Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಮನಸ್ಸು ವಿಕಾಸಗೊಳ್ಳುತ್ತದೆ : ಡಾ.ಎಂ.ಎ.ಸುಧಾ

06:00 PM May 26, 2024 IST | suddionenews
Advertisement

ಸುದ್ದಿಒನ್, ಹಿರಿಯೂರು, ಮೇ. 26  : ಬಿಇಡಿ ಪ್ರಶಿಕ್ಷಣಾರ್ಥಿಗಳು ವರ್ತಮಾನದ ಸಮಸ್ಯೆಗಳಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಬೇಕು. ಸಂಗೀತ, ನೃತ್ಯ, ಸಾಹಿತ್ಯ, ಸಂಭಾಷಣೆ, ನಿರೂಪಣೆ, ವಾಕ್ ಚಾತುರ್ಯ, ದೈಹಿಕ ನಿಲುವು ಮುಂತಾದ ಕೌಶಲಗಳಿಗೆ ರಂಗಭೂಮಿ ಸಹಕಾರಿಯಾಗಿದೆ. ರಂಗಭೂಮಿಯ ಮೂಲಕ ಪರಿಹಾರ ಕಂಡುಕೊಡುವ ನಾಟಕಗಳು ರಚನೆಯಾಗಬೇಕು. ಪಠ್ಯಾಧಾರಿತ ವಿಷಯಗಳಿಗೆ ಅನುಗುಣವಾಗಿ ನಾಟಕಗಳು ಪ್ರದರ್ಶನಗೊಂಡರೆ ನಾಟಕ ಪ್ರದರ್ಶನಗಳ ಉದ್ದೇಶ ಸಫಲವಾಗುತ್ತದೆ ಎಂದು ಗಿರೀಶ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎಂ.ಎ.ಸುಧಾ ಅಭಿಪ್ರಾಯಪಟ್ಟರು.

Advertisement

ನಗರದ ಶ್ರೀ ಗಿರೀಶ ವೀರಶೈವ ವಿದ್ಯಾವರ್ಧಕ ಸಂಘ, ಗಿರೀಶ ಶಿಕ್ಷಣ ಮಹಾವಿದ್ಯಾಲಯ, 2022-23ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಚಿತ್ರದುರ್ಗದ ರಂಗಸೌರಭ ಕಲಾ ಸಂಘ ಸಂಯುಕ್ತ ಆಶ್ರಯದಲ್ಲಿ ಗಿರೀಶ ಬಿಇಡಿ ಕಾಲೇಜು ಸಭಾಂಗಣದಲ್ಲಿ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ಶಿಕ್ಷಣದಲ್ಲಿ ರಂಗಕಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸಿದರೆ ವಿದ್ಯಾರ್ಥಿಗಳ ಮನಸ್ಸು ವಿಕಾಸಗೊಳ್ಳುತ್ತದೆ. ಮಕ್ಕಳಲ್ಲಿ ಪಠ್ಯಕ್ರಮದ ಜ್ಞಾನವನ್ನು ವೃದ್ಧಿಸಲು ರಂಗಭೂಮಿ ಸಮರ್ಥ ಮಾದ್ಯಮವಾಗಿದೆ. ಪ್ರಶಿಕ್ಷಣಾರ್ಥಿಗಳು ರಂಗಭೂಮಿಯ ಸೂಕ್ಷ್ಮತೆಗಳನ್ನು ಅರಿತು ಪಾಠ ಬೋಧನೆಗೆ ತೊಡಗಬೇಕು ಎಂದರು.

Advertisement

ರಂಗಭೂಮಿ ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ನೀನಾಸಂ ಪದವೀಧರ ಹಾಗೂ ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಮಾತನಾಡಿ ಸರ್ಕಾರಿ ಮತ್ತು ಸರ್ಕಾರೇತರ ಶಾಲಾ ಕಾಲೇಜುಗಳಿಗೆ ನಾಟಕ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಿಕೊಳ್ಳಬೇಕು. ಪಠ್ಯಕ್ರಮದ ವಿಷಯಗಳನ್ನು ರಂಗಭೂಮಿಯ ಮೂಲಕ ಬೋಧಿಸಿದರೆ ಪಾಠಗಳು ಪರಿಣಾಮಕಾರಿಯಾಗಿ ಮಕ್ಕಳಲ್ಲಿ ನೆಲೆಗೊಳ್ಳುತ್ತದೆ. ತಾತ್ವಿಕ ಮತ್ತು ಪ್ರಾಯೋಗಿಕವಾಗಿ ರಂಗಭೂಮಿ ಅನುಕೂಲವಾಗುತ್ತದೆ ಎಂದರು.

ಉಪನ್ಯಾಸಕರಾದ ಡಿ.ವೇದ, ಹೆಚ್.ಮಂಜುನಾಥ, ನಯೀಮುದ್ದೀನ್, ಟಿ.ನಾಗರಾಜ, ಆರ್‍ಜೆ ವಿಜಯಶ್ರೀ, ಬಿ.ಪ್ರಮೋದ, ಬಿಸಿ ವನಿತ, ಪಿ.ವೀರಣ್ಣ ಹಾಗೂ ಕುಮಾರಿ ಮಂಜುಮುತ್ತು ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಾದ ಕವಿತಾ ಮತ್ತು ಸುಮಿತ್ರ ಪ್ರಾರ್ಥಿಸಿದರು, ಉಪನ್ಯಾಸಕ ಎಂ.ಲೋಕೇಶ್ ಸ್ವಾಗತಿದರು, ಹಿರಿಯ ಪ್ರಾಧ್ಯಾಪಕ ಎಸ್.ನಿಜಲಿಂಗಪ್ಪ ನಿರೂಪಿಸಿದರು.

ದ್ವಿತೀಯ ಬಿಇಡಿ ಪ್ರಶಿಕ್ಷಣಾರ್ಥಿಗಳು ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇವರ ಮಾರ್ಗದರ್ಶನದಲ್ಲಿ ವರದಕ್ಷಿಣೆ, ಭ್ರಷ್ಟಾಚಾರ, ಮೂಢನಂಬಿಕೆ ಹಾಗೂ ಮೊಬೈಲ್‍ನಿಂದಾಗುವ ದುಷ್ಪರಿಣಾಮಗಳು ಮುಂತಾದ ಕಿರುನಾಟಕಗಳ ಪ್ರದರ್ಶನ ನೀಡಿದರು. ಪ್ರಥಮ ಬಿಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Advertisement
Tags :
bengaluruchitradurgaDr. MA Sudhaeducationstudents will developsuddionesuddione newstheater is implementedಚಿತ್ರದುರ್ಗಡಾ.ಎಂ.ಎ.ಸುಧಾಬೆಂಗಳೂರುಶಿಕ್ಷಣದಲ್ಲಿ ರಂಗಭೂಮಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article