ಮನಸ್ಸನ್ನು ಪವಿತ್ರವಾಗಿಟ್ಟುಕೊಂಡರೆ ಕಾಯಿಲೆಯಿಂದ ದೂರವಿರಬಹುದು : ಶಿವಲಿಂಗಾನಂದಸ್ವಾಮಿಗಳು
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 29 : ಬೇರೆ ಬೇರೆ ವೈದ್ಯಕೀಯ ಪದ್ದತಿಯಲ್ಲಿ ಗುಣಪಡಿಸಲಾಗದಂತ ಕಾಯಿಲೆಯನ್ನು ಪಾರಂಪರಿಕ ವೈದ್ಯ ಪದ್ದತಿಯಲ್ಲಿ ವಾಸಿ ಮಾಡಬಹುದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ ತಿಳಿಸಿದರು.
ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ತಾಲ್ಲೂಕು ಘಟಕದಿಂದ ಪಿ ಅಂಡ್ ಟಿ. ಕ್ವಾರ್ಟಸ್ ಹತ್ತಿರುವಿರುವ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಧನ್ವಂತರಿ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಪ್ರತಿ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿರುವ ಜೀವ ವೈವಿದ್ಯ ಮಂಡಳಿಯಲ್ಲಿ ಸಸ್ಯ ಪ್ರಾಣಿ ಪ್ರಬೇದಗಳನ್ನು ದಾಖಲೆಯಾಗಿಟ್ಟುಕೊಳ್ಳಬಹುದು. ಪಾರಂಪರಿಕ ವೈದ್ಯ ಪದ್ದತಿಯೆಂದರೆ ಅನುಭವದ ಮೇಲೆ ಚಿಕಿತ್ಸೆ ನೀಡುವುದು. ಅಪರೂಪದ ಸಸ್ಯ ಪ್ರಬೇದಗಳಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿರುತ್ತವೆ. ಅವುಗಳನ್ನು ಪತ್ತೆ ಹಚ್ಚಿ ಅಷ್ಟಕ್ಕೆ ಸುಮ್ಮನಾಗಬಾರದು ವಂಶಪಾರಂಪರ್ಯವಾಗಿ ಮುಂದುವರೆಸಿಕೊಂಡು ಹೋದರೆ ಸಮಾಜಕ್ಕೆ ಅದರಿಂದ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದರು.
ಜೋಗಿಮಟ್ಟಿ ಗಿರಿಧಾಮದಲ್ಲಿ ನೂರಾರು ಬಗೆಯ ಔಷಧೀಯ ಸಸ್ಯಗಳಿವೆ. ಅಂತಹ ಅಪರೂಪದ ಸಸ್ಯಗಳನ್ನು ಸಂರಕ್ಷಿಸಿ ಜೋಪಾನ ಮಾಡಬೇಕು ಎಂದು ಪಾರಂಪರಿಕ ವೈದ್ಯರುಗಳಲ್ಲಿ ಮನವಿ ಮಾಡಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತ ನಮ್ಮ ಸುತ್ತಮುತ್ತಲಿನಲ್ಲಿಯೇ ಅನೇಕ ಔಷಧೀಯ ಸಸ್ಯಗಳಿವೆ. ಅವುಗಳನ್ನು ಗುರುತಿಸಿ ಉಪಯೋಗಿಸಿಕೊಳ್ಳುವ ವಿಧಾನ ಗೊತ್ತಿಲ್ಲ. ವನಸ್ಪತಿ ಎಂದರೆ ನಿರುಪಯೋಗವಲ್ಲ. ಒಂದಲ್ಲ ಒಂದು ರೀತಿಯ ಕಾಯಿಲೆಗೆ ಬಳಕೆಯಾಗುತ್ತದೆ. ಬಳಸಿಕೊಳ್ಳುವ ಜ್ಞಾನವಿರಬೇಕೆಂದರು.
ಅಲೋಪಥಿಕ್ ವೈದ್ಯ ಪದ್ದತಿಯಲ್ಲಿ ಬೇಗನೆ ಕಾಯಿಲೆ ವಾಸಿಯಾಗುತ್ತದೆ ನಂಬಿ ರೋಗಿಗಳು ವೈದ್ಯರ ಬಳಿಗೆ ಹೋಗುವುದು ಸಹಜ. ಅದೇ ಪಾರಂಪರಿಕ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕಾದರೆ ಆಳವಾದ ನಂಬಿಕೆ, ವಿಶ್ವಾಸವಿರಬೇಕು. ಎಲ್ಲಾ ಕಾಯಿಲೆಗಳಿಗೆ ಮನಸ್ಸೆ ಮುಖ್ಯ ಕಾರಣ. ಅದಕ್ಕಾಗಿ ಚಂಚಲ ಮನಸ್ಸನ್ನು ಪವಿತ್ರವಾಗಿಟ್ಟುಕೊಂಡರೆ ಕಾಯಿಲೆಯಿಂದ ದೂರವಿರಬಹುದೆಂದು ಹೇಳಿದರು.
ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ ಮಾತನಾಡಿ ಧನ್ವಂತರಿಯೆಂದರೆ ಗಿಡ, ಮರ, ಬಳ್ಳಿ, ಹೂವು, ಕಾಂಡ, ಬೇರು ಇವುಗಳಲ್ಲಿ ನಾನಾ ರೀತಿಯ ಔಷಧೀಯ ಗುಣಗಳಿರುತ್ತದೆ. ಪರಿಸರ ನಾಶಕ್ಕೆ ಪರ್ಯಾಯವಾಗಿ ಗಿಡಮೂಲಿಕೆಗಳನ್ನು ಹೆಚ್ಚು ಬೆಳೆಸಬೇಕು. ರಾಜ-ಮಹಾರಾಜರ ಕಾಲದಿಂದಲೂ ಧನ್ವಂತರಿ ಚಿಕಿತ್ಸಾ ಪದ್ದತಿಯಿದೆ.
ಅಳಿದು ಹೋಗಬಾರದು. ಜಿಲೆಯಲ್ಲಿ ಬಗೆ ಬಗೆಯ ಔಷಧೀಯ ಸಸ್ಯಗಳಿವೆ. ಸಂರಕ್ಷಿಸಿ ಮುಂದಿನ ಪೀಳಿಗೆಗೆ ಧನ್ವಂತರಿ ಪದ್ದತಿಯನ್ನು ಪರಿಚಯಿಸಬೇಕೆಂದು ಪಾರಂಪರಿಕ ವೈದ್ಯರುಗಳಿಗೆ ಕರೆ ನೀಡಿದರು.
ಪಾರಂಪರಿಕ ವೈದ್ಯರ ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಎನ್.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಧನ್ವಂತರಿ ಸ್ವದೇಶಿ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಎಸ್.ಬಿ.ಲೋಕೇಶ್ ವೇದಿಕೆಯಲ್ಲಿದ್ದರು. ಅನುಸೂಯ ಪ್ರಾರ್ಥಿಸಿದರು. ತಾಲ್ಲೂಕು ಘಟಕದ ಕಾರ್ಯದರ್ಶಿ ಪಾರಂಪರಿಕ ವೈದ್ಯ ವೀರಣ್ಣ ಸ್ವಾಗತಿಸಿ ನಿರೂಪಿಸಿದರು.
ಪಾರಂಪರಿಕ ವೈದ್ಯರುಗಳಾದ ಕೆ.ದಿನೇಶ್, ಪುತ್ತೂರು ಶಲ್ಯ ವೈದ್ಯ ಕನಕ ಶೇಖರರಾಜು ಇವರುಗಳನ್ನು ಸನ್ಮಾನಿಸಲಾಯಿತು. ಜಿಲ್ಲೆಯ ಎಲ್ಲಾ ಪಾರಂಪರಿಕ ವೈದ್ಯರುಗಳು ಧನ್ವಂತರಿ ಜಯಂತಿಯಲ್ಲಿ ಭಾಗವಹಿಸಿದ್ದರು.