ನನ್ನ ರಾಜಕೀಯ ಶಕ್ತಿ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇನೆ : ಶಾಸಕ ಎಂ.ಚಂದ್ರಪ್ಪ ಸವಾಲು
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.29 : ನನ್ನ ಮಗ ಏನು ತಪ್ಪು ಮಾಡಿದ್ದಾ ಅಂತ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಟಿಕೇಟ್ ತಪ್ಪಿಸಿ ಇಂತಹ ಮೋಸ ಮಾಡಿದಿರಿ. ನನ್ನ ರಾಜಕೀಯ ಶಕ್ತಿ ಸಾಮರ್ಥ್ಯ ಏನು ಎನ್ನುವುದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇನೆಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ.ಎಂ.ಚಂದ್ರಪ್ಪ ಸವಾಲು ಹಾಕಿದರು.
ಚಳ್ಳಕೆರೆ ರಸ್ತೆಯಲ್ಲಿರುವ ಎ.ಜೆ.ಕನ್ವೆಂಷನ್ ಹಾಲ್‍ನಲ್ಲಿ ಶುಕ್ರವಾರ ಕರೆಯಲಾಗಿದ್ದ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಉದ್ಗಾಟಿಸಿ ಮಾತನಾಡಿದರು.
2019 ರ ಲೋಕಸಭಾ ಚುನಾವಣೆಯಲ್ಲಿಯೇ ನನ್ನ ಮಗ ಎಂ.ಸಿ.ರಘುಚಂದನ್‍ಗೆ ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೆ. ಆಗ ನನ್ನ ಮನೆಗೆ ಬಂದು ಬಿ.ಎಸ್. ಯಡಿಯೂರಪ್ಪನವರು ಮುಂದಿನ ಸಾರಿ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರಿಂದ ಸುಮ್ಮನಾದೆವು. ಈ ಬಾರಿ ಕೊನೆ ಹಂತದವರೆಗೂ ನನ್ನ ಮಗನ ಹೆಸರಿತ್ತು. ಅಂತಿಮ ಗಳಿಗೆಯಲ್ಲಿ ಗೋವಿಂದ ಕಾರಜೋಳರನ್ನು ಚಿತ್ರದುರ್ಗ ಪಾರ್ಲಿಮೆಂಟ್ ಕ್ಷೇತ್ರದ ಅಭ್ಯರ್ಥಿಯನ್ನಾಗಿ ವರಿಷ್ಠರು ಘೋಷಿಸಿದ್ದಾರೆ. ನಮ್ಮ ಕುಟುಂಬ ರಾಜಕೀಯ ವಿರೋಧಿಗಳಿಗೂ ದ್ರೋಹ ಮಾಡಿಲ್ಲ. ನನ್ನ ಮಗ ಏನು ವಿಷ ಹಾಕಿದ್ದ ಎಂದು ಇಂತಹ ನಂಬಿಕೆ ದ್ರೋಹದ ಕೆಲಸ ಮಾಡಿದ್ದೀರ ಎಂದು ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತ ಡಾ.ಎಂ.ಚಂದ್ರಪ್ಪ ತಮ್ಮ ಮನದಲ್ಲಿರುವ ದುಃಖವನ್ನು ಹೊರ ಹಾಕಿದರು.
ಈ ಬಾರಿಯ ಚುನಾವಣೆಯಲ್ಲಿ ನನ್ನ ಮಗನಿಗೆ ನೂರಕ್ಕೆ ನೂರು ಟಿಕೆಟ್ ಸಿಗುತ್ತದೆಂದು ನಂಬಿದ್ದೆ. ಆದರೆ ನಾನು ಯಾರನ್ನು ನಂಬಿದ್ದೆನೋ ಅವರೆ ನನ್ನ ಕತ್ತು ಕೊಯ್ದರು. ಹಾಗಾಗಿ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಕರೆಯುವಂತ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದೆ. ಇಂತಹ ಸಭೆಯಲ್ಲಿ ಮಾತನಾಡಲು ತುಂಬಾ ನೋವಾಗುತ್ತಿದೆ ಎಂದು ಗದ್ಗದಿತರಾದ ಡಾ.ಎಂ.ಚಂದ್ರಪ್ಪ ವಿಧಾನಸಭೆಯಲ್ಲಿ ಸೋತವರೊಬ್ಬರು ಎಂ.ಎಲ್.ಸಿ.ಯಾಗಲು ನನ್ನ ಬೆಂಬಲ ಬೇಕಿತ್ತು. ಆದರೆ ಈಗ ಪಕ್ಷದ ನಾಯಕರುಗಳಿಗೆ ಚಾಡಿ ಹೇಳಿ ನನ್ನ ಮಗ ಎಂ.ಸಿ.ರಘುಚಂದನ್‍ಗೆ ಟಿಕೇಟ್ ತಪ್ಪಿಸಿದರು. ಮುಂದೆ ಅವರಿಗೂ ಕಾದಿದೆ ಎಂದು ಹೆಸರು ಹೇಳಲಿಚ್ಚಿಸದೆ ವಾಗ್ದಾಳಿ ನಡೆಸಿದರು.
ಮೂವತ್ತು ವರ್ಷಗಳಿಂದಲೂ ರಾಜಕೀಯ ಮಾಡಿಕೊಂಡು ಬರುತ್ತಿದ್ದೇನೆ. 2008 ರಿಂದ ಬಿಜೆಪಿ.ಯಲ್ಲಿ ಮೂರು ಬಾರಿ ಶಾಸಕನಾಗಿ ಸಾರ್ವಜನಿಕರ ನಡುವೆ ಕೆಲಸ ಮಾಡುತ್ತಿದ್ದೇನೆ. ಬಾಣದ ಗುರ್ತಿಗೆ ಐದು ಜಿಲ್ಲೆಯಿಂದ ನಾನೊಬ್ಬನೆ ಶಾಸಕನಾಗಿದ್ದು, ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ.ಯಿಂದ ಹೊರ ಬಂದು ಕೆ.ಜೆ.ಪಿ. ಪಕ್ಷ ಕಟ್ಟಿದಾಗ ಇನ್ನು ಏಳು ತಿಂಗಳು ಅವಧಿಯಿದ್ದಾಗಲೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಅವರ ಬೆನ್ನಿಗೆ ನಿಂತಿದ್ದೆ. ಆ ಕೃತಜ್ಞತೆಯೂ ಅವರಿಗಿಲ್ಲದಂತಾಯಿತು. ರಾಜ್ಯದ ಮುಖ್ಯಮಂತ್ರಿಯಾಗಬೇಕಾದರೆ ಭೋವಿ ಸಮಾಜದ ಗೂಳಿಹಟ್ಟಿ ಡಿ.ಶೇಖರ್, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ ಇವರುಗಳು ನನ್ನ ಮಾತಿಗೆ ಬೆಲೆ ಕೊಟ್ಟು ಬೆಂಬಲಿಸಿದರು. ಭೋವಿ ಸಮಾಜ ಕೊಟ್ಟ ಮಾತಿಗೆ ತಪ್ಪುವವರಲ್ಲ. ಬಿ.ವೈ.ಯಡಿಯೂರಪ್ಪನವರಿಗಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟೆ. ಅಷ್ಟೆ ಅಲ್ಲ. ಅವರಿಗಾಗಿ ಪ್ರಾಣ ಕೊಡಲು ಸಿದ್ದ ಎಂದು ಹೇಳಿದರು.
ಸರ್ವೆ ರಿಪೋರ್ಟ್, ಕಾರ್ಯಕರ್ತರ ಅಭಿಪ್ರಾಯಕ್ಕಾದರೂ ಪಕ್ಷದ ನಾಯಕರುಗಳು ಗೌರವ ಕೊಟ್ಟು ನನ್ನ ಮಗನಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಹುದಿತ್ತು. ಅದನ್ನು ಬಿಟ್ಟು ಐದು ನೂರು ಕಿ.ಮೀ. ದೂರದಿಂದ ಗೋವಿಂದ ಕಾರಜೋಳರನ್ನು ಕರೆಸಿಕೊಳ್ಳುವ ಬಾಧೆ ಏನಿತ್ತು. 2019 ಎಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಕೇಂದ್ರದ ಮಂತ್ರಿಯಾದ ಎ.ನಾರಾಯಣಸ್ವಾಮಿ ಜಿಲ್ಲೆಯಲ್ಲಿ ಎಲ್ಲಿಯಾದರೂ ಸುತ್ತಾಡಿದ್ದಾರಾ. ಯಾರಾದರು ಅವರ ಮುಖ ನೋಡಿದ್ದೀರ ಎಂದು ಸ್ವಾಭಿಮಾನಿ ಕಾರ್ಯಕರ್ತರನ್ನು ಪ್ರಶ್ನಿಸಿದ ಶಾಸಕ ಡಾ.ಎಂ.ಚಂದ್ರಪ್ಪ ಜನಾರ್ಧನರೆಡ್ಡಿ ನನಗೆ ಇಪ್ಪತ್ತೈದು ಕೋಟಿ ರೂ.ಆಸೆ ತೋರಿಸಿದರು. ಸತೀಶ್ ಜಾರಕಿಹೊಳಿ ಕೂಡ ನನಗೆ ಹಣದ ಆಮಿಷ ಹೊಡ್ಡಿದರು. ಎಂತಹ ಸಂದರ್ಭದಲ್ಲೂ ನಾನು ಬಿ.ಎಸ್.ಯಡಿಯೂರಪ್ಪನವರಿಗೆ ಮೋಸ ಮಾಡಲಿಲ್ಲ. ಗೋವಿಂದ ಕಾರಜೋಳ ನಿನಗೆ ನಾಚಿಕೆ ಆಗುತ್ತಿಲ್ವಾ ಇಲ್ಲಿಗೆ ಬಂದು ಸ್ಪರ್ಧಿಸುತ್ತಿದ್ದೀಯ ಎಂದು ಕಿಡಿ ಕಾರಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್‍ನಿಂದ ವಂಚಿತರಾಗಿರುವ ಯುವ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ ಎಂಟತ್ತು ವರ್ಷಗಳಿಂದಲೂ ಬಿಜೆಪಿ.ಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. 2019 ರಲ್ಲಿಯೇ ಚಿತ್ರದುರ್ಗ ಪಾರ್ಲಿಮೆಂಟ್ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಟಿಕೆಟ್ ಕೇಳಿದ್ದೆ. ಆಗ ಬಿ.ಎಸ್.ಯಡಿಯೂರಪ್ಪನವರು ನಮ್ಮ ಮನೆಗೆ ಬಂದು ಈ ಬಾರಿ ಸುಮ್ಮನಿರು ಮುಂದಿನ ಸಲ ಖಂಡಿತ ನಿನಗೆ ಟಿಕೆಟ್ ಕೊಡಿಸುತ್ತೇನೆಂದು ವಾಗ್ದಾನ ಮಾಡಿದ್ದರಿಂದ ನಮ್ಮ ತಂದೆಯವರು ಸುಮ್ಮನಾದರು. ಈ ಬಾರಿ ನನ್ನ ಹೆಸರು ಚರ್ಚೆಯಲ್ಲಿತ್ತು ಕೊನೆ ಗಳಿಗೆಯಲ್ಲಿ ಯಾರದೋ ಒತ್ತಡಕ್ಕೆ ಮಣಿದು ಗೋವಿಂದ ಕಾರಜೋಳರಿಗೆ ಟಿಕೆಟ್ ನೀಡಿದೆ. ಗೂಡು ಕಟ್ಟಲು ಕಾರ್ಯಕರ್ತರು ಬೇಕು? ಸ್ಪರ್ಧಿಸಲು ಮಾತ್ರ ಹೊರಗಿನವರನ್ನು ಕರೆತರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಜಿಲ್ಲೆಯಲ್ಲಿನ ಕೆಲವು ಕಳ್ಳಿನರಸಪ್ಪನಂತಹವರು ನನಗೆ ಟಿಕೆಟ್ ತಪ್ಪಿಸಿದ್ದಾರೆ. ಚುನಾವಣೆ ಬರುತ್ತೆ ಹೋಗುತ್ತೆ. ಕಾರ್ಯಕರ್ತರ ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗಬಾರದು. ನನಗೆ ವಂಚನೆ ಮಾಡಿರಬಹುದು. ಮುಂದೊಂದು ದಿನ ಅವರ ಮಕ್ಕಳಿಗೂ ಇದೆ ಪರಿಸ್ಥಿತಿ ಬರಬಹುದು. ಯಾರಿಗೂ ಮುಜುಗರವಾಗದಂತೆ ನಡೆದುಕೊಂಡು ನನ್ನ ತಂದೆಯವರು ಹಾಗೂ ಕಾರ್ಯಕರ್ತರು ತೆಗೆದುಕೊಳ್ಳುವ ತೀರ್ಮಾನಕ್ಕೆ ತಲೆಬಾಗುವೆ ಎಂದು ನುಡಿದರು.
ಬಿಜೆಪಿ. ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ ಯುವ ಮುಖಂಡ ಎಂ.ಸಿ.ರಘುಚಂದನ್‍ಗೆ ಟಿಕೆಟ್ ಸಿಗದಿರುವುದು ಮನಸ್ಸಿಗೆ ತುಂಬಾ ನೋವಾಗಿದೆ. ಕಳೆದ ಬಾರಿಯೇ ಕೇಳಿದ್ದರು. ಆದರೆ ಕೆಲವರ ಕುತಂತ್ರದಿಂದ ಟಿಕೆಟ್ ಕೈತಪ್ಪಿದೆ ಎಂದು ಹೇಳಿದರು.
ಹೊಳಲ್ಕೆರೆ ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ದುರ್ಗದವರನ್ನು ಕಡೆಗಣಿಸಿ ಹೊರಗಿನ ಗೋವಿಂದ ಕಾರಜೋಳರವರನ್ನು ಕರೆ ತಂದು ಇಲ್ಲಿಂದ ಸ್ಪರ್ಧೆಗಿಳಿಸುವ ಅಗತ್ಯವೇನಿತ್ತು? ಈಗಲು ಚಿತ್ರದುರ್ಗದವರಿಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುತ್ತೇವೆಂದರು.
ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ ಮಾತನಾಡುತ್ತ ಟಿಕೆಟ್ ಕೊಡುತ್ತೇವೆಂದು ಮಾತು ಕೊಟ್ಟು ಕೊನೆಗಳಿಗೆಯಲ್ಲಿ ಎಂ.ಸಿ.ರಘುಚಂದನ್‍ಗೆ ಮೋಸ ಮಾಡಿರುವುದು ಪರಮ ಅನ್ಯಾಯ. ಎಲ್ಲಿಯವರೋ ಬಂದು ಇಲ್ಲಿಂದ ಸ್ಪರ್ಧಿಸಿ ಗೆದ್ದರೆ ಕ್ಷೇತ್ರದ ಜನರ ಕಷ್ಟ-ಸುಖ ಕೇಳುತ್ತಾರಾ. ಸ್ಥಳೀಯರಿಗೆ ಟಿಕೆಟ್ ಕೊಡಿ ಎನ್ನುವುದು ಎಲ್ಲರ ಒಕ್ಕೊರಲ ಅಭಿಪ್ರಾಯ. ಟಿಕೆಟ್ ಸಿಗಲಿಲ್ಲವೆಂದು ಬೇಸರ ಪಟ್ಟುಕೊಳ್ಳುವುದು ಬೇಡ. ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಸಭೆಯಲ್ಲಿ ಸಲಹೆ ನೀಡಿದರು.
ಭರಮಸಾಗರದ ತೀರ್ಥಪ್ಪ, ದೇವರಾಜ್ ಚಿತ್ರಹಳ್ಳಿ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್, ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಬಿಜೆಪಿ.ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್ ಇವರುಗಳು ಮಾತನಾಡಿದರು.
ಡಿ.ಸಿ.ಮೋಹನ್, ದೊರೆಸ್ವಾಮಿ, ನುಲೇನೂರು ಈಶಣ್ಣ, ರುದ್ರಪ್ಪ, ಕೋಗುಂಡೆ ಮಂಜಣ್ಣ, ಚಂದ್ರಶೇಖರ್, ತಿಮ್ಮಣ್ಣ, ರತ್ನಮ್ಮ, ನಂದೀಶ್, ನಗರಸಭೆ ಸದಸ್ಯ ಶಶಿಧರ್, ಮಾಜಿ ಸದಸ್ಯರುಗಳಾದ ಈ.ಮಂಜುನಾಥ್, ರವಿಶಂಕರ್‍ಬಾಬು, ವೆಂಕಟಪ್ಪ, ರಾಮಗಿರಿ ಕುಮಾರಣ್ಣ, ಅಶೋಕ, ಅಂಕಳಪ್ಪ, ಪ್ರಕಾಶ್, ಬಿ.ಎಂ.ಶ್ರೀನಿವಾಸ್, ಮುರುಗೇಶ್ ಇವರುಗಳು ವೇದಿಕೆಯಲ್ಲಿದ್ದರು.