ಮುಂದಿನ ದಿನಗಳಲ್ಲಿ ಭಾರತವು ಪ್ರಪಂಚದಲ್ಲೇ ಮೊದಲ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ : ಡಾ. ಹರಿಕೃಷ್ಣ ಮಾರನ್
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.16 : ನಾಡಿಗೆ ಕೀರ್ತಿ ತರುವಂತ ಫಾರ್ಮಸಿಸ್ಟ್ ಗಳಾಗಿ ಎಂದು ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.
ನಗರದ ಎಸ್. ಜೆ. ಎಮ್. ಕಾಲೇಜ್ ಆಫ್ ಫಾರ್ಮಸಿಯಲ್ಲಿ ಫಾರ್ಮಾ ದೀಕ್ಷಾ 2024 ಪದವಿ ಪ್ರಧಾನ ದಿನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಕರೋನ ಸಮಯದಲ್ಲಿ ಹೊಸ ವಾಕ್ಸಿನ್ ಆವಿಷ್ಕಾರದಲ್ಲಿ ಔಷಧಿ ತಜ್ಞರ ಕಾರ್ಯವನ್ನು ಪ್ರಶಂಶಿಸಿದರು.
ಮುಖ್ಯ ಅತಿಥಿಗಳಾದ ಡಾ. ಹರಿಕೃಷ್ಣ ಮಾರನ್ ಮಾತನಾಡಿ ಮುಂದಿನ 20 ವರ್ಷಗಳಲ್ಲಿ ಭಾರತ ದೇಶವು ಎಲ್ಲಾ ದೇಶಗಳ ಆರ್ಥಿಕತೆಯಲ್ಲಿ ಮುಂದೆ ಇರುತ್ತದೆ. ಹೊಸ ಕಂಪನಿಗಳನ್ನು ಹುಟ್ಟುಹಾಕುವ ಅವಕಾಶ ಭಾರತದ ಪಾಲಿಗೆ ಮಾತ್ರ ಸುವರ್ಣ ಅವಕಾಶ ಇರುತ್ತದೆ. ಏಕೆಂದರೆ ನಮ್ಮಲ್ಲಿ ಇರುವ ನೈಪುಣ್ಯತೆ ಕೆಲಸ ಮಾಡುವ ಬದ್ಧತೆ ರಕ್ತಗತವಾಗಿ ಬಂದಿದೆ. 2047 ಶತಮಾನ ವರ್ಷದ ಸ್ವಾತಂತ್ರ್ಯದ ಇಸವಿ ಒಳಗೆ ಭಾರತವು ಪ್ರಪಂಚದಲ್ಲೇ ಮೊದಲ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ.
ಅದರ ಪಾಲುದಾರರು ನಾವೇ ಆಗಿರುತ್ತೇವೆ. ಈ ಅವಕಾಶ ನಿಮಗೆ ಬರಲಿದೆ. ಭಾರತದ ಕಂಪನಿಗಳಾದ ಬಿರ್ಲಾ, ಟಾಟಾ, ರಿಲಯನ್ಸ್ ಇನ್ಫೋಸಿಸ್ ಇವೆಲ್ಲವೂ ದೊಡ್ಡ ಕಂಪನಿಗಳಾಗಿ ಹೊರಹೊಮ್ಮಲಿವೆ. ಹತ್ತು ವರ್ಷದ ಹಿಂದೆ ಇದ್ದ ದೊಡ್ಡ ಕಂಪನಿಗಳು ಇಂದು ಸಣ್ಣ ಕಂಪನಿಗಳಾಗಿವೆ. ಕೇವಲ ಐದಾರು ವರ್ಷದಲ್ಲಿ ಹುಟ್ಟಿಕೊಂಡ ಕಂಪನಿಗಳು ದೊಡ್ಡ ಕಂಪನಿಗಳಾಗಿ ಹೊರಹೊಮ್ಮುತ್ತಿದ್ದಾವೆ. ಅದಕ್ಕೆ ಕಾರಣ ಸಮಗ್ರ ಡಿಜಿಟಲ್ ತಂತ್ರಜ್ಞಾನದ ಸಮರ್ಪಕವಾಗಿ ಸದ್ಬಳಕೆ. ನಿಮ್ಮ ಪರಿಶ್ರಮ ದೇಶಕ್ಕೆ ಹೊಸ ಆವಿಷ್ಕಾರದ ಪಥಕ್ಕೆ ಕೊಂಡೊಯ್ಯಲಿ ಎಂದು ಹೇಳಿದರು.
ಡಾ ಅಶೋಕ್ ಮಾಲ್ಪಾನಿ ಮಾತನಾಡಿ ಔಷಧೀಯ ಪದವಿ ಮುಗಿಸಿದ ನೀವು ಹಲವಾರು ವಿಭಾಗದಲ್ಲಿ ಕೆಲಸ ಮಾಡುತ್ತೀರ. ಅಲ್ಲಿ ಕೆಲಸ ಮಾಡುವ ರೀತಿಯನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನೀವು ಗೆಲ್ಲುತ್ತೀರಾ. ನಿಮ್ಮ ಬುದ್ಧಿವಂತಿಕೆಗೆ ಹೊಸದನ್ನು ಕಾಲಕ್ಕೆ ತಕ್ಕಂತೆ ಕಲಿಯುತ್ತಾ ಹೋದಲ್ಲಿ ಮಾತ್ರ ಇಂದು ನಿಮ್ಮನ್ನು ಬೆಳೆಸುತ್ತಾ ಹೋಗುತ್ತದೆ. ನೀವು ಬೆಳೆಯುತ್ತಾ ದೇಶವನ್ನು ಬೆಳೆಸುತ್ತೀರಾ ಎಂದು ಹೇಳಿದರು.
ಪ್ರಾಂಶುಪಾಲರಾದ ಟಿ. ಎಸ್. ನಾಗರಾಜ್ ಅವರು ಪದವಿ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಶುಭವನ್ನು ಕೋರಿ ಮುಂಬರುವ ದಿನಗಳಲ್ಲಿ ಔಷಧಿ ಕ್ಷೇತ್ರದಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ತಂದೆ ತಾಯಿಗಳಿಗೆ ಕೀರ್ತಿ ಮತ್ತು ದೇಶಕ್ಕೆ ಮಾದರಿ ಆಗುವಂತೆ ಕೆಲಸಗಳು ಮತ್ತು ದೇಶಕ್ಕೆ ಮೆಚ್ಚುವಂತ ಔಷಧಿ ತಜ್ಞರಾಗಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಡಾ. ಸ್ನೇಹಲತಾ ಅವರು ಸುಮಾರು 150 ವಿದ್ಯಾರ್ಥಿಗಳಾದ ಬಿ ಫಾರ್ಮ , ಎಂ ಫಾರ್ಮಾ ಪದವೀಧರರಿಗೆ ಮತ್ತು ಫಾರ್ಮ ಡಿ ವಿದ್ಯಾರ್ಥಿಗಳಿಗೆ ಫಾರ್ಮಸಿಸ್ಟ್ ಪ್ರಮಾಣವನ್ನು ಆದೇಶಿಸಿ ಪ್ರತಿಜ್ಞಾವಿಧಿ ಬೋಧಿಸಿದರು. ಡಾ. ಯೋಗಾನಂದ ಆರ್, ಡಾ. ಮಾರುತಿ ಟಿ ಏಕ್ಬೋಟೆ, ಡಾ ಬಸವರಾಜ ಎಚ್ ಎಸ್, ಡಾ ಸ್ನೇಹಲತಾ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾರುತಿ ಹೆಬ್ಕೋಟೆ ಅವರು ವಂದನಾರ್ಪಣೆ ನಡೆಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಡಾ. ಅಬೂಬಕರ್ ಸಿದ್ದೀಕ್ ನಡೆಸಿಕೊಟ್ಟರು.