ಚಿತ್ರದುರ್ಗದಲ್ಲಿ ಪೌರ ಕಾರ್ಮಿಕರು ಸೇರಿದಂತೆ ಇತರೆ ನೌಕರರ ಖಾಯಂಗೆ ಆಗ್ರಹಿಸಿ ಧರಣಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಡಿ. 01 : ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೇರ ಪಾವತಿ ಪೌರಕಾರ್ಮಿಕರು ಹಾಗೂ ಲೋಡರ್ಸ್ ಆಟೋ ಮತ್ತು ಟಿಪ್ಪರ್ ವಾಹನ ಚಾಲಕರು ಮತ್ತು ಸಹಾಯಕರನ್ನು ಒಂದೇ ಬಾರಿಗೆ ಖಾಯಂ ಮಾಡಲು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕರ ಮಹಾಸಂಘ (ರಿ) ಸಫಾಯಿಕರ್ಮಚಾರಿ ಕಾವಲು ಸಮಿತಿ-ಕರ್ನಾಟಕ ಹಾಗೂ ಚಿತ್ರದುರ್ಗ ಜಿಲ್ಲಾ ಪೌರಕಾರ್ಮಿಕ ಸಂಘ (ರಿ) ಧರಣಿಯನ್ನು ನಡೆಸಿತು.
2022 ಜುಲೈ 01 ರಂದು ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಪೌರಕಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಿ ಪೌರಕಾರ್ಮಿಕರ 30 ವರ್ಷಗಳ ಈ ಜ್ವಾಲಂತ ಸಮಸ್ಯೆಗೆ ನಾನು ಬಗೆಹರಿಸುತ್ತೇನೆ. ಎಲ್ಲಾ ನೇರಪಾವತಿ ಪೌರಕಾರ್ಮಿಕರನ್ನು ಖಾಯಂ ಮಾಡಲಾಗುವುದು ಮತ್ತು ಹೊರ ಗುತ್ತಿಗೆ ಲೋಡರ್ಸ್, ಒಳಚರಂಡಿ ಸ್ವಚ್ಚತಾ ಕಾರ್ಮಿಕರು ಮತ್ತು ಕಸದ ವಾಹನ ಚಾಲಕರನ್ನು ಹಾಗೂ ಸಹಾಯಕರನ್ನು ಗುತ್ತಿಗೆ ಪದ್ದತಿಯಿಂದ ಮುಕ್ತಿಗೊಳಿಸಿ ನೇರ ಪಾವತಿ ಸೇರಿಸಲಾಗುವುದು ಎಂದು ಬರವಣಿಗೆಯಲ್ಲಿ ನೀಡಿದ್ದಾರೆ. 2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಎಲ್ಲಾ ಗುತ್ತಿಗೆ ಪೌರಕಾರ್ಮಿಕರು ಮತ್ತು ಇತರೇ ಸ್ವಚ್ಚತಾ ಕಾರ್ಮಿಕರನ್ನು ಖಾಯಂ ಮಾಡಲು ನಿರ್ಧರಿಸಿದ್ದರು.
2022ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿಯೂ ಸಹ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ 25000 ಪೌರಕಾರ್ಮಿಕರನ್ನು ಖಾಯಂ ಮಾಡಲಾಗುವುದು ಎಂದು ಘೋಷಿಸಿತ್ತು. ಆದರೂ ಈ ಯಾವ ಘೋಷಣೆಗಳು, ತೀರ್ಮಾನಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನ ಮಾಡುವಲ್ಲಿ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಕಾಳಜಿವಹಿಸಿಲ್ಲ.
ಆದ್ದರಿಂದ ಪೌರಕಾರ್ಮಿಕ ಮಹಾಸಂಘ ಹಾಗೂ ರಾಜ್ಯದ ವಿವಿದ ಪೌರಕಾರ್ಮಿಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನೇರಪಾವತಿ ಹಾಗೂ ಗುತ್ತಿಗೆ ಪೌರಕಾರ್ಮಿಕರು, ಲೋಡಲ್ರ್ಸ್, ಕ್ಲಿನರ್ಸ್, ಕಸದ ವಾಹನ ಚಾಲಕರು ಹಾಗೂ ಈ ಘನ ತ್ಯಾಜ್ಯ ನಿರ್ವಾಹಣ ಘಟಕಗಳ ಸ್ವಚ್ಚತಗಾರರು ಮತ್ತು ಸಹಾಯಕರನ್ನು ಕೂಡಲೇ ಖಾಯಂಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಧರಣಿ ನಡೆಸಲಾಗುತ್ತಿದೆ.
ರಾಜ್ಯ ಸರ್ಕಾರ ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ ಎಲ್ಲಾರನ್ನು ಖಾಯಂ ಮಾಡುವ ನಿರ್ಣಯ ಹೊರಡಿಸಬೇಕು, ತಪ್ಪಿದಲ್ಲಿ ರಾಜ್ಯದಾದ್ಯಂತ ಸ್ವಚ್ಚತಾ ಕಾರ್ಯ ನಿಲ್ಲಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ನೇರ ಪಾವತಿ ಪೌರಕಾರ್ಮಿಕರು, ಮೇಲ್ವಿಚಾರಕರು ಮತ್ತು ಕಸ ಸಾಗಿಸುವ ವಾಹನ ಚಾಲಕರು, ಲೋರ್ಡ, ಸಹಾಯಕರನ್ನು ಒಂದೇ ಬಾರಿಗೆ ಖಾಯಂ ಮಾಡಬೇಕು.
ಎಲ್ಲರಿಗೂ ವಸತಿ ನಿರ್ಮಾಣಕ್ಕಾಗಿ ವಸತಿ ನಿವೇಶನ ನೀಡಬೇಕು ಆಯಾಯಾ ನಗರ ವ್ಯಾಪ್ತಿಯ ಜನಸಂಖ್ಯೆಗನುಗುಣವಾಗಿ 500 ಜನರಿಗೆ ಒಬ್ಬ ಪೌರಕಾರ್ಮಿಕ ಎಂಬು ಅನುಪಾತದಲ್ಲಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ನೇರಪಾವತಿ ಆಧಾರದಲ್ಲಿ ಸ್ವಚ್ಚತಾ ಕೆಲಸ ಮಾಡುವ ಅವಧಿಯಲ್ಲಿ ಕಾರಣಾಂತರಗಳಿಂದ ಮರಣ ಹೊಂದಿರುವ ಪೌರಕಾರ್ಮಿಕರ ಅವಲಂಬಿತರಿಗೆ ಉದ್ಯೋಗ ಮತ್ತು ಪುನರ್ವಸತಿ ಒದಗಿಸಬೇಕು.
ಇತ್ತೀಚೆಗೆ ಪೌರಕಾರ್ಮಿಕ ಹುದ್ದೆಗಳನ್ನು ಸೂಪರ್ ನ್ಯೂಮರಿ ಹುದ್ದೆಗಳಾಗಿ ತುಂಬಲು ಪ್ರಯತ್ನಿಸುತ್ತಿರುವುದು ಗಮನಿಸಿದ್ದೇವೆ. ಈ ರೀತಿಯ ನೇಮಕಾತಿಗಳು ಪೌರಕಾರ್ಮಿಕರ ಪಾಲಿಗೆ ಅನ್ಯಾಯ ಮತ್ತು ಅಕ್ರಮ. ಆದ್ದರಿಂದ ಈ ಕೂಡಲೇ ಈ ಪ್ರಕ್ರಿಯೆಯನ್ನು ಕೈಬಿಡಬೇಕು. ಎಲ್ಲಾ ಸ್ವಚ್ಚತ ಕಾರ್ಮಿಕರನ್ನು ಒಂದೇ ಬಾರಿಗೆ ಖಾಯಂ ಮಾಡಬೇಕು.
ರಾಜ್ಯ ಸರ್ಕಾರ ಜಾರಿ ಮಾಡಿರುವ ಸಂಕಷ್ಟ ಭತ್ಯೆಯನ್ನು ಎಲ್ಲಾ ಸ್ವಚ್ಚತಾ ಕಾರ್ಮಿಕರಾದ ನೇರನೇಮಕಾತಿ ಹಾಗೂ ಗುತ್ತಿಗೆ ಪೌರಕಾರ್ಮಿಕರು ಲೋಡರ್ಸ್, ಕ್ಲೀನರ್ಸ್, ಕಸದ ವಾಹನ ಚಾಲಕರು ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ವಚ್ಚತಗಾರರು ಮತ್ತು ಸಹಾಯಕರಿಗೂ ವಿಸ್ತರಿಸಬೇಕು ಎಂದು ಆಗ್ರಹಿಸಲಾಯಿತು.
ಈ ಧರಣಿಯಲ್ಲಿ ಜಿಲ್ಲಾಧ್ಯಕ್ಷರಾದ ದುರುಗೇಶ್, ಉಪಾಧ್ಯಕ್ಷರಾದ ಎಸ್.ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಜಣ್ಣ ಸಹ ಕಾರ್ಯದರ್ಶಿ ಮಂಜಣ್ಣ ಟಿ. ವಾಹನ ಚಾಲಕರ ಸಂಘದ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್ ರಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.