ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು : ನಗರದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸೂಚನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ.08 : ರಾಜ್ಯದೆಲ್ಲೆಡೆ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ನಗರದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಂತೆ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಸಂತೆಹೊಂಡದಲ್ಲಿ ಸೋಮವಾರ ಗಪ್ಪಿ ಹಾಗೂ ಗಾಂಬೂಸಿಯ ಮೀನು ಮರಿಗಳನ್ನು ಬಿಟ್ಟು ನಂತರ ಮಾತನಾಡಿದ ಅವರು ನಗರದ 35 ವಾರ್ಡ್‍ಗಳಲ್ಲಿಯೂ ಸಂಚರಿಸಿ ಸ್ವಚ್ಚತೆಯನ್ನು ಕಾಪಾಡಬೇಕು. ಚರಂಡಿಗಳನ್ನು ಸ್ವಚ್ಚಗೊಳಿಸಿ ಫಾಗಿಂಗ್ ಯಂತ್ರಗಳ ಮೂಲಕ ಸೊಳ್ಳೆಗಳನ್ನು ನಾಶಪಡಿಸಬೇಕು. ಎಲ್ಲೆಲ್ಲಿ ಪುಷ್ಕರಣಿಗಳಿವೆಯೋ ಅಲ್ಲೆಲ್ಲಾ ಮೀನು ಮರಿಗಳನ್ನು ಬಿಡುವಂತೆ ತಿಳಿಸಿದರು.
ನಗರಸಭೆ ಪೌರಾಯುಕ್ತರಾದ ರೇಣುಕಾರವರು ಗಪ್ಪಿ ಹಾಗೂ ಗಾಂಬೂಸಿಯ ಮೀನುಗಳನ್ನು ಹೊಂಡದಲ್ಲಿ ಬಿಡುವುದರಿಂದ ಲಾರ್ವಗಳನ್ನು ತಿಂದು ಸೊಳ್ಳೆಗಳ ಸಂತತಿ ಕಡಿಮೆ ಮಾಡುತ್ತವೆ ಎಂದರು.
ಪರಿಸರ ಇಂಜಿನಿಯರ್ ಜಾಫರ್, ನಗರಸಭೆ ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಸರಳ, ಭಾರತಿ, ನಾಗರಾಜ್, ನಾಮ ನಿರ್ದೇಶನ ಸದಸ್ಯ ಹೆಚ್.ಶಬ್ಬೀರ್‍ಭಾಷ ಈ ಸಂದರ್ಭದಲ್ಲಿದ್ದರು.