For the best experience, open
https://m.suddione.com
on your mobile browser.
Advertisement

ನ್ಯಾಯಾಂಗ ಮಧ್ಯ ಪ್ರವೇಶಿಸಿ ಬಗರ್ ಹುಕುಂ ಸಾಗವಳಿದಾರರಿಗೆ ಭೂಮಿ ಹಕ್ಕುಪತ್ರ ಕೊಡುವಂತೆ ಸರ್ಕಾರಕ್ಕೆ ಸೂಚಿಸಲಿ : ಜೆ.ಯಾದವರೆಡ್ಡಿ

05:00 PM Jan 17, 2024 IST | suddionenews
ನ್ಯಾಯಾಂಗ ಮಧ್ಯ ಪ್ರವೇಶಿಸಿ ಬಗರ್ ಹುಕುಂ ಸಾಗವಳಿದಾರರಿಗೆ ಭೂಮಿ ಹಕ್ಕುಪತ್ರ ಕೊಡುವಂತೆ ಸರ್ಕಾರಕ್ಕೆ ಸೂಚಿಸಲಿ   ಜೆ ಯಾದವರೆಡ್ಡಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.17 : ಬಗರ್ ಹುಕುಂ ಸಾಗುವಳಿದಾರರು ಕಳೆದ ಎಪ್ಪತ್ತು ವರ್ಷಗಳಿಂದಲೂ ಹಕ್ಕುಪತ್ರಕ್ಕಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಪರಿಹಾರ ನೀಡದ ಸರ್ಕಾರಗಳು ನಿಜಕ್ಕೂ ಬಡ ಜನತೆಗೆ ಅಕ್ಷಮ್ಯ ಅಪರಾಧವೆಸಗುತ್ತ ಕಾಲಹರಣ ಮಾಡುತ್ತಿವೆ ಎಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಹೇಳಿದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ಬುಧವಾರ ಏರ್ಪಡಿಸಲಾಗಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಗರ್‍ಹುಕುಂ ಸಾಗುವಳಿದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಜನ ಓಟು ಹಾಕಿದ್ದಾರೆ. ಸುಳ್ಳು ಹೇಳಿಕೊಂಡು ದಿನಗಳನ್ನು ನೂಕುವುದು ಯಾವುದೆ ಸರ್ಕಾರಕ್ಕೆ ಶೋಭೆಯಲ್ಲ. ಐವತ್ತು ಅವರತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವ ಬಗರ್‍ಹುಕುಂ ಸಾಗುವಳಿದಾರರ ತಾಳ್ಮೆ ಕೆಣಕುವುದು ಬೇಡ. ಹೊಟ್ಟೆ ಪಾಡಿಗಾಗಿ ಕನಿಷ್ಠ ಎರಡು ಮೂರು ಎಕರೆಗಳನ್ನು ಸಾಗುವಳಿ ಮಾಡುತ್ತಿರುವ ಬಡವರಿಗೆ ಭೂಮಿ ಹಕ್ಕು ಪತ್ರ ನೀಡುವುದು ತಪ್ಪೇನಲ್ಲ. ಎಲ್ಲದಕ್ಕೂ ಸಕಾಲ ಎನ್ನುವ ಕಾಯಿದೆಯಿದೆ. ಅರ್ಜಿ ಸಲ್ಲಿಸಿ ಇಂತಿಷ್ಟು ದಿನಗಳಲ್ಲಿ ಕೆಲಸ ಮಾಡಿಕೊಡಬೇಕೆಂಬ ನಿಯಮ ಬಗರ್‍ಹುಕಂ ಸಾಗುವಳಿದಾರರಿಗೆ ಅನ್ವಯಿಸುವುದಿಲ್ಲವೇ. ಇದು ಅಧಿಕಾರಿಗಳ ಹೊಣೆಗೇಡಿತನವೋ ಇಲ್ಲ ರಾಜಕಾರಣಿಗಳ ನಿರ್ಲಕ್ಷೆಯೋ ಎನ್ನುವುದು ಗೊತ್ತಾಗುತ್ತಿಲ್ಲ. ಹಾಗಾಗಿ ನ್ಯಾಯಾಂಗ ಮಧ್ಯ ಪ್ರವೇಶಿಸಿ ಬಗರ್‍ಹುಕುಂ ಸಾಗವಳಿದಾರರಿಗೆ ಭೂಮಿ ಹಕ್ಕುಪತ್ರ ಕೊಡುವಂತೆ ಸರ್ಕಾರಕ್ಕೆ ಸೂಚಿಸುವುದು ಒಳ್ಳೆಯದು ಎಂದು ಜೆ.ಯಾದವರೆಡ್ಡಿ ಅಭಿಪ್ರಾಯಪಟ್ಟರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಮಾತನಾಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಗರ್‍ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಶಾಸಕರು ಭೂಮಿ ಹಕ್ಕುಪತ್ರಗಳನ್ನು ಕೊಡಬೇಕು. ಯಾವುದೇ ಕಾರಣಕ್ಕೂ ಭೂಮಿ ಉಳುಮೆ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸಬಾರದು. ಒಂದು ವೇಳೆ ಒಕ್ಕಲೆಬ್ಬಿಸುವುದೇ ಆದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬಗರ್ ಹುಕುಂ ಕಮಿಟಿ ರಚನೆಯಾಗಿದ್ದು, ಅಧಿಕಾರಿಗಳನ್ನೊಳಗೊಂಡಂತೆ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚಿಸಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಕುರಿತು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ರೈತ ಮುಖಂಡ ಹಿರಿಯೂರಿನ ಹೊರಕೇರಪ್ಪ ಮಾತನಾಡಿ ಇಲ್ಲಿಯವರೆಗೂ ಎಲ್ಲಾ ಸರ್ಕಾರಗಳು ಸುಳ್ಳು ಹೇಳಿಕೊಂಡು ಬಗರ್‍ಹುಕುಂ ಸಾಗುವಳಿದಾರರನ್ನು ವಂಚಿಸಿಕೊಂಡು ಬರುತ್ತಿವೆ. ಹಿಡುವಳಿದಾರರಿಗೆ ಭೂಮಿ ಕೊಡುವುದು ಸರ್ಕಾರದ ಆದ್ಯ ಕರ್ತವ್ಯ. ಕಾರ್ಪೊರೇಟ್ ಕಂಪನಿಗಳಿಗೆ ನೂರಾರು ಎಕರೆ ನೀಡುತ್ತಿರುವ ಸರ್ಕಾರಕ್ಕೆ ಬಗರ್‍ಹುಕುಂ ಸಾಗುವಳಿದಾರರ ಜೀವನಕ್ಕೆ ಭೂಮಿ ಕೊಡಲು ಇಲ್ಲವೆ ಎಂದು ಪ್ರಶ್ನಿಸಿದರು.?

ಒಂದೆರಡು ತಿಂಗಳುಗಳಲ್ಲಿ ಬಗರ್‍ಹುಕುಂ ಸಾಗುವಳಿದಾರರಿಗೆ ಭೂಮಿ ಹಕ್ಕುಪತ್ರ ಕೊಡದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ ಮಾತನಾಡುತ್ತ ಬಡ ಬಗರ್‍ಹುಕುಂ ಸಾಗುವಳಿದಾರರಿಗೆ ಭೂಮಿ ನೀಡಲು ಸರ್ಕಾರ ಅನೇಕ ಕಾನೂನು ತೊಡಕುಗಳನ್ನು ಅಡ್ಡ ತರುತ್ತಿದೆ. ರೈತರೆಲ್ಲಾ ಒಂದಾಗಿ ಹೋರಾಡಬೇಕಿದೆ. ಹಿಂದಿನ ಸರ್ಕಾರ ನಮಗೆ ಸಾಕಷ್ಟು ಕಿರುಕುಳ ನೀಡಿತು. ಬಗರ್ ಹುಕುಂ ಕಮಿಟಿ ರಚನೆಯಾಗಿ ಒಂದು ತಿಂಗಳಾದರೂ ಇಲ್ಲಿಯತನಕ ಒಂದು ಸಭೆ ಕೂಡ ನಡೆದಿಲ್ಲ. ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಶೀಘ್ರವೆ ಸಭೆ ಕರೆದು ಭೂಮಿ ಸಾಗುವಳಿ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಹೆಚ್.ಆನಂದ್‍ಕುಮಾರ್ ಮಾತನಾಡಿ 1951 ರಲ್ಲಿ ಭೂ ಸುಧಾರಣಾ ಕಾಯಿದೆ ಜಾರಿಗೆ ಬಂದಿತು. 1970 ರಲ್ಲಿ ಇಂದಿರಾಗಾಂಧಿ ಭೂ ಮಸೂದೆಯನ್ನು ಅಂಗೀಕರಿಸಿದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ದಿವಂಗತ ಡಿ.ದೇವರಾಜ ಅರಸು ಉಳುವವನೆ ಭೂಮಿ ಒಡೆಯ ಎನ್ನುವ ಕಾನೂನು ಜಾರಿಗೆ ತಂದು ಎಲ್ಲರಿಗೂ ಭೂಮಿಯ ಹಕ್ಕು ನೀಡಿದರು. ಜಾತಿ ಪದ್ದತಿ, ಜಮೀನ್ದಾರಿ ಪದ್ದತಿ ವಿರುದ್ದ ಕಾಟೇರ ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ಎಂದು ಹೇಳಿದರು.

ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಮಾತನಾಡುತ್ತ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಭೂಮಿ ಮತ್ತು ವಸತಿ ವ್ಯವಸ್ಥೆ ಸಿಗಬೇಕು. ತಲ ತಲಾಂತರದಿಂದ ತುಂಡು ಭೂಮಿಯನ್ನು ಸಾಗುವಳಿ ಮಾಡಿಕೊಂಡು ಜೀವಿಸುತ್ತಿರುವ ಬಡವರಿಗೆ ಭೂಮಿ ಹಕ್ಕು ಪತ್ರ ನೀಡಲು ಎಲ್ಲಾ ಸರ್ಕಾರಗಳು ಸತಾಯಿಸುತ್ತಿವೆ. ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಆಳುವ ಸರ್ಕಾರಗಳಿಗೇಕೆ ಇಚ್ಚಾಶಕ್ತಿಯಿಲ್ಲ ಎನ್ನುವುದೇ ದೊಡ್ಡ ಸವಾಲಾಗಿದೆ. ಇದರ ವಿರುದ್ದ ಎಲ್ಲರೂ ಒಂದಾಗಿ ಹೋರಾಡಬೇಕು ಎಂದು ಕರೆ ನೀಡಿದರು.

ಲಕ್ಷ್ಮಿಸಾಗರ ರಾಜಣ್ಣ ಮಾತನಾಡಿ ರೈತರ ಬದುಕಿನ ಹಕ್ಕಿಗಾಗಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಸರ್ಕಾರಗಳು ಬರೀ ಪೊಳ್ಳು ಆಶ್ವಾಸನೆ ನೀಡುತ್ತಾ ನಯವಾಗಿ ವಂಚಿಸುತ್ತಿವೆ. ಇದರ ವಿರುದ್ದ ಬಗರ್‍ಹುಕುಂ ಸಾಗುವಳಿದಾರರು ಎಚ್ಚೆತ್ತುಕೊಂಡು ನಿಮ್ಮ ಪರವಾಗಿರುವವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಎಂದು ವಿನಂತಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ.ಮರಿಯಪ್ಪ, ಹನುಮಂತಪ್ಪ ಗೋನೂರು, ಬಂಗಾರಕ್ಕನಹಳ್ಳಿ ನಾಗಣ್ಣ, ಈರಜ್ಜ, ಮಲ್ಲಿಕಾರ್ಜುನ್, ಸುನಂದಮ್ಮ, ವೇದಿಕೆಯಲ್ಲಿದ್ದರು.

Tags :
Advertisement