ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆ | ಚಿತ್ರದುರ್ಗದಲ್ಲಿ ಚಾಲಕರು ಮತ್ತು ಮಾಲೀಕರುಗಳಿಂದ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 23 : ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯು ಪ್ರವಾಸಿ ವಾಹನಗಳಿಗೆ ಜಿ.ಪಿ.ಎಸ್. ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ಹೊರಟಿರುವುದರ ವಿರುದ್ದ ಜಿಲ್ಲೆಯ ಖಾಸಗಿ ಬಸ್, ಲೈಸ್ ಸರ್ವಿಸ್ ಬಸ್ ಮಾಲೀಕರ ಸಂಘ, ಮಿನಿ ಲಾರಿ ಸಂಘ ಹಾಗೂ ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ, ಲಘು ವಾಹನ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಅವೈಜ್ಞಾನಿಕವಾದ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಯಿಂದ ರಾಜ್ಯದ ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಹದಿಮೂರು ಸಾವಿರದಿಂದ ಹದಿನೈದು ಸಾವಿರ ರೂ.ಗಳವರೆಗೆ ವಸೂಲಿ ಮಾಡುತ್ತಿದ್ದು, ಪ್ರವಾಸಿ ವಾಹನಗಳ ಚಾಲಕರು ಮತ್ತು ಮಾಲೀಕರುಗಳಿಗೆ ಹೊರೆಯಾಗಿದೆ. 2024 ಸೆಪ್ಟಂಬರ್‍ವರೆಗೆ ಯಾವುದೇ ವಾಹನಗಳಿಗೆ
ಜಿಪಿಎಸ್. ಮತ್ತು ಪ್ಯಾನಿಕ್ ಬಟನ್‍ಗಳನ್ನು ಅಳವಡಿಸದೆ ವಾಹನಗಳಿಗೆ ಎಫ್.ಸಿ. ನೀಡಬಹುದೆಂದು ರಾಜ್ಯ ಸಾರಿಗೆ ಸಚಿವರು ಆದೇಶ ಹೊರಡಿಸಿದ್ದರೂ ಸಾರಿಗೆ
ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಎಲ್ಲಾ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರು ಮತ್ತು ಮಾಲೀಕರುಗಳು ಹೈರಾಣಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೆ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.
ರಾಜ್ಯ ಗೌರವಾಧ್ಯಕ್ಷ ಇಕ್ಬಾಲ್ ಬಿ.ಸಿ.ರೋಡ್, ಪ್ರಧಾನ ಕಾರ್ಯದರ್ಶಿ ಆರೀಫ್ ಉಜಿರೆ, ಶರತ್‍ಕುಮಾರ್, ದಿನೇಶ್, ನರಹರಿ ಸೇರಿದಂತೆ ನೂರಾರು ಚಾಲಕರು ಮತ್ತು ಮಾಲೀಕರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.