ಇಡ್ಲಿ ಸೀದಿದೆ, ಚಟ್ನಿ ನೀರಾಗಿದೆ, ಉಪ್ಪಿಟ್ಟಿಗೆ ಉಪ್ಪು ಜಾಸ್ತಿಯಿದೆ : ಇಂದಿರಾ ಕ್ಯಾಂಟೀನ್ ನಲ್ಲಿ ರುಚಿ ಹೇಗಿದೆ ? ನಗರ ಸಭೆ ಅಧ್ಯಕ್ಷರ ಭೇಟಿ ವೇಳೆ ಆಗಿದ್ದೇನು?
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 03 : ಇಡ್ಲಿ ಸೀದಿದೆ. ಚಟ್ನಿ ನೀರಾಗಿದೆ, ಉಪ್ಪಿಟ್ಟಿಗೆ ಉಪ್ಪು ಜಾಸ್ತಿಯಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ ಇಂದಿರಾ ಕ್ಯಾಂಟಿನಲ್ಲಿನ ಉಪಹಾರ ಸೇವಿಸಿ ಉವಾಚಿಸಿದ ಪರಿಯಿದು.
ಪ್ರವಾಸಿ ಮಂದಿರದ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್‍ಗೆ ಮಂಗಳವಾರ ಬೆಳಿಗ್ಗೆ ಸುರಿಯುತ್ತಿದ್ದ ಮಳೆಯ ನಡುವೆಯೇ ದಿಢೀರ್ ಭೇಟಿ ನೀಡಿ ಅಲ್ಲಿನ ಉಪಹಾರ ಸೇವಿಸಿ ಶುಚಿ-ರುಚಿ ಗುಣಮಟ್ಟ ಪರಿಶೀಲಿಸಿದ ಅಧ್ಯಕ್ಷೆ ಸುಮಿತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಬಡವರೆ ಹೆಚ್ಚಿನ ಸಂಖ್ಯೆಯಲ್ಲಿ ಇಂದಿರಾ ಕ್ಯಾಂಟೀನ್‍ಗೆ ಬರುವುದರಿಂದ ಕಳಪೆ ತಿಂಡಿ, ಊಟ ನೀಡಿದರೆ ಸಹಿಸುವುದಿಲ್ಲ. ಉಪ್ಪಿಟ್ಟಿಗೆ ಈರುಳ್ಳಿ, ಟಮೋಟೋ, ಹಸಿಮೆಣಸಿನಕಾಯಿ, ಕೊತ್ತಂಬರಿ ಹಾಕಿ ನೀಟಾಗಿ ಮಾಡಿದರೆ ರುಚಿಯಿರುತ್ತದೆ. ಗಂಜಿಯಂತೆ ಮಾಡಿದರೆ ಯಾರು ಇಷ್ಟಪಡುವುದಿಲ್ಲ. ಇಡ್ಲಿ ಚೆನ್ನಾಗಿ ಬೇಯಿಸಿ. ಚಟ್ನಿ ಸ್ವಲ್ಪ ಗಟ್ಟಿಯಿರಲಿ. ಕುಡಿಯುವ ನೀರಿಗೆ ಪ್ಲಾಸ್ಟಿಕ್ ಲೋಟ ಬೇಡ. ಸ್ಟೀಲ್ ಕಪ್ ಇಡಿ. ಸಾಂಬಾರಿಗೆ ಬೇಳೆ ಕಡಿಮೆಯಾದರೂ ಪರವಾಗಿಲ್ಲ. ತರಕಾರಿ ಬಳಸಿ. ಕೈತೊಳೆಯುವ ಜಾಗ ಸ್ವಚ್ಚವಾಗಿರಲಿ ಆವರಣದ ಸುತ್ತೆಲ್ಲಾ ಟೈಲ್ಸ್‍ಗಳನ್ನು ಹಾಕಿಸಿ ಎಂದು ನಗರಸಭೆಯ ಇಂಜಿನಿಯರ್‍ಗಳಿಗೆ ಸೂಚಿಸಿದರು.
ಅಡುಗೆ ಕೋಣೆ ಹಾಗೂ ಪಾತ್ರೆ ಸಾಮಾನುಗಳನ್ನು ತೊಳೆಯುವ ಜಾಗವನ್ನು ವೀಕ್ಷಿಸಿ ಹೈಟೆಕ್ ಸಾಮಗ್ರಿಗಳಿವೆ. ಸರಿಯಾಗಿ ಬಳಸಿಕೊಳ್ಳಿ. ಸಿದ್ದಪಡಿಸಿದ ಉಪಹಾರ ಹಾಗೂ ಊಟವನ್ನು ತೆರೆದಿಡಬೇಡಿ. ಮೇಲೆ ಪ್ಲೇಟ್ ಮುಚ್ಚಬೇಕು. ಬಡವರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್ ತೆರೆದಿದೆ. ಯಾವುದೇ ಲೋಪವಾಗಬಾರದು. ಇಲ್ಲಿಗೆ ಬರುವವರಿಗೆ ಗುಣಮಟ್ಟದ ಆಹಾರ ಸಿಗಬೇಕು ಎಂದು ಅಲ್ಲಿನ ಸಿಬ್ಬಂದಿಗಳಿಗೆ ತಾಕೀತು ಮಾಡಿದರು.
ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕಿನ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್‍ಗೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ವೀಕ್ಷಿಸಿದರು. ಪರಿಸರ ಇಂಜಿನಿಯರ್ ಜಾಫರ್, ಸಹಾಯಕ ಇಂಜಿನಿಯರ್ ಹಮೀದ್, ಆರೋಗ್ಯ ನಿರೀಕ್ಷಕ ನಾಗರಾಜ್ ಈ ಸಂದರ್ಭದಲ್ಲಿದ್ದರು.