Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇಂದಿರಾ ಗಾಂಧಿ ಬಡವರ ಪಾಲಿನ ಆಶಾಕಿರಣ : ಮಾಜಿ ಸಚಿವ ಎಚ್.ಆಂಜನೇಯ ಬಣ್ಣನೆ

05:12 PM Nov 19, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ನ.19 : ದೇಶದ ಪ್ರಥಮ ಮಹಿಳಾ ಪ್ರಧಾನಿ, ವಿಶ್ವದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಆಡಳಿತ ನಡೆಸಿದ 70-80ರ ದಶಕದ ಕಾಲ ಬಡಜನರ ಪಾಲಿಗೆ ಬಹುದೊಡ್ಡ ವರ ಎಂದು ಮಾಜಿ ಸಚಿವ ಎಚ್.ಆಂಜನೇಯ ಬಣ್ಣಿಸಿದರು.

Advertisement

ಸೀಬಾರದ ಮಾಜಿ ಸಚಿವರ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಜೀತ, ಕೂಲಿಗಾಗಿ ಬದುಕನ್ನೇ ಸಮರ್ಪಿಸಿಕೊಂಡಿದ್ದ ಭೂ ರಹಿತರನ್ನು ಭೂಮಿಯ ಒಡೆಯರನ್ನಾಗಿಸಿದ ಕೀರ್ತಿ ಇಂದಿರಾ ಗಾಂಧಿಗೆ ಸಲ್ಲುತ್ತದೆ. ನೂರಾರು ಎಕರೆ ಭೂಮಾಲೀಕರ ವಿರುದ್ಧ ಸೆಟೆದುನಿಂತು, ಅವರ ಭೂಮಿ ಉಳುಮೆ ಮಾಡುತ್ತಿದ್ದ ಬಡ ಜನರಿಗೆ ಹಂಚುವ ಮೂಲಕ ದಿಟ್ಟ, ಕ್ರಾಂತಿಕಾರಿ ನಿರ್ಧಾರ ಕೈಗೊಂಡ ಇಂದಿರಾ ಗಾಂಧಿ ಆಡಳಿತ ಸ್ಮರಣೀಯ ಎಂದರು.

Advertisement

ಹಣಕಾಸು ಸಂಸ್ಥೆಗಳು, ಬ್ಯಾಂಕ್‍ಗಳು ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ಕಾಲಘಟ್ಟದಲ್ಲಿ ಬಂಡಾವಾಳಶಾಹಿಗಳನ್ನು ಎದುರು ಹಾಕಿಕೊಂಡು ಸಾಮಾನ್ಯ ಜನರು ಬ್ಯಾಂಕ್‍ಗಳಿಗೆ ಪ್ರವೇಶಿಸಿ ಆರ್ಥಿಕ ವಹಿವಾಟು ನಡೆಸುವ ಹಾಗೂ ಹಣಕಾಸಿನ ಸೌಲಭ್ಯ ಪಡೆಯುವ ಹಕ್ಕು ನೀಡಿದ ದಿಟ್ಟ ಮಹಿಳೆ ಎಂದರು.

ಗರೀಭಿ ಹಠಾವ್ ಎಂದು ಘೋಷಣೆ ಮೂಲಕ ಬಡತನ ನಿರ್ಮೂಲನೆಗೆ ಯೋಜನೆ ರೂಪಿಸಿದ ಇಂದಿರಮ್ಮ ಆಡಳಿತ ಶ್ರೀಮಂತರು, ಉಳ್ಳವರು, ಭೂಮಾಲೀಕರು, ಬಂಡವಾಳಗಾರರ ದಬ್ಬಾಳಿಗೆಕೆ ಕಡಿವಾಣ ಹಾಕಿ, ಬಡಜನರನ್ನು ಆರ್ಥಿಕವಾಗಿ ಬಲಗೊಳಿಸಿದ ಸಂದರ್ಭ ಎಂದರು.

 

ತುರ್ತುಪರಿಸ್ಥಿತಿ ಘೋಷಣೆ ಬಡಜನರಿಗೆ ಅನುಕೂಲ ಕಲ್ಪಿಸುವ ಜತೆಗೆ ಶ್ರೀಮಂತರ ದಬ್ಬಾಳಿಕೆಗೆ ಕಡಿವಾಣ ಹಾಕಿದ ಕಾಲ. ಆದರೆ, ಇದನ್ನು ಸಹಿಸಿಕೊಳ್ಳದ ಪಟ್ಟಭದ್ರರು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬೇಸರಿಸಿದರು.

 

ಇಂದಿರಾ ಗಾಂಧಿ ಚಿಂತನೆಯಂತೆ ಬಡತನ ವಿಮೋಚನೆಗಾಗಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಶ್ರಮಿಸುತ್ತಿದ್ದು, ಅವರ ಆಶಯದಂತೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಹಸಿವುಮುಕ್ತ ರಾಜ್ಯವನ್ನಾಗಿಸಲು ಸಿದ್ದರಾಮಯ್ಯ ಶ್ರಮಿಸುತ್ತಿದ್ದು, ಈಗ ಸೋಮಾರಿ ಮಾತ್ರ ಬಡವ ಆಗಿರಲು ಸಾಧ್ಯ. ಬಹುತೇಕ ಜನರಿಗೆ ಊಟ, ಬಟ್ಟೆಗೆ ಕೊರತೆ ಆಗದ ರೀತಿ ಗ್ಯಾರಂಟಿಗಳು ಸಹಕಾರಿ ಆಗಿವೆ ಎಂದರು.

 

ಪ್ರಧಾನಿ ನರೇಂದ್ರ ಮೋದಿ ಆಳ್ವಿಕೆಯಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರ ಬದುಕಿನ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ಬಹಳಷ್ಟು ಉಪಯೋಗವಾಗಿದೆ. ಬಸ್ ಉಚಿತ ಪ್ರಯಾಣ, ಪ್ರತಿ ತಿಂಗಳು 2 ಸಾವಿರ ರೂ., ವಿದ್ಯುತ್ ಬಿಲ್ ಉಚಿತ, ಅನ್ನಭಾಗ್ಯದಡಿ ಅಕ್ಕಿ ವಿತರಣೆ ಹೀಗೆ ಅನೇಕ ಯೋಜನೆಗಳ ಮೂಲಕ ಬಡ ಜನರ ಸಬಲತೆಗೆ ಶ್ರಮಿಸಲಾಗುತ್ತಿದೆ ಎಂದರು.

 

ಎರಡು ದಶಕದ ಹಿಂದೆ ಕೂಲಿಗಾಗಿ ಶ್ರೀಮಂತರ ಮನೆಗಳಿಗೆ ಅಲೆದಾಡುತ್ತಿದ್ದ ಜನರ ಬದುಕು ನರಕವಾಗಿತ್ತು. ಜೀತಪದ್ಧತಿ ಹಳ್ಳಿಗಳಲ್ಲಿ ಜೀವಂತವಾಗಿತ್ತು. ಇದಕ್ಕೆ ಕಡಿವಾಣ ಹಾಕಿದ್ದು ಅನ್ನಭಾಗ್ಯ ಯೋಜನೆ. ಈಗ ಕೂಲಿಗಾರರ ಶ್ರಮಕ್ಕೆ ತಕ್ಕ ಕೂಲಿ ಹಣ ನೀಡಲಾಗುತ್ತಿದೆ. ಜತೆಗೆ ಶ್ರೀಮಂತರೇ ಮನೆ ಬಾಗಿಲಿಗೆ ಬಂದು ಕೂಲಿಗಾರರನ್ನು ಕೆಲಸಕ್ಕೆ ಗೌರವಯುತವಾಗಿ ಕರೆದೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

 

ಬಡಜನರು, ಕೂಲಿಗಾರರು, ಸಾಮಾನ್ಯರ ಬದುಕಿನ ಭದ್ರತೆಗೆ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದೆ. ಜತೆಗೆ ಎಲ್ಲ ವರ್ಗದ ಜನರ ಸಮಗ್ರ ಪ್ರಗತಿಗೆ ಯೋಜನೆ ರೂಪಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು, ಇಂದಿರಾ ಗಾಂಧಿ ಕಂಡ ಬಡತನ ನಿರ್ಮೂಲನೆ ಕನಸು ನನಸು ಮಾಡಲು ಎಲ್ಲ ವಿರೋಧಗಳ ಮಧ್ಯೆಯೂ ಉಚಿತ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಹೇಳಿದರು.

 

ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ತಾಪಂ ಮಾಜಿ ಸದಸ್ಯ ಸಮರ್ಥರಾಯ್, ಮುಖಂಡರಾದ ಕೆಂಗುಂಟೆ ಜಯಪ್ಪ, ಚೇತನ್ ಬೋರೆನಹಳ್ಳಿ, ರಮೇಶ್, ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಅನಿಲ್ ಕೋಟಿ ಉಪಸ್ಥಿತರಿದ್ದರು.

Advertisement
Tags :
bengaluruchitradurgaFormer Minister H. Anjaneyahope for the poorindira gandhikannadaKannadaNewssuddionesuddionenewsಇಂದಿರಾ ಗಾಂಧಿಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಬಡವರ ಪಾಲಿನ ಆಶಾಕಿರಣಬೆಂಗಳೂರುಮಾಜಿ ಸಚಿವ ಎಚ್.ಆಂಜನೇಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article