ಎನ್ನುವ ಕೀರ್ತನೆ ಮೂಲಕ ಜನ ನಾಯಕರು ಹಾದಿ ತಪ್ಪಿದರೆ ಜನರೇ ತಕ್ಕ ಪೆಟ್ಟು ನೀಡುವರು ಎಂಬುದನ್ನು ತಿಳಿಸಿದ್ದಾರೆ. ರಾಮಧಾನ್ಯ ಚರಿತೆಯ ಮೂಲಕ ಬಡಜನರ ಆಹಾರ ರಾಗಿಯ ಶ್ರೇಷ್ಠತೆಯನ್ನು ಸಾರಿದ್ದಾರೆ ಎಂದು ವಿಶ್ರಾಂತ ಕುಲಪತಿ ಸುನಂದಮ್ಮ ಹೇಳಿದರು.

ಜಯಂತಿ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಕನಕದಾಸರು ಜನಮಾಸನದಲ್ಲಿ ಅಮರರಾಗಿದ್ದಾರೆ. ಬೇರೆ ದಾಸ ಶ್ರೇಷ್ಠರ ಕೀರ್ತನೆಗೂ ಕನಕದಾಸರ ಕೀರ್ತನೆಗಳಿಗೂ ವ್ಯತ್ಯಾಸವಿದೆ. ಶೋಷಣೆಗೆ ಒಳಗಾದವರ ಧ್ವನಿಯಾಗಿ ಕನಕದಾಸರು ಸಾಹಿತ್ಯ ರಚನೆ ಮಾಡಿದ್ದಾರೆ.  ಆರಂಭದಲ್ಲಿ ತಿಮ್ಮಪ್ಪನಾಗಿದ್ದವರು, ಸಿಕ್ಕ ಬಂಗಾರವನ್ನು ಹಂಚಿ ಕನಕನಾಯಕನಾದರು. ನಂತರ ಭಕ್ತಿ ಭಾವದಿಂದ ಕೃಷ್ಣನನ್ನೇ ಒಲಿಸಿಕೊಂಡು ದಾಸರಲ್ಲಿಯೇ ಶ್ರೇಷ್ಠರಾದ ಕನಕದಾಸರು ಎಂದು ಪ್ರಸಿದ್ದರಾದರು.  ಕುಲ ಕುಲ ಎಂದು ಹೊಡದಾಡದಿರಿ, ಕುಲದ ನೆಲೆಯನೇನಾದರೂ ಬಲ್ಲಿರಾ...? ಎಂದು ಪ್ರಶ್ನಿಸುವ ಮೂಲಕ ಜಾತಿ ಶ್ರೇಷ್ಠತೆಯನ್ನು ಅಲ್ಲಗಳೆದರು. ಕನಕದಾಸರ ಚಿಂತನೆ ವಿಶ್ವಕ್ಕೆ ದಾರಿ ದೀಪವಾಗಿದೆ. ಮುಂದಿನ ಪೀಳಿಗೆಗೆ ಕನಕದಾಸರ ಚಿಂತನೆಯನ್ನು ತಿಳಿಸುವ ಕೆಲಸವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಸಿ.ವೀರೇಂದ್ರ ಪಪ್ಪಿ, ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ ಕನಕದಾಸರು ಜನರ ಕವಿಗಳಾಗಿದ್ದಾರೆ. ಕನಕದಾಸರು ಕಲಿಯೂ ಹೌದು ಕವಿಯೂ ಹೌದು. ಸಮ ಸಮಾಜದ ಚಿಂತನೆಯ ಅವರ ಆಶಯಗಳನ್ನು ಎಲ್ಲರೂ ಪಾಲಿಸಬೇಕು. 1936ರಲ್ಲಿ ಸ್ಥಾಪನೆಯಾದ ಜಿಲ್ಲಾ ಕುರುಬ ಸಮಾಜ ಸಮಾಜಮುಖಿ ಕೆಲಸಗಳಿಗೆ ಹೆಸರುವಾಸಿಯಾಗಿದೆ.  1946ರಲ್ಲಿ ನಗರದಲ್ಲಿ ನಿರ್ಮಾಣವಾದ ನಗರದ ಕುರುಬ ವಿದ್ಯಾರ್ಥಿನಿಲಯದ ಶಿಥಿಲ ಕಟ್ಟಡ ನೆಲಸಮಗೊಳಿಸಿ, ಹೊಸ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಅಗತ್ಯ ಇರುವ ಅನುದಾನವನ್ನು ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕುರುಬ ಸಮುದಾಯ ಭವನ ನಿರ್ಮಾಣ, ಎಸ್.ಜೆ.ಎಂ. ಕಾಲೇಜು ಹಿಂಭಾಗದ ಧವಳಗಿರಿ ಬಡವಾಣೆ ವಸತಿ ಶಾಲೆ ನಿರ್ಮಾಣದ ಪ್ರಸ್ತಾವನೆಯನ್ನು ಸಹ ಸರ್ಕಾರಕ್ಕೆ ಕಳುಹಿಸಲಾಗಿದೆ. 5 ಎಕರೆ ಜಮೀನು ಮಂಜೂರು ಸೇರಿದಂತ ಕುರುಬ ಸಮಾಜದ ಇತರೆ ಬೇಡಿಕೆಗಳನ್ನು ಸಹ ಆದ್ಯತೆ ಮೇರೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಆಶ್ವಾಸನೆ ನೀಡಿದರು.

ಸಾಧಕರಿಗೆ ಸನ್ಮಾನ: ಜಯಂತಿ ಅಂಗವಾಗಿ ಕುರುಬ ಸಮುದಾಯಕ್ಕೆ ಸೇರಿದ ತಾಲ್ಲೂಕು ಸಹಕಾರಿ ಸಂಘದ ಅಧ್ಯಕ್ಷ ಎಂ.ನಿಶಾನಿ ಜಯಣ್ಣ, ಸಮಾಜ ಸೇವಕ  ಹಾಗೂ ಕೃಷಿಕ ಬಿ.ಹೆಚ್.ಹನುಮಂತಪ್ಪಗೌಡ, ಮಕ್ಕಳ ತಜ್ಞ ಡಾ.ದೇವರಾಜ್, ಬಿಬಿಎಸ್ ಹಾಗೂ ಎಂಡಿ ಪದವಿ ಪೂರೈಸಿದ ಶರತ್.ಪಿ.ಶ್ರೀನಿವಾಸ ಕೋರಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಕಾಂ.ನಲ್ಲಿ ಚಿನ್ನದ ಪದಕ ಪಡೆದ ಕುಮಾರಿ ಚೈತನ್ಯಾ ಸಿ.ಎಂ. ಅವರನ್ನು ಸನ್ಮಾನಿಸಲಾಯಿತು.

ಇದರೊಂದಿಗೆ ಸಹೋದರ ಸಮುದಾಯಗಳ ಸಾಧಕರಾದ ನಗರ ಸಭೆ ಸದಸ್ಯ ದೀಪು, ಸಮಾಜ ಸೇವಕರಾದ ದುರಗೇಶಪ್ಪ, ಮಹಮದ್ ನೂರುಲ್ಲಾ, ಮಲ್ಲಣ್ಣ, ಪರಿಸರ ಪ್ರೇಮಿ ಸಿದ್ದೇಶ್ ಜೋಗಿ ಅವರನ್ನು ಕೂಡ ಸನ್ಮಾನಿಸಲಾಯಿತು.

ಭವ್ಯ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ನಗರದ ಕನಕದಾಸ ವೃತ್ತದಲ್ಲಿ ಇರುವ ಕನಕದಾಸರ ಪುತ್ಥಳಿಗೆ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಇದೇ ವೇಳೆ ಕನಕವೃತ್ತದಿಂದ ತರಾಸು ರಂಗ ಮಂದಿರದವರೆಗೆ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಕನಕದಾಸ, ಅಂಬೇಡ್ಕರ್, ಸಂಗೋಳ್ಳಿ ರಾಯಣ್ಣ, ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಹಲವು ಮಹನೀಯರ ವೇಷತೊಟ್ಟ ಮಕ್ಕಳು ಮೆರವಣಿಗೆಯ ಆಕರ್ಷಣೆ ಎನಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ.ಸಿಇಓ ಎಸ್.ಜೆ.ಸೋಮಶೇಖರ್, ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಉಪವಿಭಾಧಿಕಾರಿ ಆರ್.ಕಾರ್ತಿಕ್,  ನಗರಸಭೆ ಆಯುಕ್ತೆ ಎಂ.ರೇಣುಕಾ, ನಗರಸಭಾ ಸದಸ್ಯರಾದ ಮೀನಾಕ್ಷಿ, ಪೂಜಾ ಮಂಜುನಾಥ್, ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್, ಕಾರ್ಯದರ್ಶಿ ಬಿ.ಟಿ.ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಲ್ಲಿಕಾರ್ಜುನ ಸೇರದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸ್ವಾಗತಿಸಿದರು. ಜಿಲ್ಲಾ ಕುರುಬ ಸಂಘದ ಕಾರ್ಯಾಧ್ಯಕ್ಷ, ಆರ್.ಮಂಜುನಾಥ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಆಯಿತೋಳ ವಿರೂಪಾಕ್ಷಪ್ಪ ಮತ್ತು ತಂಡದವರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

Advertisement
Tags :
Advertisement