ಆಪ್ತ ಸಮಾಲೋಚನೆ ಚಿಕಿತ್ಸೆ ಆತ್ಮಹತ್ಯೆಯ ಅಪಾಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟುತ್ತದೆ : ಡಾ.ಜಿ.ಓ. ನಾಗರಾಜ್
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 11 : ವಿಶ್ವದಲ್ಲಿ ಪ್ರತಿ ವರ್ಷ 7 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಾರೆ. ವಿಶ್ವದಲ್ಲಿ 15 ರಿಂದ 29 ಪ್ರತಿಶತ ಸಾವಿನಲ್ಲಿ ಆತ್ಮಹತ್ಯೆ 4ನೇ ಪ್ರಮುಖ ಕಾರಣವಾಗಿದೆ. ಆಪ್ತ ಸಮಾಲೋಚನೆ ಚಿಕಿತ್ಸೆ ಆತ್ಮ ಹತ್ಯೆಯ ಅಪಾಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟತ್ತದೆ ಎಂದು ಜಿಲ್ಲಾ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿಗಳವರ ಸಭಾಂಗಣದಲ್ಲಿ ಬುಧವಾರ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ "ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತೀ ವರ್ಷ ಸೆಪ್ಟೆಂಬರ್ 10ನೇ ತಾರೀಕಿನಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಮಾಹಿತಿ ಶಿಕ್ಷಣ ನೀಡುವ ಮೂಲಕ ಆತ್ಮ ವಿಶ್ವಾಸ ಹೆಚ್ಚಿಸಿ ತನ್ಮೂಲಕ ಆತ್ಮಹತ್ಯೆ ತಡೆಗೆ ಇಲಾಖೆಯಲ್ಲಿರುವ ಸೇವೆಯನ್ನು ಪ್ರಚಾರ ಪಡಿಸಲಾಗಿತ್ತದೆ. ಈ ವರ್ಷದ ಘೋಷಾವಾಖ್ಯಾ " ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸುವುದು " ಎಂದಾಗಿದೆ. ವ್ಯಕ್ತಿ ತನ್ನ ಜೀವನವನ್ನು ಕೊನೆಗಾಣಿಸುವ ಉದ್ದೇಶದಿಂದ ಮಾಡಿಕೊಳ್ಳುವ ಕ್ರಿಯೆಗೆ ಆತ್ಮಹತ್ಯೆ ಎನ್ನುತ್ತೇವೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ ಹೆಂಗಸರಿಗಿಂತ ಹೆಚ್ಚು ಗಂಡಸರು ಆತ್ಮಹತ್ಯೆಯಿಂದ ಸಾವಿಗೀಡಾಗುತ್ತಾರೆ. ಆತ್ಮಹತ್ಯೆ ತಡೆಗಟ್ಟಲು ವೈಜ್ಞಾನಿಕ ಸಂಶೋಧನೆ ಪ್ರಕಾರ ಆತ್ಮಹತ್ಯೆಗಳನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ಆತ್ಮಹತ್ಯೆ ಆಪಾಯದಲ್ಲಿರುವವರನ್ನು ಬೇಗನೇ ಗುರುತಿಸಿ, ಖಿನ್ನತೆ, ಮಾನಸಿಕ ರೋಗ, ಮದ್ಯ, ಮಾದಕ ವ್ಯಸನದಿಂದ ಬಳಲುತ್ತಿರುವವರನ್ನು ಪತ್ತೆ ಹಚ್ಚಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತನ್ನಿ. ಪ್ರತಿ ಮಂಗಳವಾರ ನಡೆಯುವ ಮನೋಚೈತನ್ಯ ಕಾರ್ಯಕ್ರಮದಲ್ಲಿ ಮಾನಸಿಕ ತಜ್ಞರಿಂದ ಚಿಕಿತ್ಸೆ ಆಪ್ತ ಸಮಾಲೋಚನೆ ಕೊಡಿಸಿಸಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯೋಗ ಶಿಕ್ಷಕರಿಂದ ಯೋಗಾಸನ ಧ್ಯಾನ ಪ್ರಾಣಾಯಾಮ ಮಾಡಿಸಿ ಜೀವನ ಶಿಕ್ಷಣ ಜೀವನ ಶೈಲಿ ಬದಲಾವಣೆಯಿಂದ ಆತ್ಮಹತ್ಯೆ ತಡೆದು ಜೀವನ ಜಿಗುಪ್ಸೆಯಿಂದ ಮುಕ್ತರನ್ನಾಗಿ ಮಾಡಿ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾನಾಯ್ಕ್ ಮಾತನಾಡಿ ಟೆಲಿ ಮಾನಸ , ರಾಜ್ಯಾದ್ಯಂತ ಮಾನಸಿಕ ಆರೋಗ್ಯಕ್ಕೆ ನೆರವು ಮತ್ತು ಸಂಕೀರ್ಣ ನೆಟ್ ವರ್ಕ್ ಟೆಲಿ ಮಾನಸ ಸಹಾಯವಾಣಿ ಸಂಖ್ಯೆ 14416/ 1800-89-14416 ರ ಉಪಯೋಗಿಸುವ ಬಗ್ಗೆ ಎಲ್ಲಾ ಕಡ ಹೆಚ್ಚು ಪ್ರಚಾರ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ ವೈದ್ಯಾಧಿಕಾರಿಗಳಾದ ಡಾ.ದಶರತ್, ಡಾ.ರುದ್ರೇಶ್ , ಡಾ.ನಳಿನಾಕ್ಷಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಇತರರು ಉಪಸ್ಥಿತರಿದ್ದರು.