ಚಿತ್ರದುರ್ಗ ಸೇರಿದಂತೆ ಹಲವು ಕಡೆ ಜನಾರ್ದನ ರೆಡ್ಡಿ ಪಕ್ಷ ಸ್ಪರ್ಧೆ
ಕೊಪ್ಪಳ: ಲೋಕಸಭಾ ಚುನಾವಣೆಗೆ ಈಗಾಗಲೇ ಪಕ್ಷಗಳು ಸಿದ್ದತೆ ನಡೆಸುತ್ತಿವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಅಖಾಡಕ್ಕೆ ನುಗ್ಗುತ್ತಿದೆ. ಕಾಂಗ್ರೆಸ್ ಪೈಪೋಟಿ ಕೊಡಲು ಸದ್ದು ಮಾಡುತ್ತಿದೆ. ಇದರ ನಡುವೆ ಜನಾರ್ದನ ರೆಡ್ಡಿ ಪಕ್ಷ ಸದ್ದು ಮಾಡುತ್ತಿದೆ. ಮತ್ತೆ ಬಿಜೆಪಿಗೆ ಜನಾರ್ದನ ರೆಡ್ಡಿ ಹೋಗುತ್ತಾರೆ ಎಂಬ ಮಾತಿದೆ. ಇದೆಲ್ಲದ್ದಕ್ಕೂ ಜನಾರ್ದನ ರೆಡ್ಡಿ ಉತ್ತರ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಶಾಸಕ, ಜನಾರ್ದನ ರೆಡ್ಡಿ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ ಕ್ಷೇತ್ರದಿಂದ ಐದು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ನಾನು ಈಗಾಗಲೇ ಹೇಳಿದ್ದೇನೆ. ಮುಂಬರುವ ದಿನಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಹೋರಾಟ ಮಾಡುತ್ತದೆ. ಎಲ್ಲಿ ಹಿಂದುಳಿದ ಪ್ರದೇಶಗಳಿವೆಯೋ ಅಲ್ಲಿ ಜನಾರ್ದನ ರೆಡ್ಡಿ ಹಾಗೂ ಪಕ್ಷ ಇರುತ್ತದೆ ಎಂದಿದ್ದಾರೆ.
ಇದೆ ವೇಳೆ ಬಿಜೆಪಿಗೆ ಮರಳಿ ಹೋಗುತ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನನಗೆ ಮುಗಿದು ಹೋದ ಅಧ್ಯಾಯ. ನಾನು ಈ ಹಿಂದೆಯೂ ಹೇಳಿದ್ದೀನಿ. ಆ ವಿಚಾರವನ್ನು ಈಗಲೂ ನಾನು ಸ್ಪಷ್ಟಪಡಿಸುತ್ತಿದ್ದೀನಿ. ನಾನು ಶ್ರೀರಾಮುಲು ಜೊತೆಗೆ ಮಾತನಾಡಿಯೇ ಒಂದು ವರ್ಷವಾಗಿದೆ. ಅವರಿಗೂ ನನಗೂ ವೈಯಕ್ತಿಕವಾಗಿ ಆದರೂ ಸರಿ, ರಾಜಕೀಯವಾಗಿ ಆದರೂ ನಾನು ಅವರ ಜೊತೆಗೆ ಸಂಪರ್ಕದಲ್ಲಿ ಇಲ್ಲ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪರವಾಗಿ ನಾನು ಹೋರಾಟ ಮಾಡುತ್ತೇನೆ ಎಂದು ಶಾಸಕ ಜನಾರ್ದನ ರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.