For the best experience, open
https://m.suddione.com
on your mobile browser.
Advertisement

ನಬಾರ್ಡ್ ನೆರವು ನೀಡದಿದ್ದರೆ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು : ಸಚಿವ ಡಿ.ಸುಧಾಕರ್

05:48 PM Nov 15, 2024 IST | suddionenews
ನಬಾರ್ಡ್ ನೆರವು ನೀಡದಿದ್ದರೆ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು   ಸಚಿವ ಡಿ ಸುಧಾಕರ್
Advertisement

ಚಿತ್ರದುರ್ಗ. ನ.15: ನಬಾರ್ಡ್ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ವತಿಯಿಂದ ರಾಜ್ಯಕ್ಕೆ ಬರುತ್ತಿದ್ದ ಆರ್ಥಿಕ ನೆರವಿನಲ್ಲಿ ಶೇ.58ರಷ್ಟು ಕಡಿತ ಮಾಡಿರುವುದು ವಿಷಾದನೀಯ ಸಂಗತಿಯಾಗಿದೆ. ಈ ವರ್ಷ ರಾಜ್ಯಕ್ಕೆ ನಬಾರ್ಡ್ ನೀಡಬೇಕಿದ್ದ ರೂ.5800 ಕೋಟಿ ಆರ್ಥಿಕ ನೆರವಿನಲ್ಲಿ, ಕೇವಲ ರೂ.2300 ಕೋಟಿಗಳನ್ನು ಮಾತ್ರ ನೀಡಿದೆ. ರೂ.3500 ಕೋಟಿ ಬಿಡುಗಡೆ ಮಾಡಿಲ್ಲ. ಇದು ರಾಜ್ಯಕ್ಕೆ ಉಂಟಾದ ಅನ್ಯಾಯ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿರುವ, ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್ ಹೇಳಿದರು

Advertisement

Advertisement

ನಗರದ ಚಳ್ಳಕೆರೆ ರಸ್ತೆಯ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ, 71ನೇ ಅಖಿಲ ಭಾರತ ಸಹಕಾರ ಸಪ್ತಾಹ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬರಗಾಲದಿಂದ ತತ್ತರಿಸಿದ ರಾಜ್ಯದ ರೈತರಿಗೆ ನರ್ಬಾಡ್ ನೆರವಿನ ಹಸ್ತ ಚಾಚಬೇಕಿದೆ. ರಾಜ್ಯದ ಎಲ್ಲಾ ರಾಜಕೀಯ ನಾಯಕರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕಡಿತ ಗೊಳಿಸಿದ ಬಾಕಿ ಹಣವನ್ನು ನಬಾರ್ಡ್‍ನಿಂದ ಬಿಡುಗಡೆ ಮಾಡಿಸಬೇಕು. ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕುಗಳು ನಬಾರ್ಡ್‍ನಿಂದ ಪಡೆದ ಸಾಲ ಮರುಪಾತಿ ಮಾಡಲು ಹೆಚ್ಚಿನ ಬಡ್ಡಿದರ ಸಾಲ ಮಾಡುವ ಪರಿಸ್ಥಿತಿ ಉಂಟಾಗಿದೆ. ನಬಾರ್ಡ್ ಆರ್ಥಿಕ ನೆರವು ಹೆಚ್ಚಿಸುವ ಕುರಿತು, ರಾಜ್ಯದ ಮುಖ್ಯಂತ್ರಿಗಳು ಹಾಗೂ ಸಹಕಾರಿ ಸಚಿವರು, ಪ್ರಧಾನ ಮಂತ್ರಿ ಹಾಗೂ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದಾರೆ. ನಬಾರ್ಡ್ ನೆರವು ನೀಡದಿದ್ದರೆ ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಸಚಿವ ಡಿ.ಸುಧಾಕರ್ ತಿಳಿಸಿದರು.

ಚಿತ್ರದುರ್ಗ ಬರಪೀಡಿತ ಜಿಲ್ಲೆಯಾಗಿದ್ದು, ಡಿಸಿಸಿ ಬ್ಯಾಂಕ್ ಮೂಲಕ 70300 ರೈತರಿಗೆ ರೂ.700 ಕೋಟಿ ಬೆಳೆ ಸಾಲ ಹಾಗೂ ಕೃಷಿ ಸಾಲ ನೀಡಲಾಗಿದೆ. ಇನ್ನೂ ಹೆಚ್ಚಿನ ರೈತರು ಸಾಲಕ್ಕೆ ಬೇಡಿಕೆ ಇಟ್ಟಿದ್ದಾರೆ. ನಬಾರ್ಡ್ ನೆರವು ದೊರೆತರೆ ಇನ್ನೂ ಹೆಚ್ಚಿನ ರೈತರಿಗೆ ನೆರವು ನೀಡಬಹುದು. ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕುಗಳು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು, ಪಾರದರ್ಶಕತೆ ಹೆಚ್ಚಿನ ಒತ್ತು ನೀಡಬೇಕು. ಇಂದು ಸಹಕಾರ ಕೇವಲ ವ್ಯವಹಾರ ತತ್ವವಾಗಿ ಉಳಿದಿಲ್ಲ. ಬದಲಾಗಿ ಸಹಕಾರ ಎನ್ನುವುದು ಜೀವನ ವಿಧಾನವಾಗಿ ಬದಲಾಗಿದೆ. ರೈತರ ಹಾಗೂ ಗ್ರಾಮೀಣ ಜನರ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಸಹಕಾರ ಚಳುವಳಿ ವಿಶ್ವದಾದ್ಯಂತ ವ್ಯಾಪಿಸಿದೆ. 130 ದೇಶಗಳಲ್ಲಿ 30 ಲಕ್ಷ ಸಹಕಾರಿ ಸಂಘಗಳಿಂದ ಸುಮಾರು 100 ಕೋಟಿಗೂ ಅಧಿಕ ಜನ ಸದಸ್ಯರಿದ್ದಾರೆ. ಭಾರತ ದೇಶದ ಸಹಕಾರಿ ಚಳುವಳಿ ದೊಡ್ಡದು. ರಾಷ್ಟ್ರದಲ್ಲಿ 8.5 ಲಕ್ಷ ಸಹಕಾರಿ ಸಂಸ್ಥೆಗಳು ಇದ್ದು, ಇದರಲ್ಲಿ 31 ಕೋಟಿ ಜನರು ಇದ್ದಾರೆ. ಸಹಕಾರ ತತ್ವದ ಆಚರಣೆ ಬಗ್ಗೆ ಜನ ಜಾಗೃತಿ ಉಂಟುಮಾಡುವ ಉದ್ದೇಶದಿಂದ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ವಿಶ್ವ ಖ್ಯಾತಿ ಪಡೆದ ಫಿಪ್ಕೋ, ಅಮುಲ್, ಕೆ.ಎಂ.ಎಫ್ ನಂತಹ ಸಂಸ್ಥೆಗಳು ದೈತ್ಯವಾಗಿ ಬೆಳದಿವೆ. ಬಡತನ ನಿವಾರಣೆ, ಉದ್ಯೋಗ ಸೃಷ್ಠಿಯಲ್ಲಿ ಹಾಗೂ ರಾಷ್ಟ್ರ ಆರ್ಥಿಕತೆಯನ್ನು ವಿಶ್ವ ಮಟ್ಟಕ್ಕೆ ಏರಿಸುವಲ್ಲಿ ಸಹಕಾರಿ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ 47 ಸಾವಿರ ಸಹಕಾರಿ ಸಂಘಗಳು ಇದ್ದು, ಸುಮಾರು 2.7 ಕೋಟಿ ಜನರು ಇದರಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ ಸಹಕಾರಿ ವ್ಯವಸ್ಥೆಯಲ್ಲಿ ಕೃಷಿ ಪತ್ತಿನ, ಹೈನುಗಾರಿಕೆ, ಸಹಕಾರಿ ಬ್ಯಾಂಕುಗಳು ಗಣನೀಯ ಸಾಧನೆ ಮಾಡಿವೆ. ಅಪೆಕ್ಸ್, ಡಿಸಿಸಿ ಬ್ಯಾಂಕುಗಳು ಸಧೃಡವಾಗಿವೆ. ಸಹಕಾರ ವಲಯದ ಬಗ್ಗೆ ಜನರಿಗೆ ಸಾಕಷ್ಟು ಪ್ರಚಾರ ನೀಡಬೇಕಿದೆ. ಸಹಕಾರ ಸಾಧನೆ ತಿಳಿಸುವ ವ್ಯವಸ್ಥೆ ಆಗಬೇಕು. ರಾಜ್ಯ ಸರ್ಕಾರ ಸಹಕಾರಿ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.

ಸಹಕಾರಿ ಸಪ್ತಾಹದ ಅಂಗವಾಗಿ ಆಯೋಜಿಸಲಾದ ವಸ್ತು ಪ್ರದರ್ಶನ ಮಳಿಗೆಗೆ ಚಾಲನೆ ನೀಡಿ ಮಾತನಾಡಿದ ಸಂಸದ ಎಂ ಗೋವಿಂದ ಕಾರಜೋಳ, ಸಹಕಾರಿ ಬ್ಯಾಂಕುಗಳು ಗ್ರಾಮೀಣ ಕ್ಷೇತ್ರಕ್ಕೂ ತಮ್ಮ ಸೇವೆಯನ್ನು ನೀಡುತ್ತಿವೆ. ಶೂನ್ಯ ಬಡ್ಡಿದರಲ್ಲಿ ರೈತರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಸಹಕಾರಿ ಇಲಾಖೆ ಸ್ಥಾಪಿಸಿ, ಸಹಕಾರಿ ಸಂಸ್ಥೆಗಳಿಗೆ ಹಲವು ಉದ್ದಿಮೆ ಸ್ಥಾಪಿಸಲು ನೆರವು ನೀಡುತ್ತಿದ್ದಾರೆ. ರಾಜ್ಯದ ಸಹಕಾರಿ ಸಂಸ್ಥೆಗಳಲ್ಲಿ ಶೇ.50 ರಷ್ಟು ಮಹಿಳೆಯರನ್ನು ಸದಸ್ಯರನ್ನಾಗಿಸಲು ಪ್ರಯತ್ನ ನಡೆಸಬೇಕು. ರಾಜ್ಯದಲ್ಲಿ ಯಾವುದೇ ಸಹಕಾರಿ ಸಂಸ್ಥೆಗಳು ಮುಚ್ಚುವಂತಾಗಬಾರದು. ಇವುಗಳಿಗೆ ರಾಜ್ಯ ಸರ್ಕಾರದಿಂದ ಅಗತ್ಯ ನೆರವು ನೀಡಿ ಪುನಶ್ಚೇತನಗೊಳಿಸಬೇಕು ಎಂದರು.

ಸಹಕಾರ ವಾರ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಗದಗ ಜಿಲ್ಲೆಯ ಶಿದ್ದನಗೌಡ ಸಂಣರಾಮನಗೌಡ ಪಾಟೀಲ ರಾಜ್ಯದಲ್ಲಿ ದೇಶದಲ್ಲೇ ಪ್ರಥಮ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿ ರಾಜ್ಯದಲ್ಲಿ ಸಹಕಾರ ಕ್ರಾಂತಿ ಮುನ್ನುಡಿ ಬರೆದರು. ಮಹಾತ್ಮ ಗಾಂಧೀಜಿಯವರು ಪ್ರತಿಯೊಂದು ಹಳ್ಳಿಯಲ್ಲೂ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಕನಸು ಹೊಂದಿದ್ದರು. ಭಾರತದ ಆರ್ಥಿಕ ಸ್ವಾತಂತ್ರ್ಯಕ್ಕೆ ಸಹಕಾರವೇ ಹೆಬ್ಬಾಗಿಲು ಎಂದು ಅವರು ಹೇಳಿದರು. ಇನ್ನೂ ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರು ಅವರು ತಮ್ಮ ಪಂಚ ವಾರ್ಷಿಕ ಯೋಜನೆಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಒತ್ತು ನೀಡಿದರು. ಗ್ರಾಮಕ್ಕೊಂದು ಶಾಲೆ, ಪಂಚಾಯಿತಿ ಹಾಗೂ ಸಹಕಾರಿ ಸಂಘ ಇದ್ದಲ್ಲಿ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದರು.

ಪ್ರಪಂಚದಲ್ಲಿ ಮೊದಲ ಬಾರಿಗೆ ಲಂಡನ್ ನಗರದಲ್ಲಿ ರಾರ್ಬಟ್ ಓವನ್ ಎನ್ನುವರು ಕಾರ್ಮಿಕರ ಕಲ್ಯಾಣದ ಹಿತದೃಷ್ಠಿಯಿಂದ ಸಹಕಾರಿ ಚಳುವಳಿ ಪ್ರಾರಂಭಿಸಿದರು. ಇಂದು ಸಹಕಾರಿ ಕ್ಷೇತ್ರ ಹೆಮ್ಮರವಾಗಿ ಬೆಳದಿದೆ. ರಾಜ್ಯದಲ್ಲಿ ಸುಮಾರು 47 ಸಾವಿರ ಸಹಕಾರಿ ಸಂಸ್ಥೆಗಳು ಇದ್ದು, ಇವುಗಳಲ್ಲಿ ಒಟ್ಟು ರೂ. 2 ಲಕ್ಷಕೋಟಿ ಠೇವಣಿ ಹಣವಿದೆ. ಈ ಹಣವನ್ನು ರೈತರಿಗೆ ಸಾಲರ ರೂಪದಲ್ಲಿ ನೀಡಲಾಗುತ್ತಿದೆ. ಮಹಿಳೆಯರು ಸಹ ಆರ್ಥಿಕವಾಗಿ ಸ್ವಾಲಂಬಿಯಾಗಲು ಸಹಕಾರಿ ಕ್ಷೇತ್ರ ಸಂಜೀವಿನಿಯಾಗಿದೆ. ಈ ಹಿಂದೆ ನರ್ಬಾಡ್ ಶೇ.1 ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿತ್ತು. ಸದ್ಯ ಈ ಬಡ್ಡಿದರ ಶೇ.4 ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇದರಿಂದ ಸಹಕಾರಿ ಸಂಘಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಬ್ಯಾಂಕುಗಳ ರಾಷ್ಟ್ರೀಕರಣ, ಉದಾರೀಕರಣ, ಖಾಸಗಿ ಬ್ಯಾಂಕುಗಳ ಲಗ್ಗೆಯ ನಡುವೆಯೂ ಸಹಕಾರಿ ಬ್ಯಾಂಕುಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ನಾಡಿನ ಜನರಿಗೆ ಸೇವೆ ನೀಡುತ್ತಿವೆ. ಸರ್ಕಾರ ಹಸ್ತಕ್ಷೇಪ ಇಲ್ಲದೆಯೇ ಅಮುಲ್ ಹಾಗೂ ಕೆ.ಎಂ.ಎಫ್‍ನಂತಹ ಸಂಸ್ಥೆಗಳು ಲಕ್ಷಾಂತರ ಜನರಿಗೆ ನೆರವು ನೀಡುತ್ತಿವೆ. ದೇಶದಲ್ಲಿ ರಾಜ್ಯದಲ್ಲಿ ಮಾತ್ರ ಸಹಕಾರ ಚಳುವಳಿ ಮತ್ತು ಗ್ರಾಮೀಣಾಭಿವೃದ್ಧಿ ಮೀಸಲಾದ ಏಕಮಾತ್ರ ಕನ್ನಡ ವಾರ ಪತ್ರಿಕೆ ಸಹಕಾರವನ್ನು ಪ್ರಕಟಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿರುವ 6 ಹಿರಿಯ ಸಹಕಾರಿಗಳಿಗೆ ಹಾಗೂ 6 ಸಹಕಾರಿ ಸಂಘಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಚಿದಾನಂದ ಎಂ.ಗೌಡ,  ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳದ ಅಧ್ಯಕ್ಷ ವೆಂಕಟರಾವ್ ನಾಡಗೌಡ, ಸಹಕಾರ ಮಂಡಳಿಯ ನಿರ್ದೇಶಕರಾದ ಎನ್.ಗಂಗಣ್ಣ, ಹೆಚ್.ಮಂಜುನಾಥ್, ಆರ್.ರಾಮರೆಡ್ಡಿ, ಎಸ್.ಆರ್.ಗಿರೀಶ್, ಶಿಮೂಲ್ ನಿರ್ದೇಶಕರಾದ ಜಿ.ಪಿ.ರೇವಣಸಿದ್ದಪ್ಪ, ಸಂಜೀವ್ ಮೂರ್ತಿ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎಂ.ದ್ಯಾಮಣ್ಣ ಕೋಗುಂಡೆ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ಇಲ್ಯಾಸ್ ಉಲ್ಲಾ ಷರೀಫ್, ಸಹಕಾರಿ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್ ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಬಾಹುಬಲಿ ಹಂಜೆ ಸೇರಿದಂತೆ ಇತರೆ ಸಹಕಾರ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರು, ವ್ಯವಸ್ಥಾಪಕರು ಹಾಗೂ ಸದಸ್ಯರು ಭಾಗವಹಿಸಿದ್ದರು.

Advertisement
Tags :
Advertisement