ನಮ್ಮ ದೇಶದ ಜನ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ : ಎಂ.ಸಿ.ರಘುಚಂದನ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 31: ಸದೃಢ ಸಮಾಜ ನಿರ್ಮಿಸಬೇಕಾಗಿರುವ ಶಿಕ್ಷಕರುಗಳೆ ಕಲುಷಿತಗೊಂಡರೆ ಸಮಾಜವನ್ನು ತಿದ್ದುವರ‍್ಯಾರು ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಬೇಸರ ವ್ಯಕ್ತಪಡಿಸಿದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರೊ.ಎಂ.ವಿ.ಗೋವಿಂದರಾಜುರವರಿಗೆ ಬುಧವಾರ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮ ದೇಶದಲ್ಲಿ ಮಾದರಿ ಶಿಕ್ಷಕರುಗಳ ಕೊರತೆಯಿರುವುದನ್ನು ನೋಡಿದರೆ ನಿಮ್ಮಿಂದ ಶಿಕ್ಷಣ ಕಲಿತವರ ಗತಿಯೇನು ? ನಮ್ಮ ದೇಶದ ಜನ ಅಮೇರಿಕಾ, ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ವ್ಯವಸ್ಥೆಯನ್ನು ತಿದ್ದಿಕೊಂಡು ಸಾಗಿದಾಗ ಮಾತ್ರ ದೇಶ ಬಲಿಷ್ಟವಾಗಲು ಸಾಧ್ಯ ಎಂದು ಹೇಳಿದರು.
ಇಡಿ ಪ್ರಪಂಚವನ್ನೆ ಎದುರಿಸುವಷ್ಟು ಶಕ್ತಿಶಾಲಿಯಾಗಿ ಚೈನಾ ಬೆಳೆದಿದೆಯೆಂದರೆ ಅವರಲ್ಲಿರುವ ಶಿಸ್ತು ಕಾರಣ. ಚೈನಾದಲ್ಲಿ ಹಾವು ಕಪ್ಪೆ ತಿನ್ನುತ್ತಾರೆಂದು ಮಾತನಾಡಿಕೊಳ್ಳುವುದಕ್ಕಿಂತ ಮುಖ್ಯವಾಗಿ ಅಲ್ಲಿಗೆ ಹೋಗಿ ನೋಡಿದಾಗ ಅವರಲ್ಲಿರುವ ಶಿಸ್ತು, ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ. ನಮ್ಮ ತಂದೆ ಎಂ.ಚಂದ್ರಪ್ಪನವರು ಸಾಮಾನ್ಯ ಕೂಲಿಗಾರನಾಗಿ ಇಲ್ಲಿಗೆ ಬಂದವರು ಈಗ ಐದನೆ ಬಾರಿ ಶಾಸಕರಾಗಿದ್ದಾರೆ. ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿ ಸಾವಿರಾರು ಜನಕ್ಕೆ ಉದ್ಯೋಗ ಕೊಟ್ಟಿದ್ದಾರೆಂದರೆ ಕಮ್ಮಿ ಸಾಧನೆಯಲ್ಲ. ಅದೇ ರೀತಿ ನಮ್ಮ ಶಿಕ್ಷಣ ಸಂಸ್ಥೆಗೆ ಪ್ರೊ.ಎಂ.ವಿ.ಗೋವಿಂದರಾಜುರವರದು ಅಪ್ರತಿಮೆ ಸೇವೆ ಎಂದು ಗುಣಗಾನ ಮಾಡಿದರು.
ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಅನಂತರಾಮ್ ಬಿ.ಸಿ. ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಂಯೋಜಕ ರಾಜು ಆರ್.ಎಸ್.
ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕ್ರಿಕೆಟ್ ಕೋಚ್ ಮನ್ಸೂರ್ ಅಹಮದ್, ಎಸ್.ಜೆ.ಎಂ.ವಿದ್ಯಾಪೀಠದ ನಿವೃತ್ತ ದೈಹಿಕ ಶಿಕ್ಷಕ ಮಕ್ಸೂದ್ ಅಹಮದ್, ದಾವಣಗೆರೆ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶಕ ರಾಜ್‌ಕುಮಾರ್, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ನಿವೃತ್ತ ಪ್ರಾಂಶುಪಾಲರಾದ ರುದ್ರಮುನಿ, ಡಾ.ಜೆ.ಇ.ಭೈರಸಿದ್ದಪ್ಪ, ಸಂಸ್ಥೆಯ ಎಲ್ಲಾ ಪ್ರಾಂಶುಪಾಲರುಗಳು, ಬೋಧಕ ಮತ್ತು ಬೋಧಕೇತರ ವರ್ಗದವರು ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.